ಬೆಂಗಳೂರು: ಈ ಹಿಂದೆ ಕನ್ನಡ ಭಾಷೆ, ಸಾಹಿತ್ಯ ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ರಕ್ಷಣೆ ಎಂಬ ಪಂಚಸೂತ್ರಗಳನ್ನೊಳಗೊಂಡ ಕನ್ನಡ ಸಾಹಿತ್ಯ ಪರಿಷತ್ತು, ಇದೀಗ ಕನ್ನಡ – ಕನ್ನಡಿಗ – ಕರ್ನಾಟಕ ಎಂಬ ಮೂರು ಹೊಸ ಸೂತ್ರಗಳನ್ನು ಸೇರಿಸುವ ಮೂಲಕ ಅಷ್ಟ ದಿಕ್ಕಿಗೂ ಪಸರಿಸಿ ಜನಸಾಮಾನ್ಯರ ಪರಿಷತ್ತನ್ನಾಗಿಸಲು ಈ ಹೊಸ ಸೂತ್ರಗಳನ್ನು ಸೇರಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “108ನೇ ಸಂಸ್ಥಾಪನಾ ದಿನಾಚರಣೆ” ಹಾಗೂ “ಶತಮಾನೋತ್ಸವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ”ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದಾಗಿನಿಂದ ಇಂದಿನವರೆಗೆ ಬಂದ 25 ಅಧ್ಯಕ್ಷರಾದಿಯಾಗಿ ಎಲ್ಲರೂ ಸ್ವಇಚ್ಛೆಯಿಂದ ಕನ್ನಡ ಸೇವೆ ಮಾಡಿದ್ದಾರೆ. ಕನ್ನಡ ಸೇವೆ ಸಲ್ಲಿಸಿದ ಅನೇಕ ಅಧ್ಯಕ್ಷರುಗಳು ಗೌರವ ಸಂಭಾವನೆಯನ್ನು ಪಡೆಯದೇ ಕಾರ್ಯ ನಿರ್ವಹಿಸಿ, ಪರಿಷತ್ತಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ.
ಇದಕ್ಕೆ ಮಾದರಿಯಾಗಿ ಕಸಾಪದ 21ನೆಯ ಅಧ್ಯಕ್ಷರಾಗಿದ್ದ ಶ್ರೀ ಹರಿಕೃಷ್ಣ ಪುನರೂರು ಅವರೂ ಒಬ್ಬರು. ತಮ್ಮ ಅಧಿಕಾರಾವಧಿಯಲ್ಲಿ ನಾಡಿನಾದ್ಯಂತ ಪ್ರವಾಸ ಮಾಡುವ ಸಂದರ್ಭದಲ್ಲಿ ಕಾರಿನ ಡಿಕ್ಕಿಗಳಲ್ಲಿ ಪುಸ್ತಕಗಳನ್ನು ಇರಿಸಿಕೊಂಡು ಓದುಗರಿಗೆ ಮುಟ್ಟಿಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಶ್ರಮಿಸಿದರೂ, ಪರಿಷತ್ತಿನಿಂದ ಒಂದು ಒಂದೇ ಪೈಸೆ ಗೌರವ ಸಂಭಾವನೆ ಪಡೆದಿರುವುದಿಲ್ಲವೆಂದು ಹಾಗೂ ಕನ್ನಡ ಕಟ್ಟುವ ಕೆಲಸದಲ್ಲಿ ಈ ದಿನ ಶತಮಾನೋತ್ಸವ ದತ್ತಿ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ೨೩ನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಡಾ. ಆರ್. ಕೆ. ನಲ್ಲೂರು ಪ್ರಸಾದ್ ಅವರ ಮಾರ್ಗದರ್ಶನ ಕೂಡ ಇರುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ೨೧ನೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಹರಿಕೃಷ್ಣ ಪುನರೂರು ಅವರು ಡಾ. ಆರ್. ನಲ್ಲೂರು ಪ್ರಸಾದ್ ಅವರಿಗೆ ಶತಮಾನೋತ್ಸವ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಮಕ್ಕಳು ಯಾವುದೇ ಭಾಷೆಯಲ್ಲಿ ಕಲಿಯಲಿ, ಕನ್ನಡವನ್ನು ಓದುವುದು ಹಾಗೂ ಬರೆಯುವದನ್ನು ಮಾತ್ರ ಮರೆಯಬಾರದು, ಕನ್ನಡ ಬೆಳೆಸುವಲ್ಲಿ ಪಾಲಕರದು ಹೆಚ್ಚಿನ ಜವಾಬ್ದಾರಿಯಿದೆ. ಪ್ರಸ್ತುತ ಕನ್ನಡ ಶಾಲೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದುಬಿಟ್ಟಿದೆ. ಕೇರಳದ ಕಾಸರಗೋಡು ಕೈಬಿಟ್ಟು ಹೋಗಿದೆ. ಕೇರಳದ ಕನ್ನಡ ಶಾಲೆಗಳಲ್ಲಿ ಮಲೆಯಾಳಿ ಶಿಕ್ಷಕರನ್ನು ನೇಮಿಸಿದ್ದಾರೆ. ಇದು ಕೇರಳ ಗಡಿಭಾಗದಲ್ಲಿ ಅಷ್ಟೇ ಅಲ್ಲದೇ ನಾಡಿನ ಎಲ್ಲಾ ಗಡಿಭಾಗಗಳ ಸ್ಥಿತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಇದು ಒಂದು ಪವಿತ್ರ ಸಂಸ್ಥೆ, ಮನಸ್ಸು ಮುಟ್ಟಿ ಆತ್ಮತೃಪ್ತಿಯಾಗುವಂತೆ ಇಲ್ಲಿ ಕೆಲಸ ಮಾಡಬೇಕು ಎಂದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಪ್ರೊ. ದೊಡ್ಡರಂಗೇಗೌಡ ಮಾತನಾಡಿ, ಕನ್ನಡ ನಮ್ಮೆಲ್ಲರ ಜೀವನ, ಏಳು ಕೋಟಿ ಜನರ ಹೃದಯ, ಕನ್ನಡಿಗರಿಗೆ ಪರಿಷತ್ತೇ ಮಾತೃಸಂಸ್ಥೆ, ಈ ಮಾತೃಸಂಸ್ಥೆಗೆ ಭವ್ಯ ಇತಿಹಾಸವಿದೆ. ಇಂತಹ ನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಆಡಳಿತದಲ್ಲಿರುವವರು ಈ ಸಂಗತಿಯನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ. ಮಕ್ಕಳಿಗೆ ಕನ್ನಡವೇ ಗೊತ್ತಿರದಿದ್ದರೆ, ಕನ್ನಡ ಹೇಗೆ ಬೆಳೆಯುವುದು, ವಿಧಾನಸೌಧದಲ್ಲಿ ಕನ್ನಡ ಟಿಪ್ಪಣಿಯ ಬದಲಿಗೆ ಆಂಗ್ಲ ಭಾಷೆಯ ಟಿಪ್ಪಣಿಗಳು ಹೊರಡುತ್ತಿವೆ. ಇದನ್ನು ತಡೆಯಲು ಬಾಯಿ ಮಾತಿನಿಂದ ಸಾಧ್ಯವಿಲ್ಲ ಆಂದೋಲನವೇ ನಡೆಯಬೇಕು. ಕನ್ನಡ ಬೆಳೆಸುವಲ್ಲಿ ಪರಿಷತ್ತು ಪುಸ್ತಕ ಸಂಸ್ಕೃತಿಯನ್ನ ಹೆಚ್ಚಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಪುಸ್ತಕ ವಿಮರ್ಶೆ: ಪದಗಳಿಗೆ ನಿಲುಕದ ಭಾವವೇ ಪ್ರೀತಿ