Site icon Vistara News

Karnataka Bandh : ಕಾವೇರಿ ಬಂದ್‌ ಕರೆಗೆ ಕರುನಾಡು ಸ್ತಬ್ಧ; ಅ. 5ಕ್ಕೆ ಕೆಆರ್‌ಎಸ್‌ ಚಲೋ

Karnataka Bandh Major developments

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery Water Dispute) ವಿರುದ್ಧ ಕನ್ನಡ ಪರ ಸಂಘಟನೆಗಳು (Kannada Organizations) ನೀಡಿದ್ದ ಸೆ. 29ರ ಕರ್ನಾಟಕ ಬಂದ್‌ (Karnataka Bandh) ಕರೆಗೆ ರಾಜ್ಯಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯದ ಬಹುತೇಕ ಭಾಗದ ಚಟುವಟಿಕೆಗಳು ಶುಕ್ರವಾರ ಸ್ತಬ್ಧವಾಗಿದ್ದವು. ಈ ನಡುವೆ ಶುಕ್ರವಾರದ ಬಂದ್‌ ಯಶಸ್ಸಿನಿಂದ ಉತ್ತೇಜಿತರಾಗಿರುವ ಕನ್ನಡ ಚಳುವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ (Vatal Nagaraj) ಅವರು ಅಕ್ಟೋಬರ್‌ 5ರಂದು ಕೆಆರ್‌ಎಸ್‌ ಅಣೆಕಟ್ಟಿಗೆ ಮುತ್ತಿಗೆ (KRS Chalo on October 5) ಹಾಕುವುದಾಗಿ ಘೋಷಿಸಿದ್ದಾರೆ.

ಶುಕ್ರವಾರ ಮುಂಜಾನೆಯಿಂದ ರಾಜ್ಯಾದ್ಯಂತ ಜನರು ಬಂದ್‌ಗೆ ಬೆಂಬಲ ಸೂಚಿಸಿದ್ದರು. ಹೆಚ್ಚಿನ ಜಿಲ್ಲೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ತಮ್ಮ ಬೆಂಬಲವನ್ನು ಘೋಷಿಸಿದರು. ಈ ನಡುವೆ, ಕನ್ನಡ ಹೋರಾಟಗಾರರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ದಾಖಲಿಸಿದರು. ಯಾವುದೇ ಬಲವಂತಕ್ಕೆ ಅವಕಾಶವಿಲ್ಲದಂತೆ ಜನರು ತಮ್ಮ ಬೆಂಬಲವನ್ನು ನೀಡಿದರು. ರಾಜ್ಯದ ಯಾವುದೇ ಭಾಗದಲ್ಲಿ ಬಲವಂತದಿಂದ ಮುಚ್ಚಿಸಿದ ಉದಾಹರಣೆ ಕಂಡುಬರಲಿಲ್ಲ.

Shivarajkumar in Karnataka Bandh in film chamber

ರಾಜ್ಯಾದ್ಯಂತ ಹೋಟೆಲ್‌ಗಳು, ಅಂಗಡಿಗಳು, ಮಾಲ್‌, ಥಿಯೇಟರ್‌ಗಳು ಮುಚ್ಚಿದ್ದರೆ ಹೆಚ್ಚಿನ ಊರುಗಳಲ್ಲಿ ವಾಹನ ಸಂಚಾರ ಸ್ತಬ್ಧವಾಗಿತ್ತು. ಹಲವಾರು ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜನರು ಮೊದಲೇ ಬಂದ್‌ಗೆ ನಿರ್ಧಾರ ಮಾಡಿದ್ದರಿಂದ ಎಲ್ಲೂ ಸಮಸ್ಯೆಯಾಗಲಿಲ್ಲ.

ಪೂರ್ಣ ಬಂದ್‌ ನಡೆದ ಜಿಲ್ಲೆಗಳು: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಾಮರಾಜ ನಗರ, ಚಿತ್ರದುರ್ಗ, ತುಮಕೂರು, ವಿಜಯ ನಗರ ಜಿಲ್ಲೆಗಳಲ್ಲಿ ಬಹುತೇಕ ಪೂರ್ಣ ಬಂದ್‌ ಆಚರಿಸಲಾಗಿದೆ.

ಭಾಗಶಃ ಬಂದ್‌ ನಡೆದ ಜಿಲ್ಲೆಗಳು: ಕಲಬುರಗಿ, ಶಿವಮೊಗ್ಗ, ಯಾದಗಿರಿ, ಗದಗ. ಹುಬ್ಬಳ್ಳಿ, ಚಿಕ್ಕೋಡಿ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಬೀದರ್‌, ವಿಜಯಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪೂರ್ಣ ಬಂದ್‌ ಆಗದೆ ಇದ್ದರೂ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆದವು, ಜನರೂ ಬೆಂಬಲ ನೀಡಿದರು.

ಹೆಚ್ಚು ಸ್ಪಂದನೆ ಇಲ್ಲದ ಜಿಲ್ಲೆಗಳು: ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಂದ್‌ಗೆ ಹೆಚ್ಚಿನ ಸ್ಪಂದನೆ ದೊರೆಯಲಿಲ್ಲ.

ಬೆಂಗಳೂರಿನಲ್ಲಿ ವಾಟಾಳ್‌ ಸೇರಿ ಪ್ರಮುಖ ನಾಯಕರು ವಶಕ್ಕೆ

ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಮೊದಲೇ ಪೊಲೀಸ್‌ ಇಲಾಖೆ ಸೂಚನೆ ನೀಡಿತ್ತು. ಮತ್ತು ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಹೋರಾಟಗಾರರು ಬೆಂಗಳೂರಿನ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಟೌನ್‌ ಹಾಲ್‌ ಬಳಿ ಬಂದ ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌, ಕರವೇ ನಾಯಕ ಪ್ರವೀಣ್‌ ಶೆಟ್ಟಿ ಸೇರಿದಂತೆ ಎಲ್ಲ ನಾಯಕರನ್ನು ವಶಕ್ಕೆ ಪಡೆದು ಫ್ರೀಡಂ ಪಾರ್ಕ್‌ಗೆ ಕರೆದೊಯ್ದರು. ನಾಯಕರ ಬಂಧನದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ವಾಟಾಳ್‌ ನಾಗರಾಜ್‌ ಅವರು ಬುರ್ಕಾ ಹಾಕಿ ಬಿಂದಿಗೆ ಹಿಡಿದು ಪ್ರತ್ಯಕ್ಷರಾಗಿದ್ದು ವಿಶೇಷವಾಗಿತ್ತು.

Shivarajkumar in Karnataka Bandh in film chamber

ಕನ್ನಡ ಹೋರಾಟಗಾರರದೇ ಪಾರುಪತ್ಯ; ಬಿಜೆಪಿ-ಜೆಡಿಎಸ್‌ ದೂರ

ಈ ಬಂದ್‌ನ ಸಂಪೂರ್ಣ ಸಾರಥ್ಯವನ್ನು ಕನ್ನಡ ಹೋರಾಟಗಾರರು ಮತ್ತು ಮಂಡ್ಯದಲ್ಲಿ ರೈತರು ವಹಿಸಿದ್ದರು. ಎಲ್ಲೆಲ್ಲಿ ಸಂಘಟನೆ ಬಲವಾಗಿದೆಯೋ ಅಲ್ಲಿ ಬಂದ್‌ ಸಂಪೂರ್ಣ ಸಫಲವಾಯಿತು. ಈ ಬಂದ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರು ಎಲ್ಲೂ ಕಾಣಿಸಿಕೊಳ್ಳಲಿಲ್ಲ.

ಮೈಸೂರು-ಬೆಂಗಳೂರು ಹೆದ್ದಾರಿ ತಡೆ ಯತ್ನ ವಿಫಲ

ಪ್ರತಿಭಟನಾಕಾರರು ಪ್ರಮುಖವಾಗಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಬಂದ್‌ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಸ್ವತಃ ಮಂಡ್ಯ ಎಸ್‌ಪಿಯವರೇ ಮುಂದೆ ನಿಂತು ಈ ಪ್ರಯತ್ನವನ್ನು ವಿಫಲಗೊಳಿಸಿದರು. ಉಳಿದಂತೆ ಯಾವುದೇ ಭಾಗದಲ್ಲಿ ರಸ್ತೆ ತಡೆ ಮೊದಲಾದ ಸಮಸ್ಯೆಗಳು ಕಂಡುಬರಲಿಲ್ಲ.

ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ರಾಜ್ಯಾದ್ಯಂತ ಕೆಎಸ್‌ಆರ್ಟಿಸಿ ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಆದರೆ, ಹೆಚ್ಚಿನ ಜಿಲ್ಲೆಗಳಲ್ಲಿ ಪ್ರಯಾಣಿಕರ ಕೊರತೆ ಕಾಡಿತು. ಮೆಟ್ರೋ ರೈಲಿನಲ್ಲೂ ಅದೇ ಸಮಸ್ಯೆ. ವಿಮಾನ ಪ್ರಯಾಣಿಕರು ಬಂದ್‌ನ ನಿಮಿತ್ತ ಪ್ರಯಾಣ ಮುಂದೂಡಿದ್ದರಿಂದ ಸುಮಾರು 44 ವಿಮಾನಗಳ ಸಂಚಾರವನ್ನು ಕ್ಯಾನ್ಸಲ್‌ ಮಾಡಲಾಯಿತು.

ಹೋರಾಟಕ್ಕೆ ಬೆಂಬಲವಾಗಿ ನಿಂತ ಕನ್ನಡ ಚಿತ್ರರಂಗ

Shivarajkumar in Karnataka Bandh in film chamber

ಕನ್ನಡ ಚಿತ್ರರಂಗ ಬಂದ್‌ಗೆ ಬೆಂಬಲವಾಗಿ ನಿಂತಿತು. ಹಿರಿಯ ನಟ ಶಿವರಾಜ್‌ ಕುಮಾರ್‌ ನೇತೃತ್ವದಲ್ಲಿ ದರ್ಶನ್‌, ಉಪೇಂದ್ರ ಸೇರಿದಂತೆ ಎಲ್ಲ ನಟರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸುದೀಪ್‌, ಯಶ್‌ ಚಿತ್ರೀಕರಣದ ನಿಮಿತ್ತ ಹೊರಗಿದ್ದರು. ಈ ವೇಳೆ ಮಾತನಾಡಿದ ಶಿವರಾಜ್‌ ಕುಮಾರ್‌ ಅವರು ಚಿತ್ರರಂಗ ಯಾವತ್ತೂ ಕಾವೇರಿ ಹೋರಾಟದಲ್ಲಿ ಇರುತ್ತದೆ. ನಾವು ಬಂದಿಲ್ಲ ಎಂದು ದೂರಬೇಡಿ ಎಂದರು.

ಇದನ್ನೂ ಓದಿ : Karnataka Bandh : ಚಿತ್ರರಂಗವನ್ನು ದೂರಬೇಡಿ, ನಾವಿಲ್ಲಿ ನಿಂತರೆ ಸಮಸ್ಯೆ ಬಗೆಹರಿಯುತ್ತಾ? ಶಿವರಾಜಕುಮಾರ್

ಕೆಆರ್‌ಎಸ್‌ಗೆ ಮುತ್ತಿಗೆ ಅಕ್ಟೋಬರ್‌ ಐದರಂದು

ಸೆ. 29ರ ಬಂದ್‌ನಿಂದ ಉತ್ತೇಜಿತರಾದ ಕನ್ನಡ ಹೋರಾಟಗಾರರು ಇದೀಗ ಅಕ್ಟೋಬರ್‌ 5ರಂದು ಕೆಆರ್‌ಎಸ್‌ಗೆ ಮುತ್ತಿಗೆ ಹಾಕುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಅಂದು 22 ಸಾವಿರ ವಾಹನಗಳ ಮೂಲಕ ಕೆಆರ್‌ಎಸ್‌ ಚಲೋ ಮಾಡುವುದಾಗಿ ಪ್ರಕಟಿಸಿದರು.

Exit mobile version