Site icon Vistara News

Karnataka Bandh : KSRTC, BMTC ಬಸ್‌ ಬಂದ್‌ ಇಲ್ಲ; ನೌಕರರು ಕಡ್ಡಾಯವಾಗಿ ಡ್ಯೂಟಿಗೆ ಬರಲೇಬೇಕು!

KSRTC and BMTC service will be available on Sep 29 Karnataka Bandh day

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ (Cauvery Water Dispute) ಕನ್ನಡಪರ ಸಂಘಟನೆಗಳು (Kannada Organizations) ಕರೆ ನೀಡಿರುವ ಸೆ. 29ರ ಕರ್ನಾಟಕ ಬಂದ್‌ಗೆ (Karnataka Bandh) ಎಲ್ಲ ಕಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಆದರೆ, ರಾಜ್ಯದ ಜೀವನಾಡಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC Buses) ಹಾಗೂ ಬೆಂಗಳೂರಿನ ಬಿಎಂಟಿಸಿ ಬಸ್‌ಗಳು (BMTC Buses) ಎಂದಿನಂತೆ ಸಂಚರಿಸಲಿವೆ ಎಂದು ತಿಳಿದುಬಂದಿದೆ.

ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗಳು ಬಸ್‌ ಸೇವೆಗೆ ಮುಂದಾಗಿವೆ! ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸಂಸ್ಥೆಗಳು ಸೂಚನೆ ನೀಡಿವೆ.

ವಾರದ ರಜೆ, ದೀರ್ಘಾವಧಿ ರಜೆಯಲ್ಲಿರುವ ನೌಕರರು ಹೊರತುಪಡಿಸಿ ಉಳಿದ ಎಲ್ಲ ನೌಕರರು ಶುಕ್ರವಾರ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು, ಅನಗತ್ಯವಾಗಿ ರಜೆ ಹಾಕಿಕೊಂಡರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನೌಕರರಿಗೆ ಸಾರಿಗೆ ನಿಗಮಗಳಿಂದ ಮೌಖಿಕ ಸೂಚನೆ ಬಂದಿದೆ ಎಂದು ಹೇಳಲಾಗಿದೆ.

ಸಾರಿಗೆ ನಿಗಮಗಳು ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದರಿಂದ ಜನರಿಗೆ ಸೇವೆ ನೀಡಬೇಕು. ನೌಕರರು ಯಾರೂ ಕೂಡಾ ಕರ್ನಾಟಕ ಬಂದ್‌ನಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಕೆಲಸಕ್ಕೆ ಬರದೇ ಬಂದ್‌ನಲ್ಲಿ ಭಾಗಿಯಾದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ.

ಡಿಪೋ ಮ್ಯಾನೇಜರ್‌ಗಳು ಕಡ್ಡಾಯವಾಗಿ ಡಿಪೋದಲ್ಲಿದ್ದು ಬಸ್ ಕಾರ್ಯಚರಣೆ ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ. ಇದೇ ಬೇರೆ ನಿಗಮಗಳು ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ ಎಂದು ಹೇಳಲಾಗಿದೆ.

ಭದ್ರತೆ ಒದಗಿಸಲು ಕೋರಿಕೆ, ಜನ ಬರ್ತಾರಾ?

ಈ ನಡುವೆ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿಗಮಗಳು ಎಲ್ಲ ಡಿಪೋಗಳು ಮತ್ತು ಬಸ್‌ ನಿಲ್ದಾಣಗಳಲ್ಲಿ ಪೊಲೀಸ್‌ ಭದ್ರತೆ ಒದಗಿಸುವಂತೆ ಮನವಿ ಮಾಡಿದೆ. ಅದರ ಜತೆಗೆ ಬಸ್‌ಗಳ ಜತೆಗೂ ಅಗತ್ಯ ಬಿದ್ದರೆ ಭದ್ರತಾ ಕಾವಲು ನೀಡಬೇಕು ಎಂದು ಮನವಿ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಬಿ. ದಯಾನಂದ್‌ ಅವರು ಭದ್ರತೆ ನೀಡುವುದಾಗಿಯೂ ಹೇಳಿದ್ದಾರೆ.

ಆದರೆ, ಬಸ್‌ಗಳ ಓಡಾಟ ಇದ್ದರೂ ಜನರು ಪ್ರಯಾಣ ಮಾಡುವುದು ಸಂಶಯ ಎನ್ನಲಾಗುತ್ತಿದೆ. ಕಳೆದ ಸೆ. 26ರ ಬಂದ್‌ ಸಂದರ್ಭದಲ್ಲೂ ಕೆಎಸ್‌ಆರ್‌ಸಿ ಮತ್ತು ಬಿಎಂಟಿಸಿ ಬಸ್‌ಗಳು ಓಡಾಡಿದ್ದವು. ಆದರೆ, ಪ್ರಯಾಣಿಕರೇ ಇರಲಿಲ್ಲ.

ದಕ್ಷಿಣ ಕನ್ನಡದಲ್ಲಿ ಖಾಸಗಿ ಬಸ್‌ಗಳ ಸಂಚಾರ ಯಥಾಸ್ಥಿತಿ

ಈ ನಡುವೆ ಖಾಸಗಿ ಬಸ್‌ಗಳ ಪಾರಮ್ಯ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಬಸ್‌ಗಳ ಬೆಂಬಲ ಸಿಕ್ಕಿಲ್ಲ. ದಕ್ಷಿಣ ಕನ್ನಡದಲ್ಲಿ ಖಾಸಗಿ ಸಿಟಿ ಬಸ್‌, ಸರ್ವೀಸ್‌ ಬಸ್‌ ಸಂಚಾರ ನಡೆಸಲಿವೆ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಮುಖಂಡ ದಿಲ್‌ ರಾಜ್‌ ಆಳ್ವ ಹೇಳಿದ್ದಾರೆ. ನಾವು ನೈತಿಕವಾಗಿ ಬೆಂಬಲ ಕೊಡುತ್ತೇವೆ. ಆದರೆ, ಯಾವುದೇ ಪ್ರತಿಭಟನೆ ಮಾಡುವುದಿಲ್ಲ. ಈ ಹಿಂದೆ ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಬಂದ್‌ ಕರೆ ಕೊಟ್ಟಾಗ ಬೇರೆ ಭಾಗದವರು ಸ್ಪಂದಿಸಿಲ್ಲ ಎಂದು ಅವರು ನೆನಪಿಸಿದ್ದಾರೆ.

ಒಂದು ದಿನ ಮೊದಲೇ ತಮಿಳುನಾಡು ವಾಹನ ಸ್ತಬ್ಧ

ಈ ನಡುವೆ, ತಮಿಳುನಾಡಿನ ಬಹುತೇಕ ಎಲ್ಲ ವಾಹನಗಳು ಒಂದು ದಿನ ಮೊದಲೇ ತಮ್ಮ ಸಂಚಾರವನ್ನು ನಿಲ್ಲಿಸಿವೆ. ಹೆಚ್ಚಿನ ಬಸ್‌ ಮತ್ತು ಇತರ ವಾಹನಗಳು ಗಡಿಯವರೆಗೆ ಮಾತ್ರ ಸಂಚಸುತ್ತಿವೆ. ತಮಿಳುನಾಡು ಸಾರಿಗೆ ಸಂಸ್ಥೆಯು ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಕಡೆಗೆ ಹೋಗದಂತೆ ಸೂಚನೆ ನೀಡಿವೆ.

ತಮಿಳುನಾಡು ನೋಂದಣಿಯ ಎಲ್ಲಾ ವಾಹನಗಳು ರಾಜ್ಯ ಗಡಿಯಲ್ಲಿ ನಿಲ್ಲುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ನಿತ್ಯ ತಮಿಳುನಾಡಿನಿಂದ ಬೆಂಗಳೂರಿಗೆ ಹೂ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜು ಮಾಡುವ ವಾಹನಗಳು ಗುರುವಾರ ಬೆಂಗಳೂರಿಗೆ ಬಂದಿಲ್ಲ.

KSRTC bus
Exit mobile version