ಬೆಂಗಳೂರು: ಕಾವೇರಿ ನೀರು ಬಿಡುಗಡೆ ವಿರುದ್ಧ (Cauvery water Dispute) ಕನ್ನಡ ಪರ ಸಂಘಟನೆಗಳ ಒಕ್ಕೂಟ ನೀಡಿರುವ ಕರ್ನಾಟಕ ಬಂದ್‌ನ (Karnataka Bandh) ಭಾಗವಾಗಿ ಬೆಂಗಳೂರಿನ ಟೌನ್ ಹಾಲ್ (Town hall at Bangalore) ಬಳಿ ಪ್ರತಿಭಟನೆ ನಡೆಸಲು ಮುಂದಾದ ಹೋರಾಟಗಾರರನ್ನು ಪೊಲೀಸರು (Police detain protesters) ಅಲ್ಲಿ ಒಂದು ಕ್ಷಣವೂ ನಿಲ್ಲಲು ಬಿಡದೆ ಬಂಧಿಸುತ್ತಿದ್ದಾರೆ. ಅಲ್ಲಿಂದ ಅವರನ್ನು ನೇರವಾಗಿ ಫ್ರೀಡಂ ಪಾರ್ಕ್‌ಗೆ ಕರೆದೊಯ್ಯಲಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯ (Karnataka Rakshana Vedike) ಪ್ರವೀಣ್ ಶೆಟ್ಟಿ ಸೇರಿದಂತೆ ಹಲವು ನಾಯಕರೂ ಪೊಲೀಸರ ವಶವಾಗಿದ್ದಾರೆ. ಪೊಲೀಸರ ಈ ವರ್ತನೆಯನ್ನು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಎಂದು ಸಂಘಟನೆಗಳು ವ್ಯಾಖ್ಯಾನಿಸಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹೋರಾಟಗಾರರು ಟೌನ್ ಹಾಲ್ ಬಳಿ ಒಂದು ಸಭೆ ನಡೆಸಿ ಅಲ್ಲಿಂದ ಫ್ರೀಡಂ ಪಾರ್ಕ್‌ಗೆ ಮೆರವಣಿಗೆ ನಡೆಸುವ ಉದ್ದೇಶವನ್ನು ಹೊಂದಿದ್ದಾರೆ. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡುತ್ತಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ನೂರಾರು ಪೊಲೀಸರು ಇಲ್ಲಿ ನೆರೆದಿದ್ದು ಪ್ರತಿಭಟನಾಕಾರರು ಬರುತ್ತಿದ್ದಂತೆಯೇ ಅವರನ್ನು ವಶಕ್ಕೆ ಪಡೆಯಲಾಗುತ್ತಿದೆ. ಅವರನ್ನು ಪೊಲೀಸ್ ವ್ಯಾನ್, ಬಸ್ ಮತ್ತು ಅದಕ್ಕೆಂದೇ ನಿಯೋಜಿಸಲಾದ ಸರ್ಕಾರಿ ಬಸ್‌ಗಳಲ್ಲಿ ತುಂಬಿ ಕಳುಹಿಸಲಾಗುತ್ತಿದೆ.
ಕೆಲವು ಪ್ರತಿಭನಾಕಾರರು ಬೈಕ್ ಮೂಲಕ ಬಂದು ಬೈಕ್ ರ‍್ಯಾಲಿ ನಡೆಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ಅವರ ಬೈಕ್‌ಗಳನ್ನೇ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟವೂ ನಡೆಯಿತು.
ಪೊರಕೆ ಬಿಂದಿಗೆ ಹಿಡಿದು ಪ್ರತಿಭಟನೆ
ಕನ್ನಡ ಪರ ಸಂಘಟನೆಗಳ ಒಂದು ಗುಂಪು ತೆರೆದ ವಾಹನದಲ್ಲಿ ಪ್ರತಿಭಟನೆಗಾಗಿ ಆಗಮಿಸಿತ್ತು. ಕೈಯಲ್ಲಿ ಪೊರಕೆ, ಬಿಂದಿಗೆ ಹಿಡಿದುಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿತು. ಈ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಇತ್ತ ಫ್ರೀಡಂ ಪಾರ್ಕ್‌ನಲ್ಲೂ ಬಗೆ ಬಗೆಯ ಪ್ರತಿಭಟನೆ ನಡೆಯುತ್ತಿದೆ. ಕನ್ನಡ ಪರ ಸಂಘಟನೆಯ ಚೇತನ್ ಕನ್ನಡಿ ಎಂಬವರು ಬಿಸ್ಲರಿ ಸ್ನಾನ ಮಾಡಿ ಉರುಳು ಸೇವೆ ಮಾಡಿದರು.
ನಾವೇನೂ ಡಕಾಯಿತರಲ್ಲ ಎಂದ ಕರವೇ ಪ್ರವೀಣ್ ಶೆಟ್ಟಿ
ಈ ನಡುವೆ ಪ್ರತಿಭಟನೆಗೆ ತೆರಳುವ ಮುನ್ನ ಆರ್‌ಟಿ ನಗರದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ನಮ್ಮ ಮೇಲೆ ಸರ್ಕಾರ ಕಣ್ಣಿಟ್ಟಿದೆ, ಹೋರಾಟ ಕೈಬಿಡುವಂತೆ ಒತ್ತಡ ಹಾಕುತ್ತಿದೆ, ನಮ್ಮ ಮನೆಗಳಿಗೆ ನೋಟಿಸ್ ಅಂಟಿಸಲಾಗುತ್ತಿದೆ ಎಂದು ಹೇಳಿದರು.
ʻʻನಮ್ಮನ್ನ ಹಗಲು ರಾತ್ರಿ ಕಾಯಲು ನಾವೇನೂ ಡಕಾಯಿತರಲ್ಲ. ಎಲ್ಲೂ ಮುತ್ತಿಗೆ ಹಾಕಿಲ್ಲ. ರಾಜಕಾರಣಗಳ ತರ ನಾವು ಗಲಾಟೆ ಮಾಡ್ತಿಲ್ಲ. ಈಗಲೂ ನೀವು ನೀರು ಬಿಡುವುದನ್ನು ನಿಲ್ಲಿಸಿ. ನಾವು ಈಗಲೇ ಹೋರಾಟ ಕೈ ಬಿಡುತ್ತೇವೆʼʼ ಎಂದು ಹೇಳಿದರು.
ʻʻಕನ್ನಡ ಹೋರಾಟಗಾರಿಗೆ ಒತ್ತಡ ಹಾಕಲಾಗುತ್ತಿದೆ. ಹೀಗೆ ಮಾಡಿದ್ರೆ ಜನಪರ ಹೋರಾಟ ಮುಂದೆ ಹೇಗೆ ನಡೆಯುತ್ತದೆ.? ನಮಗೂ ಕುಟುಂಬಗಳಿವೆ. ಕಾವೇರಿ ಬಗೆಗೆ ಜನರಿಗೆ ಪ್ರೀತಿ ಇದೆ. ಈ ಕಾರಣಕ್ಕಾಗಿ ಹೋರಾಟ ಜೋರಾಗಿ ನಡೆಯುತ್ತಿದೆ. ಯಾವುದೇ ತೊಂದರೆ ಕೊಡದೇ ಹೋರಾಟಕ್ಕೆ ಅವಕಾಶ ಕೊಡಬೇಕು. ಹೋರಾಟವನ್ನು ಹತ್ತಿಕ್ಕಬಾರದುʼʼ ಎಂದು ಅವರು ಆಗ್ರಹಿಸಿದರು.