ಬೆಂಗಳೂರು: ಸೆ. 29ರಂದು ನಡೆಯಲಿರುವ ಕರ್ನಾಟಕ ಬಂದ್ (Karnataka Bandh) ವೇಳೆ ಶಾಲೆ, ಕಾಲೇಜುಗಳು (School and Colleges) ಇರುತ್ತವಾ ಎನ್ನುವುದು ಅತಿ ಮುಖ್ಯ ಪ್ರಶ್ನೆ. ರಾಜ್ಯದ ಬಹುತೇಕ ಎಲ್ಲ ವಿವಿಗಳು ಸೆ. 29ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಂದೂಡಿವೆ. ಆದರೆ, ರೆಗ್ಯುಲರ್ ತರಗತಿಗಳನ್ನು ನಡೆಸುವ ನಿಟ್ಟಿನಲ್ಲಿ ಇನ್ನೂ ನಿರ್ಧಾರ ಆಗಿಲ್ಲ. ಈ ನಡುವೆ, ಶಾಲೆ, ಕಾಲೇಜುಗಳಿಗೆ ರಜೆ ಕೊಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.
ಶಿಕ್ಷಣ ಇಲಾಖೆ (Education department) ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡು ರಜೆ ಕೊಡಬೇಕೋ, ಬೇಡವೋ ಎಂಬ ನಿರ್ಧಾರವನ್ನು ಆಯಾ ಜಿಲ್ಲಾಧಿಕಾರಿಗಳು (District administration) ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.
ಇಡೀ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದರೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಂದ್ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಹೀಗಾಗಿ ಇಡೀ ರಾಜ್ಯಕ್ಕೆ ಆಗುವ ತೀರ್ಮಾನವನ್ನು ಪ್ರಕಟಿಸುವ ಅಗತ್ಯವಿಲ್ಲ ಎಂದು ಮನಗಂಡು ಜಿಲ್ಲಾವಾರು ತೀರ್ಮಾನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಇದೇ ವೇಳೆ, ಶಾಲೆಗಳ ಒಕ್ಕೂಟಗಳು ಬಂದ್‌ಗೆ ನೈತಿಕ ಬೆಂಬಲ ನೀಡಿವೆಯಾದರೂ ರಜೆ ನೀಡುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳೇ ತೀರ್ಮಾನ ತೆಗೆದುಕೊಳ್ಳಲಿ ಎಂದು ಹೇಳಿವೆ.
ನೈತಿಕ ಬೆಂಬಲ ನೀಡಿದ ರುಪ್ಸಾ ಸಂಘಟನೆ
ಖಾಸಗಿ ಶಾಲೆಗಳ ಒಕ್ಕೂಟವಾಗಿರುವ ರುಪ್ಸಾ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದೆ ಎಂದು ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು. ಆದರೆ, ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿ ರಜೆ ನಿರ್ಧಾರ ಮಾಡಲು ಸೂಚಿಸಲಾಗಿದೆ ಎಂದರು.
ಬಂದ್ ಗೆ ಖಾಸಗಿ ಶಾಲಾ ಒಕ್ಕೂಟ ನೈತಿಕ ಬೆಂಬಲ ಕೊಟ್ಟಿದೆ. ಶಾಲೆಗೆ ರಜೆ ಕೊಡುವುದರ ಬಗ್ಗೆ ಅಯಾ ಜಿಲ್ಲೆಯ ಮುಖಂಡರು ಹಾಗೂ ಶಾಲಾ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಲೋಕೇಶ್ ತಾಳಿಕಟ್ಟೆ ಹೇಳಿದರು.
ಇದನ್ನೂ ಓದಿ : Karnataka Bandh : KSRTC, BMTC ಬಸ್ ಬಂದ್ ಇಲ್ಲ; ನೌಕರರು ಕಡ್ಡಾಯವಾಗಿ ಡ್ಯೂಟಿಗೆ ಬರಲೇಬೇಕು!
ಬಂದ್‌ಗೆ ಕ್ಯಾಮ್ಸ್ ಬೆಂಬಲ, ಸಾಲು ಸಾಲು ರಜೆಗೆ ಕಳವಳ
ಕರ್ನಾಟಕ ಬಂದ್‌ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ -ಕಾಮ್ಸ್ ನೈತಿಕ ಬೆಂಬಲ ನೀಡಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಕೊಡಲು ಸರ್ಕಾರಕ್ಕೆ ಮನವಿ ಮಾಡಿರುವ ಕಾಮ್ಸ್ ಅಧ್ಯಕ್ಷ ಶಶಿಕುಮಾರ್ ಅವರು ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ ರಜೆ ಘೋಷಣೆ ಮಾಡಲು ಮನವಿ ಮಾಡಿದ್ದಾರೆ.
ಒಂದೆಡೆ ಬಂದ್‌ಗೆ ನೈತಿಕ ಬೆಂಬಲ ಘೋಷಿಸುತ್ತಲೇ ಇನ್ನೊಂದೆಡೆ ಸಾಲು ಸಾಲು ರಜೆ ಬಗ್ಗೆ ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಪರೀಕ್ಷಾ ಸಮಯದಲ್ಲೇ ಈ ರೀತಿಯ ಸಾಲು ಸಾಲು ರಜೆಯಿಂದ ಸಮಸ್ಯೆಯಾಗುತ್ತಿದೆ ಎಂದು ಅದು ಹೇಳಿದೆ.