Site icon Vistara News

ಯಾರ‍್ರೀ ಈ ವಾಟಾಳ್‌ ನಾಗರಾಜ್?‌ ಅವರು ಹೇಳಿದ್ರೂಂತ ನಾವ್ಯಾಕೆ ಬಂದ್‌ ಮಾಡ್ಬೇಕು?

Vatal Nagaraj life story

ಬೆಂಗಳೂರು: ಯಾರ‍್ರೀ ಈ ವಾಟಾಳ್‌ ನಾಗರಾಜ್‌ (Vatal Nagaraj), ಅವರು ಕರೆ ಕೊಟ್ಟ ಕೂಡಲೇ ನಾವೆಲ್ಲ ಯಾಕ್ರೀ ಬಂದ್‌ ಮಾಡ್ಬೇಕು? ಅವರೇನು ಪ್ರೈಮ್‌ ಮಿನಿಸ್ಟ್ರಾ? ಚೀಫ್‌ ಮಿನಿಸ್ಟ್ರಾ? ವಾಟ್‌ ಈಸ್‌ ಹೀ?- ಹೀಗೊಂದು ಪ್ರಶ್ನೆ ಹೊಸ ಜಮಾನಾದ ಹುಡುಗರಲ್ಲಿ ಸಹಜವಾಗಿಯೇ ಹುಟ್ಟೀತು. ಇದು ನಿಜವೂ ಹೌದು. ಯಾಕೆಂದರೆ ಸದಾ ಕಣ್ಣಿಗೆ ಕನ್ನಡಕ ಹಾಕಿಕೊಂಡಿರುವ, ಟೋಪಿಯನ್ನು ಎಂದೂ ತೆಗೆಯದ, ಚಿತ್ರ ವಿಚಿತ್ರವಾಗಿ ಆಡುವ, ಆಗಾಗ ಬಂದ್‌.. ಬಂದ್‌.. ಬಂದ್‌ ಎನ್ನುವ, ಕತ್ತೆ ಮೇಲೆ ಮೆರವಣಿಗೆ ಮಾಡುವ, ರಸ್ತೆಯಲ್ಲೇ ಉರುಳಾಡುವ ಈ ವ್ಯಕ್ತಿ ಹೇಳಿದ ಕೂಡಲೇ ಯಾಕೆ ನಾವೆಲ್ಲ ಎಲ್ಲಾ ಮುಚ್ಕೊಂಡು ಮನೆಯಲ್ಲಿರಬೇಕು ಎನ್ನುವ ಪ್ರಶ್ನೆ ಸಹಜವೇ!

ಇಂಥ ಪ್ರಶ್ನೆಗಳು ಯಾರಿಗಾದರೂ ಇದ್ದರೆ ಈ ವ್ಯಕ್ತಿಯ ಹಿನ್ನೆಲೆಯನ್ನೊಮ್ಮೆ ಸಣ್ಣದಾಗಿ ಅರಿಯಬೇಕು, ಆಗ ಒಬ್ಬ ವಾಟಾಳ್‌ ನಾಗರಾಜ್‌ ಅಂದ್ರೆ ಯಾರು? ಕರ್ನಾಟಕದ ಇತಿಹಾಸದಲ್ಲಿ ಈ ವ್ಯಕ್ತಿಗೆ ಇರುವ ಸ್ಥಾನಮಾನ ಏನು? ಈ 84 ವರ್ಷದ ವ್ಯಕ್ತಿಯ ಒಂದು ಕರೆಯನ್ನು ಈ ನಾಡು ಯಾಕೆ ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವುದರ ಅರಿವು ಎಲ್ಲರಿಗೂ ಆಗುತ್ತದೆ. ನೀವು ನಂಬಲೇಬೇಕು.. ಕನ್ನಡದ ಹೋರಾಟ ಎನ್ನುವುದು ಈ ಮನುಷ್ಯನಿಗೆ ರಕ್ತಗತ. ಇದರ ಹಿಂದೆ ರಾಜಕೀಯ, ಪ್ರಚಾರದ ಗಿಮಿಕ್‌ ಇದೆ ಎಂದು ಕೆಲವರಿಗಾದರೂ ಅನಿಸಬಹುದು. ಆದರೆ, ಇರುವುದು ಪಕ್ಕಾ ಹುಚ್ಚು! HE IS MAD FOR KANNADA!

ಈಗ ಇವರಿಗೆ 84 ವರ್ಷ. ಅವರು ಕನ್ನಡದ ಹೋರಾಟವನ್ನು ಆರಂಭ ಮಾಡಿದ್ದು ತಮ್ಮ 21ನೇ ವಯಸ್ಸಿನಲ್ಲಿ. ಅಂದರೆ 1960ರಲ್ಲಿ. ತೆಲುಗು ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್‌ ಮಾಡುವುದನ್ನು ವಿರೋಧಿಸಿ ನಡೆದ ಹೋರಾಟದಲ್ಲಿ ಭಾಗವಹಿಸುವ ಮೂಲಕ ಕನ್ನಡಕ್ಕೊಬ್ಬ ಹೋರಾಟಗಾರ ಸಿಕ್ಕಿದ್ದ. ಅಲ್ಲಿಂದ ಶುರುವಾದ ಹೋರಾಟಕ್ಕೆ ಈಗ 63 ವರ್ಷಗಳ ಇತಿಹಾಸ. ಇಲ್ಲಿದೆ ವಾಟಾಳ್‌ ನಾಗರಾಜ್‌ ಅವರ ಬದುಕಿನ ಒಂದು ಸಣ್ಣ ಕಥೆ. ಇದನ್ನು ಓದಿದ ಮೇಲೆ ವಾಟಾಳ್‌ ನಾಗರಾಜ್‌ ಕರೆ ಕೊಟ್ರೆ ಬಂದ್‌ ಮಾಡ್ಬೇಕಾ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ.

ಚಾಮರಾಜ ನಗರದಲ್ಲಿ ಹುಟ್ಟಿ ಬೆಂಗಳೂರಿಗೆ…

ವಾಟಾಳ್‌ ನಾಗರಾಜ್‌ ಅವರು ಹುಟ್ಟಿದ್ದು ಚಾಮರಾಜ ನಗರ ಜಿಲ್ಲೆಯ ವಾಟಾಳು ಎಂಬ ಹಳ್ಳಿಯಲ್ಲಿ. ಅವರು ಓದಿದ್ದು ಎಸ್‌ಎಸ್‌ಎಲ್‌ಸಿ ವರೆಗೆ ಮಾತ್ರ. ಜ್ಞಾನಾಂಬಿಕಾ ಅವರನ್ನು ಮದುವೆಯಾಗಿ ಒಬ್ಬ ಗಂಡು ಮತ್ತು ಒಬ್ಬ ಮಗಳನ್ನು ಹೊಂದಿದ್ದಾರೆ. ಜ್ಞಾನಾಂಬಿಕೆ ಅವರು 2020ರಲ್ಲಿ ನಿಧನರಾಗಿದ್ದಾರೆ.

ವಾಟಾಳ್‌ ಈಗ ಬೆಂಗಳೂರು ವಾಸಿ. ಆರ್‌ಎಂವಿ ಬಡಾವಣೆಯಲ್ಲಿ ದೊಡ್ಡ ಮನೆಯಿದೆ. 2018ರ ಚುನಾವಣೆಯಲ್ಲಿ ಅವರು ನೀಡಿದ ಅಫಿಡವಿಟ್‌ ಪ್ರಕಾರ ಅವರ ಆಸ್ತಿ ಮೂರು ಕೋಟಿ. ಅವರನ್ನು ಕೇಳಿದರೆ ಕನ್ನಡಿಗರೆಲ್ಲ ನನ್ನ ಆಸ್ತಿ ಎನ್ನುತ್ತಾರೆ.

ವಿಧಾನಸಭೆಯಲ್ಲಿ ಕೇಳಿಸಿತ್ತು ಕನ್ನಡದ ಧ್ವನಿ

ವಾಟಾಳ್‌ ನಾಗರಾಜ್‌ ಅವರು ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.1989, 1994 ಮತ್ತು 2004ರಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ನಿರಂತರ ಸೋಲೇ. 2009ರ ಲೋಕಸಭಾ ಚುನಾವಣೆಯಲ್ಲಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಗಿನ ಸಂಸದರಾದ ಅನಂತ್‌ ಕುಮಾರ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

1962ರಲ್ಲೇ ಅಲಂಕಾರ್‌ ಥಿಯೇಟರ್‌ಗೆ ಬೆಂಕಿ ಹಚ್ಚಿದ್ದರು!

ವಾಟಾಳ್‌ ನಾಗರಾಜ್‌ ಅವರ ಕನ್ನಡದ ಕೆಚ್ಚು ಎಷ್ಟಿತ್ತೆಂದರೆ 1964ರಲ್ಲೇ ಅವರು ಬೆಂಗಳೂರಿನ ಅಲಂಕಾರ್‌ ಥಿಯೇಟರ್‌ಗೆ ಬೆಂಕಿ ಹಚ್ಚಿದ್ದರು. ಹಿಂದಿ ಸಿನಿಮಾ ಪ್ರದರ್ಶನ ಮಾಡಿದ್ದನ್ನು ಪ್ರತಿಭಟಿಸಿ ಈ ಹೋರಾಟ ನಡೆದಿತ್ತು. 1960ರಲ್ಲಿ ತೆಲುಗು ಡಬ್ಬಿಂಗ್‌ ಸಿನಿಮಾ ಪ್ರದರ್ಶನದ ವಿರುದ್ಧ ಸಿಡಿದಿದ್ದರು.

1964ರಲ್ಲಿ ಬೆಂಗಳೂರು ಕಾರ್ಪೊರೇಟರ್‌ ಆಗಿದ್ದರು

ವಾಟಾಳ್‌ ನಾಗರಾಜ್‌ 1964ರಲ್ಲೇ ಬೆಂಗಳೂರಿನ ಕಾರ್ಪೊರೇಟರ್‌ ಆಗಿದ್ದರು. ಆಗ ಸಿಎಂ ಆಗಿದ್ದ ನಿಜಲಿಂಗಪ್ಪ ಅವರು ಕಾಂಗ್ರೆಸ್‌ಗೆ ಬಾರಯ್ಯ ಅಂದಿದ್ದರಂತೆ. ಆಗಲೇ ಕನ್ನಡ ಚಳವಳಿ ಪಕ್ಷ ಮಾಡಿಕೊಂಡಿದ್ದ ಮಾಡಿಕೊಂಡಿದ್ದ ವಾಟಾಳ್‌ ಅದನ್ನು ಬಿಟ್ಟು ಬರಲು ರೆಡಿ ಇರಲಿಲ್ಲ. ಹೋಗಿದ್ದರೆ ಮುಂದೆ ಸಿಎಂ ಆಗ್ತಿದ್ದೆ ಎಂದು ಅವರು ಹಿಂದೊಮ್ಮೆ ಹೇಳಿಕೊಂಡಿದ್ದಾರೆ.

ಬ್ರಿಟಿಷ್‌ ಪಿಲ್ಲರ್‌ ತೆಗೆಸಿ ಕೆಂಪೇಗೌಡ ಪ್ರತಿಮೆ ಮಾಡಿಸಿದ್ದರು

1964ರಲ್ಲಿ ವಾಟಾಳ್‌ ನಾಗರಾಜ್‌ ಅವರು ಈಗಿನ ಬಿಬಿಎಂಪಿ ಕಚೇರಿಯ ಮುಂದೆ ಇದ್ದ ಬ್ರಿಟಿಷ್‌ ಪಿಲ್ಲರ್‌ ತೆಗೆಸಲು ಎರಡು ತಿಂಗಳು ಹೋರಾಡಿದ್ದರು. 1791ರಲ್ಲಿ ಬ್ರಿಟಿಷರು ಬೆಂಗಳೂರನ್ನು ವಶಪಡಿಸಿಕೊಂಡಾಗ ಸತ್ತ ಸೈನಿಕರ ಸ್ಮರಣಾರ್ಥ ಈ ಪಿಲ್ಲರ್‌ ನಿರ್ಮಿಸಲಾಗಿತ್ತು. ಇದು ನಮಗೆ ಅಪಮಾನ ಎಂದು ಹೋರಾಡಿದ ವಾಟಾಳ್‌ ಕೊನೆಗೂ ತೆಗೆಸುವಲ್ಲಿ ಸಮರ್ಥರಾದರು. ಈಗ ಆ ಜಾಗದಲ್ಲಿ ಕೆಂಪೇಗೌಡರ ಪ್ರತಿಮೆ ಇದೆ.

1980ರಲ್ಲಿ ಗೋಕಾಕ್‌ ಚಳುವಳಿಯಲ್ಲಿ ಭಾಗಿ

ರಾಜ್ಯದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ ಸಿಗಬೇಕು ಎಂದು 1980ರ ದಶಕದಲ್ಲಿ ನಡೆದ ಗೋಕಾಕ್‌ ಚಳುವಳಿಯ ಮುಂಚೂಣಿ ಹೋರಾಟಗಾರರಲ್ಲಿ ವಾಟಾಳ್‌ ನಾಗರಾಜ್‌ ಕೂಡಾ ಒಬ್ಬರು. ಆಗ ಅವರಿಗೆ ರಾಜ್ಯಮಟ್ಟದ ಸ್ಥಾನಮಾನ ಬಂತು.

ಕನ್ನಡ ಚಳುವಳಿಗಾರರು ಹುಟ್ಟಿಕೊಂಡರು

1996ರಲ್ಲಿ ವಾಟಾಳ್‌ ನಾಗರಾಜ್‌ ಅವರು ಇಡೀ ಕರ್ನಾಟಕದಲ್ಲಿ ಕನ್ನಡಿಗರ ಸಮಸ್ಯೆಗಳ ವಿರುದ್ಧ ಹೋರಾಡಲು ಕನ್ನಡ ಚಳುವಳಿಗಾರರು ಎಂಬ ಒಕ್ಕೂಟವನ್ನು ಸ್ಥಾಪನೆ ಮಾಡಿದರು. ಕನ್ನಡ, ಕನ್ನಡ ಸಂಸ್ಕೃತಿ, ಕನ್ನಡಿಗರ ಉದ್ಯೋಗ ಹೀಗೆ ಹಲವು ಹೋರಾಟಗಳಿಗೆ ನಾಂದಿ ಹಾಡಿದರು.

ರಾಜಭವನದ ಎದುರೇ ಮೂತ್ರ ಮಾಡಲು ಹೋಗಿದ್ದರು

ವಾಟಾಳ್‌ ನಾಗರಾಜ್‌ ಚಿತ್ರ ವಿಚಿತ್ರ ಪ್ರತಿಭಟನೆಗಳಿಗೆ ಹೆಸರುವಾಸಿ. 2009ರಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕ ಟಾಯ್ಲೆಟ್‌ ಮತ್ತು ಬಾತ್‌ ರೂಂಗಳ ಕೊರತೆ ಇದೆ ಎನ್ನುವುದರ ಬಗ್ಗೆ ಗಮನ ಸೆಳೆಯಲು ರಾಜಭವನದ ಮುಂದೆ ಮೂತ್ರ ಮಾಡಲು ಮುಂದಾಗಿದ್ದರು. ಕಮೋಡ್‌ ಹಿಡಿದು ಹೋಗಿದ್ದ ಅವರನ್ನು ಪೊಲೀಸರು ಬಂಧಿಸಿದ್ದರು. ಕೊನೆಗೆ ಅವರು ಕಮೋಡನ್ನು ರಸ್ತೆಯಲ್ಲೇ ಇಟ್ಟು ಅದರ ಮೇಲೆ ಕುಳಿತು ಪ್ರತಿಭಟಿಸಿದ್ದರು.

ಬೆಲೆ ಏರಿಕೆ ವಿರುದ್ಧ ವಿಧಾನಸೌಧಕ್ಕೆ ಎತ್ತಿನಗಾಡಿ ಯಾತ್ರೆ

ದೇಶದಲ್ಲಿ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿದ್ದ ವಾಟಾಳ್‌ ವಿಧಾನಸೌಧದ ಮುಂದೆ ಚಕ್ಕಡಿ ಗಾಡಿ ಯಾತ್ರೆ ಮಾಡಿ ಗಮನ ಸೆಳೆದಿದ್ದರು. ಕತ್ತೆ ಮೇಲೆ ಮೆರವಣಿಗೆ ಮಾಡಿದ್ದಕ್ಕೆ, ಎಮ್ಮೆ ಮೇಲೆ ಮೆರವಣಿಗೆ ಮಾಡಿದ್ದಕ್ಕೆ ಲೆಕ್ಕವೇ ಇಲ್ಲ.

ಅತ್ಯಾಚಾರದ ವಿರುದ್ದ ಬುರ್ಕಾ ಹಾಕಿ, ಕತ್ತಿ ಹಿಡಿದು ಪ್ರತಿಭಟನೆ

ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರಗಳ ವಿರುದ್ಧ ಸಿಡಿದ ಅವರು ಬುರ್ಕಾ ಹಾಕಿಕೊಂಡು ಕತ್ತಿ ಹಿಡಿದು ಪ್ರತಿಭಟನೆ ಮಾಡಿದ್ದು ಭಾರಿ ಸುದ್ದಿಯಾಗಿತ್ತು. ಮಹಿಳೆಯರ ಆತ್ಮರಕ್ಷಣೆಯ ಸಂದೇಶವನ್ನು ಅವರು ಸಾರಿದ್ದರು.

ಕತ್ತೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದರು ವಾಟಾಳ್‌

2015ರಲ್ಲಿ ಕತ್ತೆಗಳು ಸೇರಿದಂತೆ ಹಲವು ಪ್ರಾಣಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು. ಪ್ರಶಸ್ತಿಗಳ ಲಾಬಿ ವಿರುದ್ಧ ಇದು ಅವರ ಆಕ್ರೋಶವಾಗಿತ್ತು. ಆಗ ಕತ್ತೆ, ನಾಯಿ, ಎಮ್ಮೆ, ಹೋರಿಗಳನ್ನು ಕರೆ ತಂದು ಅವುಗಳಿಗೆ ಶಾಲು ಹಾಕಿ, ಪದಕ ನೀಡಿ ಗೌರವಿಸಲಾಗಿತ್ತು.

ಕಬಾಲಿ ಸಿನಿಮಾ, ರಜನೀಕಾಂತ್‌ ವಿರುದ್ಧ ಆಕ್ರೋಶ

2016ರ ಜುಲೈನಲ್ಲಿ ತಮಿಳು ಸಿನಿಮಾ ಕಬಾಲಿ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದಾಗ ವಿರೋಧ ವ್ಯಕ್ತಪಡಿಸಿದ್ದರು. ಕಬಾಲಿ ಸಿನಿಮಾದ ಪೋಸ್ಟರ್‌ಗೆ ಬೆಂಕಿ ಹಚ್ಚಿದ್ದರು. ಈಗಲೂ ರಜನೀಕಾಂತ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ.

ಸತ್ಯರಾಜ್‌ ವಿರುದ್ಧ ಆಕ್ರೋಶ, ಬಾಹುಬಲಿನ ಬಿಡಲ್ಲ ಎಂದಿದ್ದರು

ತಮಿಳು ನಟ ಸತ್ಯರಾಜ್‌ ಅವರು ಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಮಾತನಾಡಿದ್ದರು. ಇದನ್ನು ನೆನಪಿಟ್ಟುಕೊಂಡ ವಾಟಾಳ್‌ ನಾಗರಾಜ್‌ 2018ರಲ್ಲಿ ಬಾಹುಬಲಿ ಸಿನಿಮಾ ಬಿಡುಗಡೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬಾಹುಬಲಿಯಲ್ಲಿ ಸತ್ಯರಾಜ್‌ ಕಟ್ಟಪ್ಪನಾಗಿ ನಟಿಸಿದ್ದರು.

ವೆಲೆಂಟೈನ್ಸ್‌ ಡೇ ಪರವಾಗಿ ಕುರಿಗಳಿಗೆ, ಕುದುರೆಗಳಿಗೆ ಮದುವೆ

ಕೆಲವು ಹಿಂದು ಸಂಘಟನೆಗಳು ವೆಲೆಂಟೈನ್ಸ್‌ ಡೇ ವಿರುದ್ಧವಾಗಿ ನಿಂತರೆ ವಾಟಾಳ್‌ ನಾಗರಾಜ್‌ ಅವರು ಅದನ್ನು ಬೆಂಬಲಿಸಿದ್ದರು. 2018ರಲ್ಲಿ ಅವರು ಜಾಕೋಬ್‌ ಮತ್ತು ಕ್ಯಾರೋಲಿನ್‌ ಎಂಬ ಕುರಿಗಳಿಗೆ ವ್ಯಾಲೆಂಟೈನ್ಸ್‌ ಡೇ ದಿನ ಮದುವೆ ಮಾಡಿಸಿದ್ದರು. ಪ್ರೇಮಿಗಳ ದಿನಕ್ಕೆ ರಜೆ ಘೋಷಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. 2020ರಲ್ಲಿ ರಾಜಾ ಮತ್ತು ರಾಣಿ ಎಂಬ ಕುದುರೆಗಳಿಗೆ ಮದುವೆ ಮಾಡಿಸಿದ್ದರು.

ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ್ದರು

2018ರಲ್ಲಿ ಮಹಾದಾಯಿ ವಿವಾದ ಜೋರಾಗಿದ್ದಾಗ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರು. ಆಗ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು.

ಪೊಲೀಸರಿಗಾಗಿ ಪೊಲೀಸ್‌ ವೇಷ ಧರಿಸಿ ಹೋರಾಟ

2019ರಲ್ಲಿ ಪೊಲೀಸರಿಗೆ ವೇತನ ಹೆಚ್ಚು ಮಾಡಬೇಕೆಂದು ಸಲಹೆ ನೀಡುವ ಔರಾದ್ಕರ್‌ ಸಮಿತಿಯ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಪೊಲೀಸ್‌ ದಿರಸು ಹಾಕಿ ಪ್ರತಿಭಟಿಸಿದ್ದರು.

ಕಾವೇರಿಗಾಗಿ ಮಾಡಿದ ಬಂದ್‌, ಹೋರಾಟ ಲೆಕ್ಕವಿಲ್ಲ

ವಾಟಾಳ್‌ ನಾಗರಾಜ್‌ ಅವರು ಕಾವೇರಿಗಾಗಿ ಇದುವರೆಗೆ 10ಕ್ಕಿಂತಲೂ ಹೆಚ್ಚು ಬಂದ್‌ಗೆ ಕರೆ ನೀಡಿದ್ದಾರೆ. ನೂರಾರು ಹೋರಾಟಗಳನ್ನು ಮಾಡಿದ್ದಾರೆ. ಜಯಲಲಿತಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ್ದಾರೆ. ಅವರು ಇದುವರೆಗೆ ಮಾಡಿದ ಹೋರಾಟಗಳು ಸಾವಿರ ಸಾವಿರ.

ಅವರ ಟೋಪಿ, ಕನ್ನಡಕದ ಕಥೆ ಏನು ಗೊತ್ತಾ?

ಟೋಪಿ ಮತ್ತು ಕನ್ನಡಕ ವಾಟಾಳ್‌ ಅವರ ಸಿಗ್ನೇಚರ್‌. ಅವರನ್ನು ಕನ್ನಡಕ, ಟೋಪಿ ಇಲ್ಲದೆ ನೋಡಿದ್ದು ಕೇವಲ ಹೆಂಡತಿ ಮತ್ತು ಮಕ್ಕಳು ಎಂಬ ಜೋಕ್‌ ಇದೆ. ಆದರೆ, ವಾಟಾಳ್‌ ಅವರು ಇದನ್ನು ಧರಿಸಲು ಆರಂಭಿಸಿದ್ದು 1970ರ ದಶಕದಲ್ಲಿ. ಸ್ಟೈಲ್‌ ಕಾಣ್ತದೆ ಎಂಬ ಕಾರಣಕ್ಕೆ ಅಂತಾರೆ ಅವರು. ನನ್ನ ಬದುಕೇ ತೆರೆದ ಪುಸ್ತಕ. ಇದರಲ್ಲಿ ಅಡಗಿಸುವುದು ಏನಿದೆ ಎನ್ನುವುದು ವಾಟಾಳ್‌ ಪ್ರಶ್ನೆ. ಇಲ್ಲಿದೆ ಅವರ ಟೋಪಿ, ಕನ್ನಡ ಇಲ್ಲದ ಫೋಟೊ.!

ಇದನ್ನೂ ಓದಿ: Karnataka Bandh LIVE Updates: ಬೆಂಗಳೂರು ಏರ್‌ಪೋರ್ಟ್‌ಗೂ ತಟ್ಟಿದ ಬಂದ್‌ ಬಿಸಿ; ಆಗಮಿಸುವ, ನಿರ್ಗಮಿಸುವ 44 ವಿಮಾನಗಳ ಹಾರಾಟ ರದ್ದು

Exit mobile version