ಬೆಂಗಳೂರು: ಕರ್ನಾಟಕ ರಾಜ್ಯದ ಇತಿಹಾಸದಲ್ಲೇ (Karnataka Congress) ಮೊದಲ ಬಾರಿಗೆ ಉಪ ಮುಖ್ಯಮಂತ್ರಿಗಳಿಗೂ (Deputy Chief Minister-DCM) ರಾಜಕೀಯ ಸಲಹೆಗಾರರನ್ನು (Political Advisor) ನೇಮಕ ಮಾಡಲಾಗಿದೆ. ಶುಕ್ರವಾರ ಬಿಡುಗಡೆಗೊಂಡ ನಿಗಮ-ಮಂಡಳಿ ನೇಮಕ (Appointment of Corporation Board) ಪಟ್ಟಿಯಲ್ಲಿ ಇದನ್ನು ಪ್ರಕಟಿಸಲಾಗಿದೆ. ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರ ರಾಜಕೀಯ ಸಲಹೆಗಾರರಾಗಲಿದ್ದಾರೆ.
ಇದುವರೆಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ರಾಜಕೀಯ ಕಾರ್ಯದರ್ಶಿಗಳ ನೇಮಕವಾಗುತ್ತಿತ್ತು. ಹಾಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಎಂಎಲ್ ಸಿಗಳಾದ ನಸೀರ್ ಅಹಮದ್ ಮತ್ತು ಕೆ ಗೋವಿಂದರಾಜ್ ಅವರು ರಾಜಕೀಯ ಕಾರ್ಯದರ್ಶಿಗಳಾಗಿದ್ದಾರೆ. ಕೆ.ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾಗಿದ್ದಾರೆ. ಹೊಸದಾಗಿ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿಗಳ ಆರ್ಥಿಕ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.
ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇಮಕಾತಿ ಮಾಡಿಕೊಂಡಿರುವಾಗ ಉಪಮುಖ್ಯಮಂತ್ರಿಗಳಿಗೂ ರಾಜಕೀಯ ಸಲಹೆಗಾರರ ನೇಮಕಾತಿ ಮಾಡಿಕೊಂಡರೆ ತಪ್ಪೇನು ಎಂಬ ಚರ್ಚೆ ಆರಂಭವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಅವರಿಗೆ ಸಹಕಾರ ನೀಡಲು ಕಾರ್ಯದರ್ಶಿಯ ಅಗತ್ಯತೆಯನ್ನು ಪ್ರತಿಪಾದಿಸಲಾಗಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿತ್ತು. ಇದರ ಜತೆಗೆ ಹೆಚ್ಚಿನ ಶಾಸಕರಿಗೆ ಅಧಿಕಾರದಲ್ಲಿ ಅವಕಾಶ ಒದಗಿಸುವ ಉದ್ದೇಶದಿಂದ ಈ ರೀತಿಯ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಉಪಮುಖ್ಯಮಂತ್ರಿಗೆ ಸಲಹೆಗಾರರ ನೇಮಕದ ಅವಕಾಶವಿದೆಯೇ?
ಡಿಸಿಎಂಗೆ ರಾಜಕೀಯ ಕಾರ್ಯದರ್ಶಿ ಬೇಕು ಎಂದಾದಾಗ ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬ ಚರ್ಚೆ ನಡೆದಿತ್ತು. ನಿಜವೆಂದರೆ ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ ನೇಮಕದ ಅವಕಾಶವಿದೆಯೇ ಎಂಬ ವಿಚಾರವೂ ಕೋರ್ಟ್ ಮೆಟ್ಟಿಲು ಹತ್ತಿತ್ತು. ಅಂತಿಮವಾಗಿ ಕೋರ್ಟ್ ಅದನ್ನು ಒಪ್ಪಿತ್ತು. ಆದರೆ, ಈಗ ಹೊಸ ನೇಮಕಾತಿ, ಡಿಸಿಎಂಗೂ ರಾಜಕೀಯ ಸಲಹೆಗಾರರನ್ನು ನೇಮಕ ಮಾಡಿರುವುದು ಮತ್ತೆ ಕಾನೂನು ಕಟ್ಟೆ ಹತ್ತಲೂಬಹುದು.
ಇದನ್ನೂ ಓದಿ: Karnataka Live News: ಕೊನೆಗೂ ನಿಗಮ ಮಂಡಳಿ ಪಟ್ಟಿ ಬಿಡುಗಡೆ; 32 ಶಾಸಕರಿಗೆ ಅಧಿಕಾರ
ಡಿಸಿಎಂ ರಾಜಕೀಯ ಸಲಹೆಗಾರ ಶ್ರೀನಿವಾಸ್ ಮಾನೆ ಯಾರು?
ಶ್ರೀನಿವಾಸ್ ಮಾನೆ ಅವರು ವಿಧಾನಸಭೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು 2023ರ ಚುನಾವಣೆಯಲ್ಲಿ ಬಿಜೆಪಿಯ ಶಿವರಾಜ್ ಸಜ್ಜನರ್ ಅವರನ್ನು ಸೋಲಿಸಿದ್ದರು. 2021ರ ಉಪಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು. ಅವರು 2010 ರಿಂದ 2021 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಧಾರವಾಡ ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯ (MLC) ಮತ್ತು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಸಲಹೆಗಾರ ಆಗಲಿದ್ದಾರೆ.