ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ (Karnataka Drought) ಹಿನ್ನೆಲೆಯಲ್ಲಿ ಬರ ಪರಿಹಾರಕ್ಕೆ (Drought Relief) ಕಾರ್ಯಕ್ಕೆ ರಾಜ್ಯ ವಿಪತ್ತು ನಿಧಿಯಿಂದ (State Disaster Fund) 324.00 ಕೋಟಿ ರೂಪಾಯಿಯನ್ನು ಬಿಡುಗಡೆಗೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರ ನೀಡಿದೆ. ರಾಜ್ಯದಲ್ಲಿನ 2023ನೇ ಮುಂಗಾರು ಹಂಗಾಮಿನ (Monsoon Season) ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಿ ಆರ್ಥಿಕ ಇಲಾಖೆ ಆದೇಶವನ್ನು ಹೊರಡಿಸಿದೆ. ಸಾಮರ್ಥ್ಯ ವೃದ್ಧಿ, ಬರ ಪರಿಹಾರ ಮತ್ತು ರಕ್ಷಣೆ, ಪುನರ್ ನವೀಕರಣ ಅಡಿಗಳ ಟಿಪ್ಪಣಿ ಅಡಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಈಗ ಬಿಡುಗಡೆಯಾಗಿರುವ ಅನುದಾನದ ಪಟ್ಟಿಯ ಅನುಸಾರ ನೋಡುವುದಾದರೆ, ಅತಿ ಹೆಚ್ಚು ಪಾಲನ್ನು ಬೆಳಗಾವಿ ಜಿಲ್ಲೆಗೆ ನೀಡಲಾಗಿದೆ. ಆ ಜಿಲ್ಲೆಗೆ ಒಟ್ಟು 22.50 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ವಿಜಯಪುರ ಜಿಲ್ಲೆಗೆ 18.00 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಅತಿ ಕಡಿಮೆ ಬರ ಪರಿಹಾರ ಹಣ ಪಡೆದ ಜಿಲ್ಲೆ ಎಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯಾಗಿದೆ. ಇಲ್ಲಿ 3 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ನಂತರದ ಸ್ಥಾನದಲ್ಲಿ ಉಡುಪಿ 4.5 ಕೋಟಿ ರೂ. ಹಾಗೂ ಬೀದರ್ 4.5 ಕೋಟಿ ರೂ. ಇದೆ.
ಒಟ್ಟಾರೆ 434 ಕೋಟಿ ರೂಪಾಯಿ ಬರ ಪರಿಹಾರ ನಿಧಿಯಾಗಿ ಮೀಸಲಿಡಲಾಗಿದ್ದು, ಅದರಲ್ಲಿ ಈಗ 324 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಹೀಗಾಗಿ ಈಗ ಕೊಡದೇ ಬಾಕಿಯಾಗಿ 110 ಕೋಟಿ ರೂಪಾಯಿ ಮಾತ್ರವೇ ಉಳಿದಂತಾಗಿದೆ.
ಬರಕ್ಕೆ 39.74 ಲಕ್ಷ ಹೆಕ್ಟೇರ್ ಬೆಳೆ ನಷ್ಟ
ರಾಜ್ಯದಲ್ಲಿ ಮಳೆಯಾಗದೆ ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಟ್ಟು 216 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಬರದ ಹಿನ್ನೆಲೆಯಲ್ಲಿ ನಡೆಸಿದ ಅಧ್ಯಯನದ ಅನುಸಾರ ಬೆಳೆ ನಷ್ಟದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಒಟ್ಟು 39,74,741.34 ಹೆಕ್ಟೇರ್‌ನಷ್ಟು ಫಸಲು ನಷ್ಟವಾಗಿದೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ಈ ಹಿಂದೆ ಹಂಚಿಕೊಂಡಿತ್ತು,
ಭತ್ತ, ರಾಗಿ, ಬೇಳೆಕಾಳು, ಕಡಲೆ ಬೀಜ, ಹತ್ತಿ, ಕಬ್ಬು, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳ ನಷ್ಟದ ಅಂದಾಜು ಪಟ್ಟಿಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: CM Siddaramaiah : ಸಿಎಂ ಹುದ್ದೆ ಖಾಲಿ ಇಲ್ಲ; ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದ ಡಿ.ಕೆ. ಸುರೇಶ್
ಬೆಳೆ ನಷ್ಟಕ್ಕೆ ಮಳೆ ಕೊರತೆಯೇ ಕಾರಣ
ಈ ವರ್ಷ ಮುಂಗಾರು ಕೈಕೊಟ್ಟಿದೆ. ಅಲ್ಲದೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಆಗಲಿದೆ. ರಾಜ್ಯದಲ್ಲಿ ಶೇಕಡಾ 28ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಶೇಕಡಾ 73ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಪೆಟ್ಟು ಬಿದ್ದಿದೆ. ಜೋಳ, ತೊಗರಿ, ಶೇಂಗಾ ಎಲ್ಲ ಬೆಳೆ ಹೊಲದಲ್ಲಿ ಕಾಣುತ್ತದೆ. ಆದರೆ, ಇಳುವರಿ ಮಾತ್ರ ಇಲ್ಲ ಎನ್ನುವಂತೆ ಆಗಿದೆ.