ಬೆಂಗಳೂರು: ಬಿಜೆಪಿ ಒಂದು ಕೋಮುವಾದಿ ಪಕ್ಷವಾಗಿದ್ದು, ಮಹಿಳೆಯರು, ದಲಿತರು ಹಾಗೂ ಹಿಂದುಳಿದವರಿಗೆ ಅಲ್ಲಿ ಪ್ರಾತಿನಿಧ್ಯ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಚಾಮರಾಜಪೇಟೆ ಕ್ಷೇತ್ರದ ವಿವಿಧೆಡೆ ಸಂಚರಿಸಿ, ವಿವಿಧ ಪಕ್ಷದ ಮುಖಂಡರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಒಂದು ಕೋಮುವಾದಿ ಪಕ್ಷ. ಅವರ ಪಾರ್ಟಿಯಲ್ಲಿ ದಲಿತರು, ಹಿಂದುಳಿದವರಿಗೆ, ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ. ಬಹಿರಂಗವಾಗಿ ಅಲ್ಪಸಂಖ್ಯಾತರು, ದಲಿತರ ವಿರೋಧ ಮಾಡುತ್ತಾರೆ. ಸಂವಿಧಾನ ಸಮ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳುತ್ತದೆ. ಪ್ರತಿಯೊಬ್ಬ ಪ್ರಜೆ ಹಾಗೂ ಪ್ರತಿ ಸಮಾಜ ಕೂಡ ಸಮನಾಗಿರಬೇಕು ಎಂದು ಹೇಳುತ್ತದೆ ಎಂದರು.
ಶಾಸಕ ಜಮೀರ್ ಅಹ್ಮದ್ ಖಾನ್ ಜಾತ್ಯತೀತ ಲೀಡರ್. ಮುಸ್ಲಿಂ ನಾಯಕರನ್ನು ಪ್ರೀತಿಸುವಂತೆಯೇ ಹಿಂದುಗಳನ್ನೂ ಪ್ರೀತಿಸುತ್ತಾರೆ. ಇದು ಪ್ರತಿಯೊಬ್ಬರಲ್ಲೂ ಇರಬೇಕು.
ನಾವು ಅಧಿಕಾರದಲ್ಲಿದ್ದಾಗ ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡಿದ್ದೆವು. ಮತ್ತೆ ಕಾಂಗ್ರೆಸ್ ಸರ್ಕಾರ ೧೦೦ಕ್ಕೆ ೧೦೦ರಷ್ಟು ಬಂದೇ ಬರುತ್ತದೆ. ಜಮ್ಮೀರ್ ಅಹಮದ್ ಅವರಿಗೆ ಮುಂದೆ ಒಳ್ಳೆಯ ರಾಜಕೀಯ ಭವಿಷ್ಯ ಇದೆ ಎಂದರು.
ಇದಕ್ಕೂ ಮುನ್ನ ಚಾಮರಾಜಪೇಟೆಯ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ಸಿದ್ದರಾಮಯ್ಯ, ಮಾಜಿ ಮಂತ್ರಿ ಪೆರಿಕಲ್ ಮಲ್ಲಪ್ಪ ಪುತ್ರ ಶ್ರೀನಿವಾಸ ಮೂರ್ತಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಇದನ್ನೂ ಓದಿ | ಚಾಮರಾಜಪೇಟೆಯಲ್ಲಿ ಶಾಲಾ ಮಕ್ಕಳೊಂದಿಗೆ ಗಾಂಧಿ ಜಯಂತಿ; ಶಾಸಕ ಜಮೀರ್ ಭಾಗಿ