ಬೆಂಗಳೂರು: ಬಿಜೆಪಿ ಸರ್ಕಾರದ ಹಾಲಿ ಇಬ್ಬರು ಸಚಿವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆಗಳ ನಡುವೆಯೇ ಹಾಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಚುನಾವಣೆ ಹತ್ತಿರವಾದಂತೆಯೇ ವಿವಿಧ ಪಕ್ಷಗಳ ನಾಯಕರು ಪಕ್ಷಾಂತರ ಮಾಡುವುದು ಸಾಮಾನ್ಯ. ಈ ಚುನಾವಣೆಯಲ್ಲೂ ಅನೇಕ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಬೇರೆ ಪಕ್ಷಗಳಿಗೆ ತೆರಳಿದ್ದಾರೆ. ಆದರೆ ಹಾಲಿ ಸಚಿವರು, ಶಾಸಕರು ಅಥವಾ ವಿಧಾನ ಪರಿಷತ್ ಸದಸ್ಯರಾರೂ ಪಕ್ಷಾಂತರ ಮಾಡಿರಲಿಲ್ಲ. ಇದೀಗ ಪುಟ್ಟಣ್ಣ ರಾಜೀನಾಮೆ ನೀಡಿರುವುದು, ಬಿಜೆಪಿಯ ಮೊದಲ ವಿಕೆಟ್ ಪತನವಾದಂತಾಗಿದೆ.
ತಮ್ಮ ಅನೇಕ ಬೆಂಬಲಿಗರೊಂದಿಗೆ ಕೆಪಿಸಿಸಿ ಕಚೇರಿಗೆ ಪುಟ್ಟಣ್ಣ ಆಗಮಿಸಿದರು. ವಿಧಾನ ಪರಿಷತ್ ಸದಸ್ಯತ್ವಕ್ಕೆ ಪುಟ್ಟಣ್ಣ ರಾಜೀನಾಮೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು. ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಪುಟ್ಟಣ್ಣ ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದರು. ಅವರ ಅವಧಿ 2026ರ ನವೆಂಬರ್ 11ರವರೆಗೂ ಇದೆ. ಇನ್ನೂ ಮೂರು ವರ್ಷ ಎಂಟು ತಿಂಗಳು ಅವಧಿಯಿರುವಾಗಲೇ ರಾಜೀನಾಮೆ ನೀಡಿದ್ದು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆ ಮಾಡುವುದು ಖಚಿತವಾಗಿದೆ.
ಪುಟ್ಟಣ್ಣ ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಅನೇಕ ದಿನದಿಂದಲೂ ಕೇಳಿಬರುತ್ತಿವೆ. ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಮತದಾರರು ನಿರ್ಣಾಯಕವಾದ ಈ ಕ್ಷೇತ್ರದಲ್ಲಿ ಪುಟ್ಟಣ್ಣ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.
ಹಾಲಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಇದ್ದು, ಬಿಜೆಪಿಯಲ್ಲೂ ಟಿಕೆಟ್‌ಗೆ ಭಾರೀ ಪೈಪೋಟಿಯಿದೆ. ಕಾಂಗ್ರೆಸ್‌ನಿಂದಲೂ ಮಾಜಿ ಮೇಯರ್ ಪದ್ಮಾವತಿ, ಗಿರೀಶ್ ಕೆ. ನಾಶಿ, ರಘುವೀರ್ ಗೌಡ ಹಾಗೂ ಭವ್ಯ ನರಸಿಂಹಮೂರ್ತಿ ಸೇರಿ ಅನೇಕ ಆಕಾಂಕ್ಷಿಗಳಿದ್ದಾರೆ. ಇವರೆಲ್ಲರ ನಡುವೆ ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಸೇರ್ಪಡೆ ನಂತರ ಮಾತನಾಡಿದ ಪುಟ್ಟಣ್ಣ, ಇಂದು ಸಂಜೆ 4.30ಕ್ಕೆ ತೀರ್ಮಾನಕ್ಕೆ ಬಂದೆ, ಬಿಜೆಪಿ ಪ್ರಾಥಮಿಕಸದಸ್ಯತ್ವಕ್ಕೆ ರಾಜೀನಾಮೆ ನೀಡಿದೆ. ಪರಿಷತ್ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದೇನೆ. ಕಟೀಲರ ಕಚೇರಿಗೆ ರಾಜೀನಾಮೆ ತಲುಪಿಸಿದ್ದೇನೆ. ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವನು. ಶಿಕ್ಷಕರ ಪರವಾಗಿ ನಾನು ಧ್ವನಿ ಎತ್ತಿದ್ದವನು. ಶಿಕ್ಷಣ ಸಂಸ್ಥೆಗಳ ಪರ ಹೋರಾಟ ಮಾಡಿದವನು.
ನಾನು ಏನೋ ಅಂದುಕೊಂಡು ಬಿಜೆಪಿ ಸೇರಿದ್ದೆ. ಅಲ್ಲಿ ಸತ್ತಂತಹ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಅಲ್ಲಿ ಕೆಲಸ ಮಾಡಲಾಗದ ಪರಿಸ್ಥಿತಿ ಇತ್ತು. ಸಿಎಂ ಭೇಟಿಮಾಡಿಯೂ ಇದನ್ನ ಹೇಳಿದ್ದೆ. ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗೆಹರಿಸಲಾಗಲಿಲ್ಲ. ಶಿಕ್ಷಕರ ಸಮಸ್ಯೆ ಬಗೆಹರಿಸಲಾಗದೆ ಹೇಗಿರೋಕೆ ಸಾಧ್ಯ? ಫ್ರೀಡಂಪಾರ್ಕ್ ನಲ್ಲಿ ಧರಣಿಯಾಯ್ತು, ಇಬ್ಬರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ಆ ಸಮಸ್ಯೆ ಬಗೆಹರಿಸೋಕೆ ಶಿಕ್ಷಣ ಸಚಿವರು ಒಪ್ಪಲಿಲ್ಲ.
ಆಗ ನಾನು ಡಿಕೆಶಿ ಭೇಟಿ ಮಾಡಿ ಮನವಿ ಮಾಡಿದ್ದೆ. ಪ್ರತಿಭಟನಾ ನಿರತರ ಸಮಸ್ಯೆ ಬಗೆಹರಿಸುವ ಬಗ್ಗೆ ಹೇಳಿದ್ದೆ. ಆಗ ಅವರು ಬಂದು ಭರವಸೆ ನೀಡಿದ್ದರು. ಇಂತಹ ಕಡು ಭ್ರಷ್ಟ ವ್ಯವಸ್ಥೆ ನಾನು ನೋಡಿಲ್ಲ. ಇದು ನನ್ನ ಆತ್ಮಸಾಕ್ಷಿಯಿಂದ ಹೇಳ್ತಿದ್ದೇನೆ ಎಂದರು.
ಭುಗಿಲೆದ್ದ ಆಕ್ರೋಶ
ಈಗಾಗಲೆ ರಾಜಾಜಿನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿರುವವರು ಕೆಪಿಸಿಸಿ ಕಚೇರಿಯೆದುರು ನೆರೆದು, ಪುಟ್ಟಣ್ಣ ಸೇರ್ಪಡೆಯನ್ನು ವಿರೋಧಿಸಿದರು. ಭವ್ಯ ನರಸಿಂಹ ಮೂರ್ತಿ ಹಾಗೂ ಎಸ್. ಮನೋಹರ್ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಸುತ್ತುವರಿದು ವಿರೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪುಟ್ಟಣ್ಣನವರನ್ನ ಪಕ್ಷಕ್ಕೆ ಸ್ವಾಗತ ಮಾಡಲಾಗಿದೆ. ಬಿಜೆಪಿಯ ಪರಿಷತ್ ಸದಸ್ಯರಾಗಿದ್ರು. ನಾಲ್ಕು ಬಾರಿ ಪರಿಷತ್ ಸದಸ್ಯರಾಗಿದ್ದರು. ಇನ್ನೂ ಅವರ ಅವಧಿ ಪೂರ್ಣವಾಗಿಲ್ಲ. ಅವಧಿ ಬಾಕಿಯಿದೆ. ಆದ್ರೂ ಪರಿಷತ್ ಸದಸ್ಯತ್ವಕ್ಕೆ ರಿಸೈನ್ ಮಾಡಿದ್ದಾರೆ. ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ತಿರೋದು ವಿರಳ. ಇತ್ತೀಚೆಗೆ ಬಿಜೆಪಿಯವರು ಭ್ರಷ್ಟಾಚಾರ, ಕೋಮುವಾದಕ್ಕೆ ಬೇಸತ್ತಿದ್ದರು. ಅಭಿವೃದ್ಧಿ ಕಾರ್ಯಗಳಿಗೆ ತಿಲಾಂಜಲಿ ಇಟ್ಟಿದ್ದರು. ಜನರನ್ನ ಭಾವನಾತ್ಮಕವಾಗಿ ಸೆಳೆಯುತ್ತಿದ್ದರು.
ಇದನ್ನ ನೋಡಿ ಪುಟ್ಟಣ್ಣ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಿಸೈನ್ ಮಾಡಿದ್ದಾರೆ. ಅವರು ಶಿಕ್ಷಕ ಸಮುದಾಯದ ಪ್ರತಿನಿಧಿಯಾಗಿದ್ದರು. ಸತತವಾಗಿ ನಾಲ್ಕು ಎಲೆಕ್ಷನ್ ಗೆದ್ದಿದ್ದರು. ಅವರು ಬರ್ತಿರೋದ್ರಿಂದ ಪಕ್ಷಕ್ಕೆ ಶಕ್ತಿ ಬರಲಿದೆ. ಇನ್ನೂ ಅವರಿಗೆ ಟಿಕೆಟ್ ಅಂತಿಮವಾಗಿಲ್ಲ. ಸರ್ವೇ ಮಾಡಿಸೋಣ. ಯಾರ ಗೆಲ್ಲುತ್ತಾರೆಯೋ ಅವರಿಗೆ ಟಿಕೆಟ್ ನೀಡೋಣ ಎಂದು ಆಕಾಂಕ್ಷಿಗಳನ್ನು ಸಮಾಧಾನಪಡಿಸಿದರು.