ಬೆಂಗಳೂರು: ರಾಜ್ಯ ರಾಜಕೀಯದಲ್ಲಿ, (Karnataka Election 2023) ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಜೆಡಿಎಸ್ ನಿರೀಕ್ಷಿತ ಸ್ಥಾನ ಪಡೆಯಲು ವಿಫಲವಾಗಿದ್ದು, ಭಾರಿ ಹಿನ್ನಡೆ ಅನುಭವಿಸಿದೆ. ಕಳೆದ ಬಾರಿ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಈ ಬಾರಿ ಕೇವಲ 21 ಸ್ಥಾನಕ್ಕೆ ಸೀಮಿತವಾಗುವ ಸಂದರ್ಭ ಎದುರಾಗಿದೆ. ಜತೆಗೆ ರಾಮನಗರದಲ್ಲಿ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರೇ ಸೋತಿದ್ದಾರೆ. ಈ ಹಂತದಲ್ಲಿ ಅವರು ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದು, ಸೋಲು, ಗೆಲುವು ತನಗೆ ಹೊಸದಲ್ಲ ಎಂದಿದ್ದಾರೆ.
ಈ ಸೋಲು ಅಂತಿಮವಲ್ಲ
ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ. ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು.
ಸೋತರೂ ಬದ್ಧತೆಯಿಂದ ಕೆಲಸ ಮಾಡಿದ್ದೇವೆ
ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ. ಈ ಹಿಂದೆ ಎಚ್.ಡಿ.ದೇವೇಗೌಡರು, ಎಚ್.ಡಿ.ರೇವಣ್ಣ, ನಾನೂ ಸೋತಿದ್ದೆವು. ಹಾಗೆಯೇ ಗೆದ್ದಾಗ ಬದ್ಧತೆಯಿಂದ ಜನಸೇವೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ.
ಕಾರ್ಯಕರ್ತರು ಧೃತಿಗೆಡಬೇಡಿ
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ. ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು. ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ.
ಇದನ್ನೂ ಓದಿ : Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ