Site icon Vistara News

Karnataka Elections 2023 : ಶೆಟ್ಟರೇ ಧ್ವಜ ಬದಲಿಸಿದ ಕೂಡಲೇ ನಿಮ್ಮ ವಿಚಾರಧಾರೆಯೂ ಬದಲಾಗುತ್ತಾ?; ಶೋಭಾ ಕರಂದ್ಲಾಜೆ ಪ್ರಶ್ನೆ

Kharge must apologize modi, for poisonous snake comment: Shobha Karandlaje

ಬೆಂಗಳೂರು: ಜಗದೀಶ ಶೆಟ್ಟರ್ ಅವರು ಧ್ವಜ ಬದಲಿಸಿದ ಕೂಡಲೇ ಅವರ ವಿಚಾರಧಾರೆಯೂ ಬದಲಾಗುತ್ತದೆಯೇ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ (Karnataka Elections 2023) ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶೆಟ್ಟರ್‌ ಅವರನ್ನು ಹಲವು ಪ್ರಶ್ನೆಗಳ ಮೂಲಕ ಕೆಣಕಿದ್ದಾರೆ.

ಪ್ರಶ್ನೆ 1: ಶೆಟ್ಟರ್ ಸಿಎಂ ಅಭ್ಯರ್ಥಿಯೇ? ಅಥವಾ ಅವರ ಸ್ಥಾನಮಾನ ಏನು? ಕಾಂಗ್ರೆಸ್‍ನಲ್ಲಿ ಈಗಾಗಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಹಲವು ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಹಾಗಿದ್ದಾಗ ಶೆಟ್ಟರ್ ಅವರ ಸ್ಥಾನ ಏನು?

ಪ್ರಶ್ನೆ 2. ಬಿಜೆಪಿ ರಾಷ್ಟ್ರೀಯ ವಿಚಾರ ಮತ್ತು ಆದರ್ಶಗಳಿರುವ ಪಕ್ಷ. ಭಾರತೀಯ ಜನಸಂಘದ ಕಾಲದಿಂದ ಬಿಜೆಪಿಯನ್ನು ಇದೇ ವಿಚಾರಧಾರೆಯಲ್ಲಿ ಬೆಳೆಸಲಾಗಿದೆ. ದೇಶ ಮೊದಲು ಇದು ನಮ್ಮ ವಿಚಾರ. ದೇಶಕ್ಕೆ ಅನ್ಯಾಯ ಆದಾಗ ಲೋಕಸಭೆಯಲ್ಲಿ ನಮ್ಮ ಪ್ರಾತಿನಿಧ್ಯ ಇರಬೇಕೆಂದು ಭಾರತೀಯ ಜನಸಂಘವನ್ನು ನಮ್ಮ ಹಿರಿಯರು ಆರಂಭಿಸಿದರು ಎಂದು ವಿವರಿಸಿದರು. ಜಗದೀಶ ಶೆಟ್ಟರ್ ಅವರ ಕುಟುಂಬದವರು ಜನಸಂಘದ ಕಾಲದಿಂದಲೇ ಆ ಪಕ್ಷದ ಕಾರ್ಯಕರ್ತರು. ವಾಜಪೇಯಿ, ಅಡ್ವಾಣಿ ಮತ್ತಿತರರು ಹುಬ್ಬಳ್ಳಿಗೆ ಬಂದಾಗ ಅವರ ಮನೆಯಲ್ಲೇ ಇರುತ್ತಿದ್ದರು. ಉಡುಪಿಯ ಡಾ. ವಿ.ಎಸ್.ಆಚಾರ್ಯರ ಕುಟುಂಬದಂತೆ ಅವರದು ಕೂಡ ಸಿದ್ಧಾಂತ, ವಿಚಾರಧಾರೆ ಒಪ್ಪಿದ ಕುಟುಂಬ. ಇವತ್ತು ಶೆಟ್ಟರ್ ಕಾಂಗ್ರೆಸ್ ಮನೆ ಸೇರಿ ಅಲ್ಲಿದ್ದಾರೆ. ಕಾಂಗ್ರೆಸ್ ಕುಟುಂಬ ಸದಸ್ಯರಾಗಿ ತೆರಳಿದ್ದಾರೆ. ಜೀವನಪರ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿ ರಾಜಕೀಯದ ಕೊನೆಯ ಅವಧಿಯಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಇಂಥ ಕುಟುಂಬದಿಂದ ಬಂದವರು ಹೇಗೆ ಜಾರಿ ಬಿದ್ದರು?

ಪ್ರಶ್ನೆ 3. ಅವರು ಹಿರಿಯ ನಾಯಕರು ಎಂದು ಗೌರವಿಸಿದ್ದೇವೆ. ರಾಮಮಂದಿರಕ್ಕಾಗಿ ಹೋರಾಟ ಮಾಡಿದ್ದೀರಿ. ನೀವೂ ರಾಮಮಂದಿರಕ್ಕಾಗಿ ಇಟ್ಟಿಗೆ ಹೊತ್ತವರು. ಕಾಂಗ್ರೆಸ್‍ನವರು ರಾಮಮಂದಿರ ವಿರೋಧಿಗಳು. ಕಾಂಗ್ರೆಸ್‍ನ ಕಪಿಲ್ ಸಿಬಲ್ ರಾಮಮಂದಿರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದವರು. ಅಂಥ ಪಕ್ಷಕ್ಕೆ ನೀವು ಸೇರಿದ್ದು ಹೇಗೆ?

ಪ್ರಶ್ನೆ 4. ಕಾಂಗ್ರೆಸ್ ಪಕ್ಷ ದೇಶದಲ್ಲಿ ಸರಕಾರ ಬಂದರೆ 370ನೇ ವಿಧಿ ರದ್ದು ಮಾಡುವುದಾಗಿ ಹೇಳುತ್ತದೆ. ಸಿಎಎ ರದ್ದು ಮಾಡುವುದಾಗಿ ಆ ಪಕ್ಷ ಹೇಳುತ್ತದೆ. ನೀವು ವಿಚಾರಕ್ಕೆ ಬದ್ಧರೆಂದು ಎಂಬ ಆಶಯ ನಮ್ಮದಾಗಿತ್ತು. ಈಗ ಏನು ಮಾಡುತ್ತೀರಿ?

ಪ್ರಶ್ನೆ 5. ವೀರಶೈವ ಸಮಾಜ ಮೀಸಲಾತಿಗೆ ಹೋರಾಟ ಮಾಡುತ್ತಿತ್ತು. ಬಿಜೆಪಿ ಸರಕಾರವು ಸಂವಿಧಾನವಿರುದ್ಧವಾಗಿ ಮತಬ್ಯಾಂಕಿಗಾಗಿ ನೀಡಿದ ಮೀಸಲಾತಿಯನ್ನು ರದ್ದು ಮಾಡಲು ಮತ್ತು ಲಿಂಗಾಯತ, ಒಕ್ಕಲಿಗರಿಗೂ ಮೀಸಲಾತಿ ನೀಡಲು ಮುಂದಾಯಿತು. ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಿಸಿದೆವು. ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಮತ್ತೆ ಮೀಸಲಾತಿ ಕೊಡುವುದಾಗಿ ಹೇಳುತ್ತಿದೆ. ಶೆಟ್ಟರ್ ಅವರು ಕೊಟ್ಟ ಮೀಸಲಾತಿ ಕಿತ್ತುಕೊಳ್ಳಬೇಡಿ ಎನ್ನುವ ಸ್ಥಾನದಲ್ಲಿ ಇದ್ದಾರಾ?

ಪ್ರಶ್ನೆ 6. ಬಿಜೆಪಿ ನಿಮ್ಮನ್ನು ಆರು ಬಾರಿ ಶಾಸಕರನ್ನಾಗಿ ಮಾಡಿದೆ. ಮುಖ್ಯಮಂತ್ರಿಯಾಗಲು ಅವಕಾಶ ನೀಡಿದೆ. ಒಮ್ಮೆ ರಾಜ್ಯಾಧ್ಯಕ್ಷ, ಮತ್ತೊಮ್ಮೆ ವಿರೋಧ ಪಕ್ಷದ ನಾಯಕರಾಗಿ ಮಾಡಿದೆ. ಕಾಂಗ್ರೆಸ್ ಮೀಸಲಾತಿ ಬದಲಿಸಲು ಸಿದ್ಧವಿದೆ. ಯಾರಿಂದ ಕಿತ್ತು ಕೊಡುತ್ತಾರೆ ಎಂದು ಕೇಳಬಲ್ಲಿರಾ?

ಪ್ರಶ್ನೆ 7. ಬಿಜೆಪಿ ನಿಮಗೇನು ಅನ್ಯಾಯ ಮಾಡಿತ್ತು? ಬಿ.ಬಿ.ಶಿವಪ್ಪ ಅವರಂಥ ಹಿರಿಯರು ಇದ್ದರೂ ಯಡಿಯೂರಪ್ಪ, ಅನಂತಕುಮಾರ್ ಅವರು ಮಾತನಾಡಿ, ಯುವಕರಾದ ನಿಮಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿದ್ದರು. ಶಾಸಕ ಸ್ಥಾನ ನೀಡಿಲ್ಲವೆಂಬ ಒಂದೇ ಒಂದು ಕಾರಣಕ್ಕಾಗಿ ನೀವು ಇಷ್ಟೊಂದು ದೊಡ್ಡ ಪಕ್ಷವನ್ನು ಸ್ಥಾನಮಾನ ಕೊಟ್ಟ ಪಕ್ಷವನ್ನು, ವೈಚಾರಿಕ ವಿರೋಧಿ ಪಕ್ಷ ಸೇರಲು ನಿಮಗೆ ಹೇಗೆ ಮನಸು ಒಪ್ಪಿತು?

ಪ್ರಶ್ನೆ 8. ಪತ್ರಿಕಾಗೋಷ್ಠಿಯಲ್ಲಿ ಅವರು ನಾಲ್ಕರಲ್ಲಿ ಮೂರನೇ ಭಾಗ ಬಿಜೆಪಿ ಬಗ್ಗೆ ಹೇಳಿದ್ದಾರೆ. ತಮಗೆ ಬಿಜೆಪಿ ಶಕ್ತಿ ತುಂಬಿದ ಬಗ್ಗೆ ತಿಳಿಸಿದ್ದಾರೆ. ಅಷ್ಟೆಲ್ಲ ಹೇಳಿದ ಮೇಲೆ ಬಿಜೆಪಿಯನ್ನು ತೆಗಳಬೇಕಿರಲಿಲ್ಲ. ನಿಮ್ಮ ಹುಟ್ಟೇ ಜನಸಂಘದ ವ್ಯವಸ್ಥೆಯಲ್ಲಿ ಆಗಿತ್ತು. ನಿಮ್ಮ ರಾಜಕೀಯದ ಅಂತಿಮ ಹಂತದಲ್ಲಿ ಬಿಜೆಪಿ ಬಿಟ್ಟು ಹೋದದ್ದು ಎಷ್ಟು ಸರಿ?

ರಾಷ್ಟ್ರೀಯ ಮಾಧ್ಯಮ ಸಹ-ಸಂಚಾಲಕರು ಸಂಜಯ್ ಮಯಾಂಕ್, ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ರಂಗನಾಯಕಲು, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಗುಜರಾತ್ ಮಾಧ್ಯಮ ಸಂಚಾಲಕ ಯಜ್ಞೇಶ್ ಧವೆ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಇದನ್ನೂ ಓದಿ : BJP Karnataka: ನರೇಂದ್ರ ಮೋದಿ-ಬಿ.ಎಸ್‌. ಯಡಿಯೂರಪ್ಪ, ಜನರ ನಡುವಿನಿಂದ ಬಂದ ನಾಯಕರು: ಶೋಭಾ ಕರಂದ್ಲಾಜೆ

Exit mobile version