ಬೆಂಗಳೂರು: ರಾಜ್ಯಾದ್ಯಂತ ಎಲ್ಲ ಕಡೆ ಪೊಲೀಸರು (Police department) ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು (Helmet Compulsory) ಎಂದು ರಾಜ್ಯ ಸರ್ಕಾರ (State Government) ಆದೇಶ ಹೊರಡಿಸಿದೆ. ಇತ್ತೀಚೆಗೆ ಪೊಲೀಸ್ ಸಿಬ್ಬಂದಿ ಬೈಕ್‌ನಿಂದ ಬಿದ್ದು ತಲೆಗೆ ಗಾಯವಾಗಿ ಮೃತಪಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಎಲ್ಲ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು (All Police staff) ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಸಂಚಾರಿ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿಯಾಗಿರುವ ಅಲೋಕ್ ಕುಮಾರ್ (ADGP Alok Kumar Order) ಅವರು ಈ ಕುರಿತಂತೆ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸದೇ, ರಸ್ತೆ ಅಪಘಾತಗಳು ಉಂಟಾಗಿ, ಕೆಲವು ಪೊಲೀಸ್ ಅಧಿಕಾರಿ / ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು ಮತ್ತು ಕಲವರು ಮೃತಪಟ್ಟಿರುವ ಘಟನಗಳು ಸಂಭವಿಸಿರುವುದು ಕಂಡು ಬಂದಿರುತ್ತದೆ. ಹೀಗಾಗಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರಿಗೆ ಮಹತ್ವದ ಸೂಚನೆಗಳು
- 1. ಇನ್ನು ಮುಂದೆ ರಾಜ್ಯಾದ್ಯಂತ ಎಲ್ಲಾ ಘಟಕಗಳಲ್ಲಿ (ಬೆಂಗಳೂರು ನಗರ ಒಳಗೊಂಡಂತೆ) ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಬೇಕು.
- 2. ಕೇವಲ ಧರಿಸುವುದಲ್ಲ. ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕಲಂ 129(ಎ) & (ಬಿ) ರಲ್ಲಿ ನಮೂದಿಸಿರುವಂತೆ ಹಾಗೂ ಸೂಚಿಸಿರುವಂತೆ ಕಡ್ಡಾಯವಾಗಿ ಸುರಕ್ಷಿತ ಹೆಲ್ಮೆಟನ್ನು ಧರಿಸಿ, ಅದನ್ನು ಭದ್ರವಾಗಿ ಕಟ್ಟಿಕೊಳ್ಳುವುದು.
ಇದನ್ನೂ ಓದಿ : Humanity by police : ಕ್ಯಾನ್ಸರ್‌ಪೀಡಿತ ಬಾಲಕನ IPS ಕನಸು ನನಸು ಮಾಡಿದ ಪೊಲೀಸರು
ಹೆಲ್ಮೆಟ್‌ನ ಅಗತ್ಯತೆಯನ್ನು ಸಾರಿ ಹೇಳಿದ ಬೆಳಗಾವಿ ದುರಂತ (Belagavi Tragedy)
ಬೆಳಗಾವಿ ಜಿಲ್ಲೆಯ ದೊಡವಾಡ ಪೊಲೀಸ್ ಠಾಣೆಯ ಎಎಸ್‌ಐ ವಿಜಯಕಾಂತ್ ಮಿಕಲಿ (51) ಅವರು ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಕರ್ತವ್ಯ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾರ ಬೈಕ್ ಅಪಘಾತದಲ್ಲಿ (Road Accident) ಮೃತಪಟ್ಟಿದ್ದರು.
ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬೈಕ್‌ನಲ್ಲಿ ಬರುತ್ತಿದ್ದಾಗ ಸ್ಕಿಡ್ ಆಗಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆ ಭಾಗಕ್ಕೆ ಬಲವಾಗಿ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವವಾಗಿ ವಿಜಯಕಾಂತ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಲ್ಮೆಟ್ ಹಾಕದೇ ಇದ್ದ ಕಾರಣಕ್ಕೆ ಕೆಳಗೆ ಬಿದ್ದ ರಭಸಕ್ಕೆ ತಲೆ ಭಾಗಕ್ಕೆ ಜೋರಾಗಿ ಪೆಟ್ಟಾಗಿತ್ತು, ಹೆಲ್ಮೆಟ್ ಹಾಕಿದರೆ ಜೀವ ಉಳಿಯುತ್ತಿತ್ತು ಎಂದು ಎಲ್ಲರೂ ಮಾತನಾಡಿಕೊಂಡಿದ್ದರು.
ಈ ಘಟನೆಯನ್ನು ಸಾರ್ವಜನಿಕರು ಎಷ್ಟು ಗಂಭೀರವಾಗಿ ಸ್ವೀಕರಿಸಿದರೋ ಗೊತ್ತಿಲ್ಲ. ಆದರೆ, ಪೊಲೀಸ್ ಇಲಾಖೆ ಮಾತ್ರ ಗಂಭೀರವಾಗಿ ತೆಗೆದುಕೊಂಡಿತು. ಬೆಳಗಾವಿ ಎಸ್‌ಪಿ ಡಾ. ಭೀಮಾ ಶಂಕರ್ ಗುಳೇದ ಅವರು ಹೆಲ್ಮೆಟ್ ಜಾಗೃತಿ ವಿಚಾರದಲ್ಲಿ ವಿಫಲವಾಗಿದ್ದಾರೆ ಎಂಬ ಕಾರಣ ನೀಡಿ ಪಿಎಸ್‌ಐ ನಂದೀಶ್ ಅವರನ್ನೇ ಅಮಾನತು ಮಾಡಿದ್ದರು. ಸಾರ್ವಜನಿಕರು ಹೆಲ್ಮೆಟ್ ಧರಿಸುವುದನ್ನು ಖಾತ್ರಿಪಡಿಸುವ ಹೊಣೆಗಾರಿಕೆ ಪೊಲೀಸರಿಗೆ ಇದೆ. ಆದರೆ, ಪೊಲೀಸರಲ್ಲೇ ಈ ಜಾಗೃತಿ ಇಲ್ಲ ಎಂದರೆ ಅದಕ್ಕೆ ಪಿಎಸ್‌ಐ ಹೊಣೆಯಾಗುತ್ತಾರೆ ಎಂದು ಎಸ್‌ಪಿ ತಮ್ಮ ಆದೇಶದ ಮೂಲಕ ತೋರಿಸಿದ್ದರು.