Site icon Vistara News

Karnataka Politics : ಸ್ತ್ರೀ ಎಂದರೆ ಅಷ್ಟೇ ಸಾಕೆ?; ಮಹಿಳಾ ದೌರ್ಜನ್ಯ ವಿಚಾರದಲ್ಲಿ ಕಾಂಗ್ರೆಸ್‌-ಬಿಜೆಪಿ ವಾರ್‌

Woman issues Congress-BJP Fight

ಬೆಂಗಳೂರು: ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರನ್ನು (Muslim Woman) ನೈತಿಕ ಪೊಲೀಸ್‌ ಗಿರಿಯ (Moral policing) ಹೆಸರಿನಲ್ಲಿ ಏಳು ಮಂದಿ ಮುಸ್ಲಿಂ ಯುವಕರು ಸಾಮೂಹಿಕವಾಗಿ ಅತ್ಯಾಚಾರ (Gang rape of Muslim woman) ಮಾಡಿದ ಘಟನೆ ಇದೀಗ ರಾಜಕೀಯ ತಿರುವು ಪಡೆದಿದೆ. ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯು (BJP Karnataka) ರಾಜ್ಯ ಸರ್ಕಾರದ (State Government) ವಿರುದ್ಧ ಪ್ರಹಾರ ನಡೆಸಿದೆ.

ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ. ಮಹಿಳೆಯರನ್ನು ಸುರಕ್ಷಿತವಾಗಿಸಬೇಕಿದ್ದ ಹೊದಿಕೆಯ ತುಂಬಾ ರಂಧ್ರಗಳೇ ತುಂಬಿವೆ. ರಾಜ್ಯವನ್ನು ಕಾಂಗ್ರೆಸ್ ತಾಲಿಬಾನ್ ಅನ್ನಾಗಿಸುತ್ತಿದೆಯೇ..? ಎಂದು ಅದು ಟ್ವಿಟರ್‌ ಮೂಲಕ ಪ್ರಶ್ನೆ ಮಾಡಿದೆ.

ಬೆಳಗಾವಿಯ ಒಬ್ಬ ಮಹಿಳೆಯ ಅಮಾನವೀಯ ಕಿರುಕುಳ ಮತ್ತು ದೌರ್ಜನ್ಯ., ಮತ್ತೊಬ್ಬ ಮಹಿಳೆಯ ಮೂಗಿಗೆ ಕತ್ತರಿ, ಈಗ ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ. ಗೃಹಲಕ್ಷ್ಮಿಯರಿಗೆ ಇಂತಹ ಭಾಗ್ಯವೇ..? ಎಂದು ಅದು ಪ್ರಶ್ನೆ ಮಾಡಿದೆ.

ಗಾಂಧಿ ತತ್ವದ ಬಗ್ಗೆ ಭಾಷಣ ಮಾಡುವ ಸಿದ್ದರಾಮಯ್ಯನವರೇ, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸ್ತ್ರೀ ಸ್ವಾತಂತ್ರ್ಯ ಮತ್ತು ಘನತೆ ಆದರ್ಶ ನಿಮ್ಮ ನಾಯಕತ್ವದಲ್ಲಿ ಛಿದ್ರ ಛಿದ್ರವಾಗಿದೆ. ನಮ್ಮ ತಾಯಂದಿರ, ಸಹೋದರಿಯರ, ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರಂಟಿ ಇಲ್ಲದಾಗ. ನಿಮ್ಮ ಗ್ಯಾರಂಟಿಗಳು ಇನ್ನೆಷ್ಟು ಯೋಗ್ಯ ಎನಿಸಿಕೊಳ್ಳುತ್ತವೆ..? ಎಂದು ಬಿಜೆಪಿ ರಾಜ್ಯ ಘಟಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.

ಸ್ತ್ರೀ ಎಂದರೆ ಅಷ್ಟೇ ಸಾಕೆ? ಕಾನೂನು ಸುವ್ಯವಸ್ಥೆ ಮೇಲೆ ಹಿಡಿತ ಇಲ್ಲವೇಕೆ ಎಂಬ ಪ್ರಶ್ನೆಯೊಂದಿಗೆ ಪೋಸ್ಟರ್‌ ಬಿಡುಗಡೆ ಮಾಡಿರುವ ಬಿಜೆಪಿ, ಇನ್ನೊಂದರಲ್ಲಿ, ದಿನೇದಿನೇ ಹೆಚ್ಚುತ್ತಿದೆ ಮಹಿಳೆಯ ಆರ್ತನಾದ, ಕಿವುಡಾಗಿದೆ ಕಾಂಗ್ರೆಸ್‌ ಸರ್ಕಾರ ಎಂದು ಚಾಟಿ ಬೀಸಿದೆ. CongFailsWomenSafety ಎಂಬ ಹ್ಯಾಷ್‌ ಟ್ಯಾಗ್‌ನಡಿ ಅದು ದಾಳಿ ಮಾಡಿದೆ.

ತಿರುಗೇಟು ನೀಡಿದ ಗೃಹ ಸಚಿವ ಪರಮೇಶ್ವರ್‌

ಬಿಜೆಪಿಯ ಈ ಸಾಮಾಜಿಕ ಜಾಲತಾಣದ ದಾಳಿಗೆ ಗೃಹ ಸಚಿವ ಜಿ. ಪರಮೇಶ್ವರ್‌ ತಿರುಗೇಟು ನೀಡಿದ್ದಾರೆ. ಹಾವೇರಿಯಲ್ಲಿ ನಡೆದ ನೈತಿಕ ಪೊಲೀಸಗಿರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನಿಖೆ ಮುಕ್ತಾಯ ಆಗೋವರೆಗೂ ಊಹೆ ಮಾಡೋದಕ್ಕೆ ಆಗೊದಿಲ್ಲ. ತನಿಖೆಯ ವರದಿ ಬರಲಿ ಕಾನೂನು ಕ್ರಮವಾಗುತ್ತದೆ ಎಂದು ಹೇಳಿದ್ದರು.

ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅವರ ಸರ್ಕಾರ ನಡೆಸುವಾಗ ಯಾವ ಘಟನೆಯೂ ಆಗಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : Moral Policing : ಹಿಂದು ಹುಡುಗ್ರ ಜತೆ ತಿರುಗುವ ಮುಸ್ಲಿಂ ಹುಡುಗೀರೇ ಟಾರ್ಗೆಟ್‌!

ʻʻಕಾನೂನಿನ ಚೌಕಟ್ಟಿನ ಒಳಗೆ ಏನು ಮಾಡಬೇಕೋ ಮಾಡ್ತಿವಿ. ನಿರ್ಭಯ ಅಡಿ ಹಲವು ಕಾರ್ಯಕ್ರಮ ಮಾಡಿದ್ದೇವೆ. ಮಹಿಳೆಯ ರಕ್ಷಣೆಗಾಗಿ ಹಲವು ಕಾರ್ಯಕ್ರಮ ಮಾಡಿದ್ದೇವೆ. ಇಂತಹ ಘಟನೆ ಆದಾಗ ಏನು ಕ್ರಮ ಆಗಬೇಕು ತಗೆದುಕೊಳ್ಳುತ್ತೇವೆ. ಎಲ್ಲಿಯಾದ್ರೂ ಘಟನೆ ಆದ ಕೂಡಲೇ ಇಡೀ ರಾಜ್ಯದಲ್ಲಿ ಸುರಕ್ಷತೆ ಇಲ್ಲ ಅನ್ನೋದು ಸರಿಯಲ್ಲ‌ ಎಂದು ಹೇಳಿದ್ದಾರೆ ಗೃಹ ಸಚಿವ ಜಿ. ಪರಮೇಶ್ವರ್‌.

Exit mobile version