ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ನಾಯಕರೇ (Leaderless position) ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನೇ ನಗದೀಕರಿಸಿಕೊಂಡು ಬಿಜೆಪಿಯ ಶಾಸಕರನ್ನು ಆಪರೇಷನ್ ಹಸ್ತ (Operation Hasta) ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ನಡೆಸುತ್ತಿರುವ ಪ್ರಯತ್ನಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಬ್ರೇಕ್ ಹಾಕಿದಂತೆ (Karnataka Politics) ಮೇಲ್ನೋಟಕ್ಕೆ ಕಾಣುತ್ತಿದೆ.
ಕಳೆದ ಕೆಲವು ದಿನಗಳಿಂದ ಬಿಜೆಪಿ ಶಾಸಕರ ಆಪರೇಷನ್‌ನ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ, ಕೆಲವು ಶಾಸಕರು ಕೂಡಾ ನೇರವಾಗಿ ತಮಗೆ ಬಿಜೆಪಿಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಮಾತನ್ನು ಆಡುತ್ತಿದ್ದಾರೆ. ಅಷ್ಟಾದರೂ ಯಾವ ಬಿಜೆಪಿ ನಾಯಕರೂ ಈ ಪರಿಸ್ಥಿತಿಯನ್ನು ತಣ್ಣಗೆ ಮಾಡುವ ಇಲ್ಲವೇ ವಿಶ್ವಾಸ ತುಂಬುವ ಪ್ರಯತ್ನ ನಡೆಸಿರಲಿಲ್ಲ. ಇದು ಇನ್ನಷ್ಟು ಮಂದಿ ಬಿಜೆಪಿ ಶಾಸಕರು, ನಾಯಕರು ಕಾಂಗ್ರೆಸ್ ಕಡೆಗೆ ವಾಲುವ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಅಖಾಡಕ್ಕೆ ಇಳಿದಿದ್ದು, ಇದು ಬಿಜೆಪಿಗೆ ಆಂತರಿಕವಾಗಿ ಬಲವನ್ನು ತುಂಬಿದಂತಾಗಿದೆ.
ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಮನೆಯಲ್ಲೇ ಆಯೋಜಿಸಿದ್ದ ಸಭೆಗೆ ಬೆಂಗಳೂರಿನ 16 ಬಿಜೆಪಿ ಶಾಸಕರ ಪೈಕಿ ಏಳು ಮಂದಿ ಬಂದಿರಲಿಲ್ಲ. ಅವರಲ್ಲಿ ಎಸ್.ಟಿ. ಸೋಮಶೇಖರ್ ಅವರೊಬ್ಬರೇ ಸದ್ಯ ಬಿಜೆಪಿಯಿಂದ ದೂರ ಸರಿಯುವ ಅಭಿಪ್ರಾಯ ಹೊಂದಿದವರು ಎನ್ನಲಾಗಿದೆ. ಉಳಿದವರು ನಾನಾ ಕಾರಣಗಳಿಂದ ಬಂದಿರಲಿಲ್ಲ ಎನ್ನಲಾಗಿದೆ. ಶಾಸಕರಾದ ಮುನಿರತ್ನ, ಗೋಪಾಲಯ್ಯ ಮತ್ತು ಬೈರತಿ ಬಸವರಾಜ್ ಪಕ್ಷ ಬಿಡುವುದಿಲ್ಲ ಎನ್ನುವುದು ಬಿಜೆಪಿಯಲ್ಲಿ ಖಾತ್ರಿಯಾಗಿದೆ.
ಕಠಿಣ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಮುನ್ನಡೆಸುವವರು ಯಾರು? ಜವಾಬ್ದಾರಿ ವಹಿಸಿಕೊಳ್ಳುವವರು ಯಾರು ಎನ್ನುವ ಪ್ರಶ್ನೆ ಜೋರಾಗಿ ಕೇಳಿಬಂದಾಗ ಯಡಿಯೂರಪ್ಪ ಎಂಟ್ರಿ ಕೊಟ್ಟಿದ್ದು ಹಲವು ನಾಯಕರಿಗೆ ಜೀವ ಬಂದಂತಾಗಿದೆ. ಹೀಗಾಗಿ ಉಳಿದ ನಾಯಕರೂ ಧೈರ್ಯದಿಂದ ಮಾತನಾಡಲು ಆರಂಭ ಮಾಡಿದ್ದಾರೆ. ಜತೆಗೆ ಸಭೆಗಳನ್ನೂ ಆಯೋಜನೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಅವರು ಎಸ್.ಟಿ. ಸೋಮಶೇಖರ್ ಅವರ ಜತೆ ಶನಿವಾರ ಮಾತುಕತೆ ನಡೆಸಿದ್ದಾರೆ.
ಸಮಸ್ಯೆ ಬಗೆಹರಿಸಲು ಹೊಣೆ
ರಾಜ್ಯದಲ್ಲಿ ಬಿಜೆಪಿ ಬಿಟ್ಟು ಹೋಗುವ ವಿಚಾರದಲ್ಲಿ ಹಲವರ ಹೆಸರು ಕೇಳಿಬರುತ್ತಿದ್ದರೂ ಅಂತಿಮವಾಗಿ ಬಿಜೆಪಿಗೆ ಸಂಶಯವಿರುವುದು ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಮೇಲೆ ಮಾತ್ರ ಎನ್ನಲಾಗಿದೆ. ಸೋಮಶೇಖರ್ ಅವರಿಗೆ ಸ್ಥಳೀಯವಾಗಿ ಬಿಜೆಪಿ ನಾಯಕರಿಂದ ತುಂಬ ಕಿರಿಕಿರಿಯಾಗಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರು ಮುತುವರ್ಜಿ ವಹಿಸಿಲ್ಲ ಎನ್ನುವ ನೋವಿದೆ.
ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ ಬಿ.ಎಸ್. ಯಡಿಯೂರಪ್ಪ ಅವರು ಸೋಮಶೇಖರ್ ಅವರ ಸಮಸ್ಯೆಯನ್ನು ಪರಿಹರಿಸುವ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಿದ್ದಾರೆ.
ʻʻಸೋಮಶೇಖರ್ ಜತೆ ಮಾತನಾಡಿ ಸಮಸ್ಯೆ ಪರಿಹರಿಸಬೇಕು. ಬೆಂಗಳೂರಿನ ಉಳಿದ ನಾಯಕರೂ ಸೋಮಶೇಖರ್ ಜತೆಗೆ ಮಾತನಾಡಿ. ಸ್ಥಳೀಯ ಮುಖಂಡರ ಜತೆ ಮಾತುಕತೆ ಮಾಡಿ ಸಮನ್ವಯ ಸಾಧಿಸಿ. ಎಲ್ಲರೂ ಒಟ್ಟಾಗಿ ಹೋಗುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೆ ಪಕ್ಷ ಬಿಡದಂತೆ ಖಾತ್ರಿ ಮಾಡಿʼʼ ಎಂದು ಬಿಎಸ್‌ವೈ ಹೇಳಿದ್ದಾರೆ ಎನ್ನಲಾಗಿದೆ.
ʻʻಶಿವರಾಮ್ ಹೆಬ್ಬಾರ್ ಜತೆಗೂ ಮಾತನಾಡಿʼʼ ಎಂದು ಬೊಮ್ಮಾಯಿ ಅವರಿಗೆ ಸೂಚಿಸಿರುವ ಅವರು, ʻʻವಲಸಿಗರು ಪಕ್ಷ ಬಿಡುವ ಚರ್ಚೆಯಾದರೆ ಸ್ಪಷ್ಟೀಕರಣ ಕೊಡಿಸಿ. ಯಾರೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನೆ ಆಗಬೇಕು. ಸರ್ಕಾರ ವೈಫಲ್ಯ ಮರೆಮಾಚಲು ಈ ಸುದ್ದಿ ಹರಿಸುತ್ತಿದೆ ಎಂಬ ಸಂದೇಶ ರವಾನೆ ಆಗಬೇಕುʼʼ ಎಂದಿದ್ದಾರೆ.
ಯಾರೇ ಆಯ್ಕೆಯಾದರೂ ಬೆಂಬಲ ನೀಡಬೇಕು
ʻʻಎಲ್ಲ ಬಿಜೆಪಿ ನಾಯಕರು ಆಕ್ಟಿವ್ ಆಗಬೇಕು. ವಿಪಕ್ಷ ನಾಯಕ, ಅಧ್ಯಕ್ಷರ ಆಯ್ಕೆ ಸದ್ಯದಲ್ಲೇ ನಡೆಯಲಿದೆ. ಯಾರೇ ಆಯ್ಕೆ ಆದರೂ ಜತೆಯಾಗಿ ನಿಲ್ಲಬೇಕು. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಬೇಕು. ಲೋಕಸಭೆ ಚುನಾವಣೆಯೇ ನಮ್ಮ ಗುರಿʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಎಸ್‌ವೈ ಎಂಟ್ರಿಯಾದ ಕೂಡಲೇ ಠುಸ್ ಆಗುತ್ತಾ ಡಿಕೆಶಿ ಪ್ಲ್ಯಾನ್
ಡಿ.ಕೆ. ಶಿವಕುಮಾರ್ ಅವರು ಪ್ರಮುಖವಾಗಿ ಟಾರ್ಗೆಟ್ ಮಾಡಿದ್ದು ಎಸ್.ಟಿ. ಸೋಮಶೇಖರ್ ಮತ್ತು ಬೈರತಿ ಬಸವರಾಜ್ ಅವರನ್ನು. ಬೈರತಿ ಬಸವರಾಜ್‌ಗೆ ಸಿದ್ದರಾಮಯ್ಯ ಅವರ ಮೇಲೆ ಸಿಟ್ಟಿರುವುದರಿಂದ ಅವರನ್ನು ಸೇರಿಸಿಕೊಳ್ಳುವುದು ಕಷ್ಟ. ಎಸ್‌ಟಿ ಸೋಮಶೇಖರ್ ಅವರು ಬಿಎಸ್‌ವೈ ಅವರ ಮನವೊಲಿಕೆಗೆ ಬಾಗುವ ಸಾಧ್ಯತೆ ಕಂಡುಬಂದರೆ ಅದು ಡಿ.ಕೆ.ಶಿಗೆ ಹಿನ್ನಡೆಯಾದಂತೆ.
ಇದನ್ನೂ ಓದಿ: BJP Politics : ಬಿಎಸ್‌ವೈ ಸಭೆಗೆ ಸೋಮಶೇಖರ್, ಬೈರತಿ ಗೈರು; ಯಡಿಯೂರಪ್ಪ ನೀಡಿದ ಮಹತ್ವದ ಸುಳಿವೇನು?
ಡಿ.ಕೆ.ಶಿವಕುಮಾರ್‌ಗೆ ಮುನಿರತ್ನ, ಜಾರಕಿಹೊಳಿ ಬೇಕಾಗಿಲ್ಲ!
ಡಿ.ಕೆ. ಶಿವಕುಮಾರ್‌ಗೆ ರಾಜರಾಜೇಶ್ವರಿ ಕ್ಷೇತ್ರದಿಂದ ಗೆದ್ದಿರುವ ಮುನಿರತ್ನ ಮತ್ತು ಬದ್ಧ ವಿರೋಧಿಯಂತಿರುವ ರಮೇಶ್ ಜಾರಕಿಹೊಳಿಯನ್ನು ತೆಗೆದುಕೊಳ್ಳುತ್ತಿಲ್ಲ. ಒಂದೊಮ್ಮೆ ಮುನಿರತ್ನ ಬಂದರೂ ವಿಧಾನ ಪರಿಷತ್ ಸ್ಥಾನ ಕೊಡುವುದಾಗಿ ಹೇಳಿರುವುದು ಮುನಿರತ್ನ ಸೇರ್ಪಡೆಗೆ ಹಿನ್ನಡೆಯಾಗಿದೆ.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಎಚ್. ಕುಸುಮಾ ಅವರನ್ನು ನಿಲ್ಲಿಸಿ ಗೆಲ್ಲಿಸುವ ಪ್ರಯತ್ನದಲ್ಲಿರುವ ಡಿ.ಕೆ. ಬ್ರದರ್ಸ್ ಮುನಿರತ್ನ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸುವ ಯೋಚನೆಯಲ್ಲಿದ್ದರು. ಆದರೆ, ತಾನು ಮತ್ತೊಬ್ಬ ಶಂಕರ್ ಆಗಲಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಆರ್ ಶಂಕರ್ ಬಿಜೆಪಿ ಸೇರ್ಪಡೆ ಬಳಿಕ ಟಿಕೆಟ್ ನಿರಾಕರಿಸಲಾಗಿತ್ತು.
ಬೈರತಿ ಬಸವರಾಜ್‌ಗೆ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದು ನಿಜವಾದರೂ ಸಿದ್ದರಾಮಯ್ಯ, ಜಾರ್ಜ್, ಬೈರತಿ ಸುರೇಶ್ ವಿರೋಧವಿದೆ. ಅಲ್ಲದೆ ಬಿಜೆಪಿಯಲ್ಲಿ ಪ್ರಭಾವಿ ಕುರುಬ ಸಮುದಾಯದ ನಾಯಕರ ಕೊರತೆ ಇರುವುದರಿಂದ ಅವರನ್ನು ಬಿಜೆಪಿ ಹೇಗಾದರೂ ಮಾಡಿ ಉಳಿಸಿಕೊಳ್ಳುವುದು ಖಚಿತವಾಗಿದೆ. ಹೀಗಾಗಿ ಈ ಹಂತದಲ್ಲಿ ಆಪರೇಷನ್‌ಗೆ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.