Site icon Vistara News

Karnataka Politics : ಪ್ರಿಯಾಂಕ್‌ ಖರ್ಗೆಗೆ ಮತಿಭ್ರಮಣೆ ಆದಂತಿದೆ ಎಂದ ಬಿಜೆಪಿ ನಾಯಕ ಛಲವಾದಿ

Chalavadi Narayana swamy

ಬೆಂಗಳೂರು : ಕಾಂಗ್ರೆಸ್‌ ನಾಯಕ, ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸುವ ಮಟ್ಟಕ್ಕೆ ಹೋಗಿದ್ದಾರೆ ನರಿ ಕೂಗು ಗಿರಿಗೆ ಮುಟ್ಟುವುದಿಲ್ಲ. ನರಿ ಕೆಲಸ ನರಿಯೇ ಮಾಡಬೇಕು. ಗಿರಿ ಕೆಲಸ ಗಿರಿಯೇ ಮಾಡಬೇಕು. ಪ್ರಿಯಾಂಕ್ ಖರ್ಗೆ ಅವರು ಮತಿಭ್ರಮಣೆ ಆದವರಂತೆ ಹೇಳಿಕೆ ಕೊಡುತ್ತಿದ್ದಾರೆ (Karnataka Politics) ಎಂದು ಬಿಜೆಪಿ ರಾಜ್ಯ ವಕ್ತಾರ (BJP Spokesperson) ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್‌ ಖರ್ಗೆ ಅವರು ಇನ್ನೂ ಪಡ್ಡೆ ಹುಡುಗ ಇರಲಿ ಎಂದು ನಾವು ಮಾತನಾಡಿರಲಿಲ್ಲ. ನಾನು 1978-79ರಲ್ಲಿ ರಾಜಕಾರಣಕ್ಕೆ ಬಂದವ. ಆಗ ಅವರು ಹುಟ್ಟಿರಬೇಕಷ್ಟೇ ಎಂದು ಹೇಳಿದರು.

ಪ್ರತಿಯೊಬ್ಬರ ಮನಸ್ಸಿನಲ್ಲಿ ಶ್ರೀರಾಮ ಇದ್ದಾನೆ. ಪ್ರಿಯಾಂಕ್ ಖರ್ಗೆಯವರ ಮನೆಯ ಒಳಗಡೆ ರಾಮ ನಾಮ, ಹೊರಗಡೆ ಮಾತ್ರ ಓಟ್ ಓಲೈಕೆಗಾಗಿ ರಹೀಮ ನಾಮ ಎಂದು ಛಲವಾದಿ ಆರೋಪಿಸಿದರು. ನಿಮ್ಮ ಬಂಡವಾಳ ನನಗೆ ಗೊತ್ತಿದೆ. ಇಷ್ಟೆಲ್ಲ ಮಾಡಿದರೂ ನಿಮ್ಮ ಪಕ್ಷಕ್ಕೆ ಭವಿಷ್ಯ ಇಲ್ಲ. ಜನತೆ ನಿಮ್ಮ ಅಲ್ಪಸಂಖ್ಯಾತರ ಓಲೈಕೆಗೆ ಪಾಠ ಕಲಿಸುತ್ತಾರೆ ಎಂದು ನಾರಾಯಣ ಸ್ವಾಮಿ ಹೇಳಿದರು.

ಕಾಂಗ್ರೆಸ್‌ಗೆ ಜನರಿಂದಲೇ ಉತ್ತರ ಎಂಬ ಬಿಜೆಪಿ

ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್‌ ತುಂಬ ಸಂಕುಚಿತವಾಗಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ಸಿನ ಸಂಕುಚಿತ ಭಾವನೆಗಳಿಗೆ ಜನರು ಉತ್ತರ ಕೊಡಲಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಸಡಗರದ ವಾತಾವರಣ ಇದೆ. ಜನರ ಅಸ್ಮಿತೆಯಾಗಿದ್ದ ಶ್ರೀರಾಮಮಂದಿರ ನಿರ್ಮಾಣ ಆಗಿದ್ದು, 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದನ್ನು ಕಾಂಗ್ರೆಸ್‍ನವರು ಮನ ಬಂದಂತೆ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನಿಲುವನ್ನು ವಿರೋಧಿಸುವುದಾಗಿ ಛಲವಾದಿ ಹೇಳಿದರು.

ಬದಲಾದ ಸಿದ್ದರಾಮಯ್ಯ, ಉಳಿದವರಿಗೆ ಉತ್ತರ ಸಿಗಲಿದೆ!

ಅಯೋಧ್ಯೆಗೆ ಹೋಗುವುದಿಲ್ಲ ಎಂಬ ತಮ್ಮ ಮಾತಿಗೆ ಜನರಿಂದ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಮಾತು ಬದಲಿಸಿದ್ದಾರೆ. ಈಗ ಹೋಗುವುದಿಲ್ಲ, ಪ್ರಾಣ ಪ್ರತಿಷ್ಠೆ ಆದ ಬಳಿಕ ಹೋಗುತ್ತೇನೆ ಎಂದು ಹೇಳಿಕೆಯನ್ನು ಬದಲಿಸಿದ್ದಾರೆ. ರಾಮಪ್ರಜ್ಞೆಯನ್ನು ಅವರ ಮನಸ್ಸಿನಲ್ಲಿ ತಂದ ಜನತೆಗೆ ಕೃತಜ್ಞತೆಗಳು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಇದೇ ವೇಳೆ ಕೆ.ಎನ್.ರಾಜಣ್ಣ, ಪ್ರಿಯಾಂಕ್ ಖರ್ಗೆಯವರು ಮನ ಬಂದಂತೆ ಮಾತನಾಡಿದ್ದು, ಸೂಕ್ತ ಸಂದರ್ಭದಲ್ಲಿ ಸರಿಯಾದ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದರು.

ಕೆಲವು ಕಡೆಗಳಲ್ಲಿ ಶ್ರೀರಾಮನ ಪೋಸ್ಟರ್‌ಗಳಿಗೆ ಕತ್ತರಿ ಹಾಕಲಾಗುತ್ತಿದೆ. ಹಿಂದೂ ಪರ ಕಾರ್ಯಕರ್ತರು ಹಂಚುತ್ತಿರುವ ಮಂತ್ರಾಕ್ಷತೆಯನ್ನು ಕಾಂಗ್ರೆಸ್ಸಿಗರು ಬಿಸಾಡುತ್ತಿದ್ದಾರೆ. ನಾವು ಕೊಟ್ಟ ಅಕ್ಕಿಯನ್ನು ಇವರು ಮಂತ್ರಾಕ್ಷತೆಗೆ ಬಳಸುವುದಾಗಿ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ನಡೆಯನ್ನು ಪ್ರಶ್ನಿಸಿದ ಅವರು, ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿ ಮೋದಿಜೀ ಅವರದು. ನಿಮ್ಮ ಅಕ್ಕಿ ಎಲ್ಲಿ? ಎಂದು ಪ್ರಶ್ನಿಸಿದರು.

ಅಂಬೇಡ್ಕರ್‌ನಲ್ಲೂ ರಾಮ, ಅಯೋಧ್ಯೆಯಲ್ಲೂ ದಲಿತ ಪೂಜಾರಿಗಳು

ಸಂವಿಧಾನದಲ್ಲೂ ರಾಮ ಇದ್ದಾರೆ. ಡಾ. ಭೀಮರಾವ್ ರಾಮ್‍ಜೀ ಅಂಬೇಡ್ಕರ್ ಹೆಸರಿನಲ್ಲಿ ರಾಮ ಇದ್ದಾನೆ. ಹಿಂದೂ ಧರ್ಮದ ನ್ಯೂನತೆ ಸರಿಪಡಿಸಲು ಅವರು ಹೋರಾಟ ಮಾಡಿದ್ದರು. ಪರಿವರ್ತನೆಯ ದಾರಿ ತೋರಲು ಅವರು ಬೌದ್ಧ ಧರ್ಮಕ್ಕೆ ಹೋದರು. ಅವರು ಕ್ರೈಸ್ತ, ಇಸ್ಲಾಂ ಧರ್ಮಕ್ಕೆ ಹೋಗಲಿಲ್ಲ ಎಂದು ವಿಶ್ಲೇಷಿಸಿದರು. ಅಯೋಧ್ಯೆ ಪೂಜಾ ಕೆಲಸಕ್ಕೆ ನೇಮಿಸಿದ 24 ಪೂಜಾರಿಗಳ ಪೈಕಿ ಇಬ್ಬರು ದಲಿತರಿದ್ದಾರೆ ಎಂದರು. ಹಿಂದೂ ಧರ್ಮ ಬದಲಾಗುತ್ತಿದೆ; ಪರಿವರ್ತನೆಗೆ ಇದು ಉದಾಹರಣೆ ಎಂದರು.

ಸಿಎಂ ಪ್ರೀತಿ ಗಳಿಸಲು ವಿಪರೀತ ಆಡುತ್ತಿರುವ ರಾಜಣ್ಣ!

ʻʻಮಾನ್ಯ ಕೆ.ಎನ್.ರಾಜಣ್ಣ ಬಹಳ ಮಾತನಾಡಿದ್ದಾರೆ. ರಾಮನ ಟೆಂಟ್, ಚಿಕ್ಕ ಚಿಕ್ಕ ಗೊಂಬೆಗಳಿದ್ದವು ಎಂದಿದ್ದಾರೆ. ಶ್ರೀರಾಮ ಮಂದಿರ ಇದ್ದುದು ನಿಜ. ಬಾಬರ್ ಅದನ್ನು ಒಡೆದುದು ನಿಜ. ಅಲ್ಲಿ ಬಾಬರಿ ಮಸೀದಿ ನಿರ್ಮಿಸಿದ್ದೂ ನಿಜ. ಇದನ್ನು ಮುಸ್ಲಿಮರು ಒಪ್ಪಿಕೊಂಡಿದ್ದಾರೆ. 370ನೇ ವಿಧಿ ರದ್ದು, ಜಮ್ಮು- ಕಾಶ್ಮೀರದಲ್ಲಿ ಡಾ. ಅಂಬೇಡ್ಕರರ ಸಂವಿಧಾನ ಜಾರಿ, ರಾಮಮಂದಿರದಲ್ಲಿ ಮಂದಿರ ನಿರ್ಮಿಸುವುದಾಗಿ ಬಿಜೆಪಿ ತನ್ನ ಉಗಮದಿಂದಲೇ ಹೇಳಿತ್ತು. ಇದಕ್ಕೆ ನಿಮಗೆ ಯಾಕೆ ಬೆಂಕಿ ಬಿದ್ದಿದೆʼʼ ಎಂದು ಛಲವಾದಿ ಪ್ರಶ್ನಿಸಿದರು.

ಕೆ.ಎನ್.ರಾಜಣ್ಣ ಅವರು ಮೈಸೂರಿನ ಕಲ್ಲಿನಿಂದ ಶ್ರೀರಾಮ ವಿಗ್ರಹ ಆಗಿದೆ ಎಂದಿದ್ದಾರೆ. ಇದು ಖುಷಿ ಪಡಬೇಕಾದ ವಿಷಯ. ಕೆ.ಎನ್.ರಾಜಣ್ಣ ಅವರು ಸಿಎಂ ಕೃಪಾಕಟಾಕ್ಷ ಗಳಿಸಲು ಹೀಗೆ ಮಾಡಿದ್ದಾರೆ ಎಂದು ಟೀಕಿಸಿದರು.

ಕೆ.ಎನ್‌. ರಾಜಣ್ಣಗೆ ಸಾಮಾನ್ಯ ಜ್ಞಾನದ ಕೊರತೆ

ಟಿಪ್ಪು ಸುಲ್ತಾನ್ ಕೆಆರ್‍ಎಸ್ ಕಟ್ಟಿದ್ದಾಗಿ ಸುಳ್ಳು ಹೇಳಿದ್ದಾರೆ. ಜನ ಪ್ರಬುದ್ಧರಾಗುವವರೆಗೂ ಕಾಂಗ್ರೆಸ್ ಸುಳ್ಳು ಹೇಳುತ್ತಿತ್ತು. ಈಗಲೂ ಅದನ್ನೇ ಮುಂದುವರೆಸಿದ್ದಾರೆ. ಟಿಪ್ಪು ಸುಲ್ತಾನ್ ದೇವನಹಳ್ಳಿಯಲ್ಲಿ 1751ರಲ್ಲಿ ಹುಟ್ಟಿದ್ದು, 1799ರಲ್ಲಿ ಮೃತಪಟ್ಟವರು. ಕೆ.ಆರ್.ಎಸ್.ಗೆ ಆಗ ಅಡಿಪಾಯ ಹಾಕಿತ್ತೇ? 1911ರಲ್ಲಿ ಪ್ರಾರಂಭವಾಗಿ 1931ರಲ್ಲಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಮುಗಿದಿದೆ. ಇದು ಚರಿತ್ರೆ. ಸಚಿವರಿಗೆ ಸಾಮಾನ್ಯ ಜ್ಞಾನದ ಕೊರತೆ ಎಂದು ಜನರು ಹೇಳುತ್ತಾರೆ ಎಂದು ಆಕ್ಷೇಪಿಸಿದರು.

ದಿನೇಶ್‌ ಗುಂಡೂರಾವ್‌ ಚಪ್ಪಲಿ ಹೇಳಿಕೆ ಸರೀನಾ?

ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಬಂದರೆ ಚಪ್ಪಲಿಯಲ್ಲಿ ಹೊಡೆಯಲು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದು ಕೆಟ್ಟ ಪದವಲ್ಲವೇ? ನಾವು ಮಾತನಾಡಿದರೆ ಬಿಜೆಪಿ ಹೇಳಿಕೆ ಎನ್ನುತ್ತಾರೆ. ಆದರೆ, ಅವರದು ವೈಯಕ್ತಿಕ ಎನ್ನುತ್ತಾರೆ ಎಂದರು.

ಇದನ್ನೂ ಓದಿ : Priyank Kharge: ಸುಳ್ಳು ಆರೋಪ ಮಾಡಿದ ಬಿಜೆಪಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ: ಪ್ರಿಯಾಂಕ್‌ ಖರ್ಗೆ

ಕಾಂಗ್ರೆಸ್‌ ಗೆಲ್ಲಲ್ಲ, ಗ್ಯಾರಂಟಿ ಮುಂದುವರಿಯಲ್ಲ!

ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿರಲು ಹೆಚ್ಚು ಸ್ಥಾನ ಗೆಲ್ಲಬೇಕೆಂದು ಯತೀಂದ್ರ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಗ್ಯಾರಂಟಿ ಮುಂದುವರೆಯಲು ಹೆಚ್ಚು ಲೋಕಸಭಾ ಸ್ಥಾನ ಕೊಡಿ ಎಂಬಂತೆ ಮಾತನಾಡಿದ್ದಾರೆ. ಇದು ಡಿ.ಕೆ.ಶಿವಕುಮಾರ್‌ ಅವರಿಗೆ ಚೆಕ್‍ಮೇಟ್. ಗ್ಯಾರಂಟಿ ಮುಂದುವರೆಯುವುದಿಲ್ಲ ಎಂದು ಯತೀಂದ್ರ ಹೇಳಿದಂತಿದೆ. ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಾರದು ಎಂಬ ಮಾತು ಅವರದು ಎಂದು ನುಡಿದರು.

ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Exit mobile version