Site icon Vistara News

Karnataka Politics : ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸಭೆ; ಬರ ಅಧ್ಯಯನ ರೂಪುರೇಷೆ ಚರ್ಚೆ

BJP Meeting in bangalore

ಬೆಂಗಳೂರು: ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ (ಅ. 31) ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಬೆಂಗಳೂರು ಬಿಜೆಪಿ ಶಾಸಕರ ಸಭೆಯನ್ನು ನಡೆಸಲಾಯಿತು. ಈ ವೇಳೆ ಬರ ಅಧ್ಯಯನ ಸಂಬಂಧ ಮಹತ್ವದ ಚರ್ಚೆಗಳನ್ನು ನಡೆಸಲಾಗಿದ್ದು, ಬಿಎಸ್‌ವೈ ಕೆಲವು ಸಲಹೆಗಳನ್ನು ನೀಡಿದ್ದಾರೆನ್ನಲಾಗಿದೆ. ರಾಜ್ಯ ರಾಜಕೀಯದಲ್ಲಿ (Karnataka Politics) ಹಲವಾರು ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಈಗ ಬಿಜೆಪಿ ಬರ ಅಧ್ಯಯನ ಪ್ರವಾಸ (Drought Study Tour) ಮಾಡುವ ಮೂಲಕ ರಾಜ್ಯ ಸರ್ಕಾರವನ್ನು (Congress Government) ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಕೈಹಾಕಿದೆ.

ಬೆಂಗಳೂರಿನಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬರ ಅಧ್ಯಯನ ಪ್ರವಾಸ ನಡೆಯಲಿದೆ. ಹೀಗಾಗಿ ಬರ ಅಧ್ಯಯನಕ್ಕೆ ಹೊರಡುವ ಮುನ್ನ ಸಿದ್ಧತೆಗಳು ಹೇಗಿರಬೇಕು? ಎಂಬುದರ ಸಹಿತ ಅಧ್ಯಯನದ ರೂಪುರೇಷೆಗಳನ್ನು ಚರ್ಚೆ ಮಾಡಲಾಯಿತು.

ಇನ್ನು ಬೆಂಗಳೂರು ಶಾಸಕರಿಗೆ ರಾಜ್ಯ ಸರ್ಕಾರ ಅನುದಾನ ಕೊಡದ ಬಗ್ಗೆಯೂ ಚರ್ಚೆ ನಡೆದಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಬಗ್ಗೆಯೂ ಸಭೆಯಲ್ಲಿ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ.

ಬೆಂಗಳೂರಿನ ಬಿಜೆಪಿ ಶಾಸಕರು ಸಭೆಯಲ್ಲಿ ಈ ಸಭೆಯಲ್ಲಿ ಭಾಗಿಯಾಗಿದ್ದರು. ಯಡಿಯೂರಪ್ಪ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಕಾರಿನ ಬಳಿಯೇ ಬಂದ ಬಿಜೆಪಿ ಶಾಸಕರು ಸ್ವಾಗತಿಸಿದರು. ಈ ವೇಳೆ ಶಾಸಕ ಉದಯ ಗರುಡಾಚಾರ್ ಅವರು ಬಿಎಸ್‌ವೈ ಕಾಲು ಮುಟ್ಟಿ ನಮಸ್ಕರಿಸಿದರು.

ಈ ಸಂದರ್ಭದಲ್ಲಿ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ರಾಜ್ಯದ ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕರಾದ ಎಸ್. ರಘು, ಎಸ್. ಮುನಿರಾಜು, ಎಸ್.ಆರ್. ವಿಶ್ವನಾಥ್, ಕೆ.ಸಿ. ರಾಮಮೂರ್ತಿ, ಎಂ. ಕೃಷ್ಣಪ್ಪ, ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೇಶವ್ ಪ್ರಸಾದ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಉಪಸ್ಥಿತರಿದ್ದರು.

ಬರ ಪರಿಸ್ಥಿತಿ ಅಧ್ಯಯನಕ್ಕೆ ಹೊರಟ ಬಿಜೆಪಿ; 17 ತಂಡಗಳಿಂದ ರಾಜ್ಯ ಪ್ರವಾಸ

ರಾಜ್ಯದಲ್ಲಿ ಬರ ಪರಿಸ್ಥಿತಿ (Drought Situation) ತೀವ್ರವಾಗಿದ್ದು, ಅದನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ರಾಜ್ಯದ ಪರಿಸ್ಥಿತಿಯ ಅಧ್ಯಯನಕ್ಕೆ ಮುಂದಾಗಿದೆ. ಬಿಜೆಪಿಯ 17 ತಂಡಗಳು ನವೆಂಬರ್‌ 3ರಿಂದ ರಾಜ್ಯದ ಎಲ್ಲ 33 ಜಿಲ್ಲೆಗಳಲ್ಲಿ ಪ್ರವಾಸ (District tour by BJP) ಮಾಡಿ ಬರ ಪರಿಸ್ಥಿತಿಯನ್ನು (Drought Study) ಅವಲೋಕಿಸಲಿದೆ.

ರಾಜ್ಯದ ಅಣೆಕಟ್ಟುಗಳಲ್ಲಿ ನೀರಿಲ್ಲ. ಜಮೀನುಗಳು ಒಡೆದು ಹೋಗಿವೆ. ಕುಡಿಯುವ ನೀರು ಲಭಿಸುತ್ತಿಲ್ಲ. ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವ ಪರಿಸ್ಥಿತಿ ಇದೆ. ಕರೆಂಟ್ ದುಬಾರಿಯಾಗಿದೆ; ಸಣ್ಣ ಕೈಗಾರಿಕೆಗಳು ಬಂದ್ ಆಗಿವೆ. ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ನೀರಿದ್ದರೂ ಅದನ್ನು ಸರಬರಾಜು ಮಾಡಲು ವಿದ್ಯುತ್ ಇಲ್ಲ. ಎಪಿಎಂಸಿಗಳಿಗೆ ಸಂಪೂರ್ಣ ವ್ಯಾಪಾರ ಇಲ್ಲವಾಗಿದೆ ಎಂದು ಆರೋಪ ಮಾಡಿರುವ ಬಿಜೆಪಿ, ಬರದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ಅಧಿವೇಶನದಲ್ಲಿ ವಿಶೇಷ ಸಮಯ ನೀಡಲು ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಿದೆ.

ಯಾವ ಜಿಲ್ಲೆಗೆ ಯಾರ ಸಾರಥ್ಯ?

ಬಿ.ಎಸ್. ಯಡಿಯೂರಪ್ಪ, ನಳಿನ್‍ಕುಮಾರ್ ಕಟೀಲ್, ಸಿ.ಟಿ.ರವಿ, ಬಿ.ವೈ ವಿಜಯೇಂದ್ರ, ಅರವಿಂದ ಬೆಲ್ಲದ, ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ ಯತ್ನಾಳ, ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ರಾಜ್ಯದ ಎಲ್ಲ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ತಂಡದಲ್ಲಿ ಇರುತ್ತಾರೆ. ಎಲ್ಲ 33 ಜಿಲ್ಲೆಗಳಿಗೆ 17 ತಂಡಗಳು ಪ್ರವಾಸ ಮಾಡಲಿವೆ ಎಂದು ತಿಳಿಸಿದರು.

ಇದನ್ನೂ ಓದಿ : Karnataka Politics : ಗೋಕಾಕ್‌ ಚಳವಳಿ ಮರೆತಿರೇ ಸಿದ್ದರಾಮಯ್ಯ? ಸಿಎಂಗೆ ಬಿ.ವೈ. ವಿಜಯೇಂದ್ರ ಸರಣಿ ಪ್ರಶ್ನೆ

ನವೆಂಬರ್‌ 10ಕ್ಕೆ ವರದಿ ಬಿಡುಗಡೆ

ಎಲ್ಲ ರಾಜ್ಯಗಳಲ್ಲಿ ತಂಡವು ಅಧ್ಯಯನ ನಡೆಸಿದ ತರುವಾಯ ನವೆಂಬರ್ 10ರಂದು ಬರ ಪರಿಸ್ಥಿತಿಯ ವರದಿಯನ್ನು ಬಿಡುಗಡೆ ಮಾಡಲಿದ್ದು, ಅದನ್ನು ಸೃಕಾರಕ್ಕೆ ಸಲ್ಲಿಸಲಾಗುವುದು. ಜತೆಗೆ ಬರದ ಕುರಿತು ಚರ್ಚೆಗೆ ಅಧಿವೇಶನದಲ್ಲಿ ವಿಶೇಷ ಸಮಯ ನಿಗದಿಗೆ ಒತ್ತಾಯಿಸಲಾಗುತ್ತದೆ ಎಂದು ಬಿಜೆಪಿ ಈಗಾಗಲೇ ತಿಳಿಸಿದೆ.

Exit mobile version