Site icon Vistara News

Fact Check Cell : ಸರ್ಕಾರದ ಫ್ಯಾಕ್ಟ್‌ ಚೆಕ್‌ ಪ್ರಯತ್ನಕ್ಕೆ ಹಿನ್ನಡೆ; ಮಾನ್ಯತೆ ಪಡೆದ ಚೆಕರ್ಸ್‌ ನಿರಾಸಕ್ತಿ, ಯಾಕೆ?

Fact Check unit

ಬೆಂಗಳೂರು: ರಾಜ್ಯದಲ್ಲಿ ಸ್ಥಾಪನೆಯಾಗಿರುವ ಸತ್ಯಶೋಧನಾ ಕೋಶದ (Fact Check Cell) ಭಾಗವಾಗಲು ಅಧಿಕೃತ ಫ್ಯಾಕ್ಟ್‌ ಚೆಕ್‌ ಕಂಪನಿಗಳು (Accredited Fact Check companies) ನಿರಾಸಕ್ತಿ ತೋರಿವೆ. ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವಿಕೆ ಜೋರಾಗಿದ್ದು, ಇದನ್ನು ನಿಯಂತ್ರಿಸಬೇಕು, ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ ಇಡಬೇಕು ಎಂಬ ಉದ್ದೇಶದಿಂದ ಈ ವಿಭಾಗವನ್ನು ಕಾಂಗ್ರೆಸ್‌ ಸರ್ಕಾರ (Congress Government) ಆರಂಭಿಸಿದೆ. ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ (Information Technology minister) ಪ್ರಿಯಾಂಕ್‌ ಖರ್ಗೆ (Priyank Kharge) ಅವರು ಈ ವಿಭಾಗದ ಉಸ್ತುವಾರಿಯಾಗಿದ್ದಾರೆ.

ರಾಜ್ಯದಲ್ಲಿ ಸುಳ್ಳು ಮಾಹಿತಿ ಪತ್ತೆ ಘಟಕ (Information Disorder Tackling Unit-IDTU) ಸ್ಥಾಪನೆಗಾಗಿ ಸರ್ಕಾರ ದೇಶದ ಪ್ರಮುಖ ಮತ್ತು ಅಧಿಕೃತ ಫ್ಯಾಕ್ಟ್‌ ಚೆಕ್‌ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ಆದರೆ, ದೇಶದಲ್ಲಿರುವ ಟಾಪ್‌ ಮತ್ತು ಅಂತಾರಾಷ್ಟ್ರೀಯ ಸತ್ಯ ಶೋಧಕ ನೆಟ್‌ವರ್ಕ್‌ (International Fact-Checking Network -IFCN)ನಿಂದ ಮಾನ್ಯತೆ ಪಡೆದ 20 ಸಂಸ್ಥೆಗಳ ಪೈಕಿ 19 ಈ ಪ್ರಕ್ರಿಯೆಯ ಭಾಗವಾಗಲು ನಿರಾಸಕ್ತಿ ಪ್ರದರ್ಶಿಸಿವೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಕರ್ನಾಟಕ ಸರ್ಕಾರವು ಸುಳ್ಳು ಮಾಹಿತಿ ಪ್ರಸಾರದ ಬಗ್ಗೆ ಜಾಗೃತಿ ಮೂಡಿಸುವುದಕ್ಕಿಂತಲೂ ಹೆಚ್ಚಾಗಿ ಕಾನೂನು ಕ್ರಮ ಕೈಗೊಂಡು ಶಿಕ್ಷೆ ನೀಡುವ ವಿಚಾರಕ್ಕೇ ಹೆಚ್ಚು ಉತ್ಸುಕವಾಗಿರುವುದು. ಪ್ರಮುಖ ಸತ್ಯಶೋಧಕ ವೆಬ್‌ ಸೈಟ್‌ ಆಲ್ಟ್‌ ನ್ಯೂಸ್‌ನ ಸಹ ಸ್ಥಾಪಕರಾಗಿರುವ ಪ್ರತೀಕ್‌ ಸಿನ್ಹಾ ಅವರು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

priyank Kharge fact Check

ಕರ್ನಾಟಕ ರಾಜ್ಯ ಸರ್ಕಾರವು ತಾನು ಮೂರು ಹಂತದ ಸುಳ್ಳು ಮಾಹಿತಿ ಪತ್ತೆ ಘಟಕ ಸ್ಥಾಪನೆಗೆ ಮುಂದಾಗಿದ್ದು, ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ಐಎಫ್‌ಸಿಎನ್‌ – IFCN ಮಾನ್ಯತೆ ಪಡೆದ ಸಂಸ್ಥೆಗಳಾಗಿದ್ದರೆ ಸತ್ಯಶೋಧಕ ತಂಡಕ್ಕೆ ಗೌರವವಿರುತ್ತದೆ ಎಂದು ಹೇಳಿತ್ತು. ಆದರೆ, ಸರ್ಕಾರ ನಿಗದಿಪಡಿಸಿದ ಕೆಲವು ನಿಯಮಗಳಿಗೂ ಐಎಫ್‌ಸಿಎನ್‌ ಸಿದ್ಧಾಂತಗಳಿಗೂ ತಾಳೆಯಾಗದ ಕಾರಣ ಹೆಚ್ಚಿನ ಸಂಸ್ಥೆಗಳು ಹಿಂದೆ ಸರಿದಿವೆ.

ಅದರಲ್ಲೂ ಮುಖ್ಯವಾಗಿ ಯಾವುದೇ ಫ್ಯಾಕ್ಟ್‌ ಚೆಕಿಂಗ್‌ ಟೀಂ ಇದ್ದರೂ ಅದರ ಚಟುವಟಿಕೆಯನ್ನು ರಾಜ್ಯ ಸರ್ಕಾರ, ಒಂದು ರಾಜಕೀಯ ಪಕ್ಷ ಅಥವಾ ಒಬ್ಬ ರಾಜಕಾರಣಿ ನಿಯಂತ್ರಣ ಮಾಡುವುದನ್ನು ಈ ಸಂಸ್ಥೆಗಳು ಒಪ್ಪಿಲ್ಲ. ಅಂತಿಮವಾಗಿ ಒಂದು ತೀರ್ಮಾನಕ್ಕೆ ಬರುವ ಅಧಿಕಾರ ತಮಗಿಲ್ಲ ಎಂಬ ನಿಲುವನ್ನು ಅವು ಸ್ವೀಕರಿಸಿಲ್ಲ.

ತುಂಬ ಮಂದಿ ಆಸಕ್ತರಿದ್ದಾರೆ ಎಂದ ಪ್ರಿಯಾಂಕ್‌ ಖರ್ಗೆ

ಈ ನಡುವೆ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹಲವು ಫ್ಯಾಕ್ಟ್‌ ಚೆಕಿಂಗ್‌ ಸಂಸ್ಥೆಗಳು ಸರ್ಕಾರದೊಂದಿಗೆ ಸಹಕರಿಸಲು ಸಿದ್ಧವಾಗಿವೆ ಎಂದು ಹೇಳಿದ್ದರು. ಆದರೆ, ಬೂಮ್‌ (Boom), ಫ್ಯಾಕ್ಟ್‌ಲಿ (Factly), ಟಿವಿ ಟುಡೇ ನೆಟ್ವರ್ಕ್‌ (TV Today Network), ಲಲ್ಲನ್‌ ಟಾಪ್‌ (Lallantop), ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ (Press Trust of India), ಕ್ವಿಂಟ್‌ (Quint), ವಿಶ್ವಾಸ್‌ ನೆಟ್ವರ್ಕ್‌ (Vishwas Network), ಹೆಲ್ಡಿ ಇಂಡಿಯನ್‌ ಪ್ರಾಜೆಕ್ಟ್‌ (The Healthy Indian Project), ನ್ಯೂಸ್‌ ಚೆಕರ್‌ (Newschecker), ಫ್ಯಾಕ್ಟ್‌ ಚೆಕರ್‌ ಡಾಟ್‌ ಇನ್‌ (Factchecker.in), ನ್ಯೂಸ್‌ ಮೊಬೈಲ್‌ (NewsMobile) ಮೊದಲಾದ ಸಂಸ್ಥೆಗಳು ರಾಜ್ಯ ಸರ್ಕಾರದ ಬೇಡಿಕೆಗೆ ಸ್ಪಂದಿಸಿಲ್ಲ. ಯಾವುದೇ ಪ್ರಸ್ತಾವನೆ ಕಳುಹಿಸಿಕೊಟ್ಟಿಲ್ಲ.

ಪಕ್ಷಪಾತ ಮಾಡಲಾಗದು ಎನ್ನುತ್ತಿರುವ ಫ್ಯಾಕ್ಟ್‌ ಚೆಕರ್ಸ್‌

ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಫ್ಯಾಕ್ಟ್‌ ಚೆಕರ್‌ ಸಂಸ್ಥೆಗಳು ತಾವು ಯಾವುದೇ ರೀತಿಯಲ್ಲೂ ಪಕ್ಷಪಾತ ಮಾಡುವುದಿಲ್ಲ. ನಮ್ಮ ಶೋಧಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರುತ್ತವೆ. ಸ್ವತಂತ್ರವಾಗಿರುತ್ತವೆ ಎಂದು ಹೇಳಿವೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶ ಇರುವ ವ್ಯವಸ್ಥೆಯಲ್ಲಿ ಕೆಲಸ ಮಾಡಿದರೆ ತಮ್ಮ ಮಾನ್ಯತೆಗೆ, ಗೌರವಕ್ಕೆ ಧಕ್ಕೆ ಬರಬಹುದು ಎಂಬ ದೃಷ್ಟಿಯಲ್ಲಿ ಅವುಗಳು ದೂರ ನಿಂತಿವೆ ಎನ್ನಲಾಗಿದೆ.

ನಮ್ಮ ಉದ್ದೇಶ ಜಾಗೃತಿ, ಕಾನೂನು ಕ್ರಮವಲ್ಲ ಎಂದ ಪ್ರತೀಕ್‌ ಸಿನ್ಹಾ

ಕರ್ನಾಟಕ ಸರ್ಕಾರದ ಫ್ಯಾಕ್ಟ್‌ ಚೆಕಿಂಗ್‌ ಉದ್ದೇಶ ಜನರಿಗೆ ಅರಿವು ಮೂಡಿಸುವುದಷ್ಟೇ ಆಗಿರುವುದಿಲ್ಲ. ಬದಲಾಗಿ ಶಿಕ್ಷೆ ವಿಧಿಸುವ ಉದ್ದೇಶವೂ ಇದೆ. ಹೀಗಾಗಿ ನಾವು ಪ್ರಸ್ತಾವನೆಯನ್ನು ಕಳುಹಿಸಿಲ್ಲ. ನಾವು ಸರ್ಕಾರಗಳ ಜತೆಗೆ ಕೆಲಸ ಮಾಡುವುದಿಲ್ಲ. ಅದರಲ್ಲೂ ಮುಖ್ಯವಾಗಿ ಶಿಕ್ಷೆ ನೀಡುವುದೇ ಉದ್ದೇಶವಾಗಿದ್ದಾಗ ಕೆಲಸ ಮಾಡುವುದು ಕಷ್ಟ ಎಂದು ಆಲ್ಟ್‌ ನ್ಯೂಸ್‌ನ ಸಹ ಸಂಸ್ಥಾಪಕ ಪ್ರತೀಕ್‌ ಸಿನ್ಹಾ ಹೇಳಿದ್ದಾರೆ.

ಟ್ಯಾಟಲ್‌ ಸಿವಿಕ್‌ ಟೆಕ್ನಾಲಜಿಸ್‌ (Tattle Civic Technologies) ಸಂಸ್ಥೆಯ ಸಹಸಂಸ್ಥಾಪಕರಾಗಿರುವ ತರುಣಿಮಾ ಪ್ರಭಾಕರ್‌ ಅವರು ಕೂಡಾ ಇದೇ ಅಭಿಪ್ರಾಯ ಹೊಂದಿದ್ದಾರೆ. ಭಾಷಣಕ್ಕೆ ಸಂಬಂಧಿಸಿ ಶಿಕ್ಷಣ ಕೊಡುವ ಕ್ರಮವನ್ನು ನಾವು ಒಪ್ಪುವುದಿಲ್ಲ. ಶಿಕ್ಷೆ ಕೊಡುವುದಕ್ಕೆ ಮೊದಲು ಮಾಡಬೇಕಾಗಿರುವ ಹಲವು ಕೆಲಸಗಳಿವೆ ಎಂದಿದ್ದಾರೆ.

ಫ್ಯಾಕ್ಟ್‌ ಚೆಕರ್‌ಗಳೇಕೆ ಭಾಗವಾಗಲು ಬಯಸಿಲ್ಲ?

  1. ಕರ್ನಾಟಕದ ಫ್ಯಾಕ್ಟ್‌ ಚೆಕಿಂಗ್‌ ಘಟಕ ಸರ್ಕಾರದ ಒಂದು ಭಾಗ. ಇದರಲ್ಲಿ ಸ್ವಾತಂತ್ರ್ಯ ಇರುವ ಸಾಧ್ಯತೆ ಇಲ್ಲ.
  2. ರಾಜ್ಯದ ಈ ಪ್ರಕ್ರಿಯೆ ವಿಚಾರದಲ್ಲಿ ಹಲವು ಸಂಶಯಗಳಿವೆ. ನಮಗೆ ಯಾವ ವಿಚಾರವನ್ನು ಎತ್ತಿಕೊಳ್ಳಬೇಕು ಎಂಬ ವಿಚಾರದಲ್ಲಿ ಸ್ವಾತಂತ್ರ್ಯ ಇರುವ ಸಾಧ್ಯತೆ ಕಡಿಮೆ. ಅವರು ಹೇಳಿದ್ದನ್ನು ನಾವು ತನಿಖೆ ಮಾಡಬೇಕಾದೀತು.
  3. ನಾವು ಯಾರಿಗಾಗಿ ಕೆಲಸ ಮಾಡಿದರೂ ಅಂತಿಮವಾಗಿ ಏಳು ದೇಶಗಳಲ್ಲಿ ಜಾರಿಯಲ್ಲಿರುವ ಐಎಫ್‌ಸಿಎನ್‌ ಮಾನದಂಡಗಳನ್ನು ಆಧರಿಸಿಯೇ ಕೆಲಸ ಮಾಡಬೇಕು.
  4. ಫ್ಯಾಕ್ಟ್‌ ಚೆಕರ್‌ಗಳು ಯಾವತ್ತೂ ಒಂದು ಸರ್ಕಾರದ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ.

ಸರ್ಕಾರದ ಫ್ಯಾಕ್ಟ್‌ ಚೆಕ್‌ ಕಾರ್ಯಾಚರಣೆ ಹೇಗಿರುತ್ತದೆ?

  1. ಸತ್ಯ ಶೋಧನೆ ಮಾಡಬೇಕಾದ ವಿಚಾರಗಳನ್ನು ಸಂಸ್ಥೆಗಳು ತೀವ್ರವಾಗಿ ಹುಡುಕಬೇಕು ಎಂದು ಸುಳ್ಳು ಮಾಹಿತಿ ಪತ್ತೆ ಘಟಕ (Information Disorder Tackling Unit-IDTU) ಹೇಳುತ್ತದೆ.
  2. ಆದರೆ, ಅದರ ತನಿಖೆಯನ್ನು ಕೈಗೆತ್ತಿಕೊಳ್ಳಬೇಕಾದರೆ ಸರ್ಕಾರದಿಂದ ನಿಯೋಜಿತವಾದ ಏಕ ವ್ಯಕ್ತಿ ವಿಭಾಗ (SIngle point of Contact) ದಿಂದ ಅನುಮತಿ ಪಡೆಯಬೇಕು ಎಂದು ಹೇಳುತ್ತದೆ.
  3. ಸತ್ಯಶೋಧನೆಯ ವರದಿಯನ್ನು ಬಹಿರಂಗಪಡಿಸುವ ಅಧಿಕಾರ ಮಾನ್ಯತೆ ಪಡೆದ ಸಂಸ್ಥೆಗೆ ಇರುವುದಿಲ್ಲ.

ಹೀಗೆ ಹಲವು ವಿಚಾರಗಳಲ್ಲಿ ಗೊಂದಲಗಳು ಇರುವುದರಿಂದ ಯಾವುದೇ ಸಂಸ್ಥೆ ಸರ್ಕಾರದ ಭಾಗವಾಗಿ ಫ್ಯಾಕ್ಟ್‌ ಚೆಕ್‌ ಮಾಡಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

Exit mobile version