Site icon Vistara News

Land scam : ಎಚ್‌ಡಿಕೆ ವಿರುದ್ಧದ ಕೇತಗಾನಹಳ್ಳಿ ಭೂಕಬಳಿಕೆ ಕೇಸಿನ ಅನುಪಾಲನಾ ವರದಿ ಸಲ್ಲಿಸದೆ ಇದ್ದರೆ ಸಿಎಸ್‌ ವಿರುದ್ಧವೇ ಕೇಸು ಎಚ್ಚರಿಕೆ

Education News Let the mindset of schools change HC refuses to quash student suicide case

ಬೆಂಗಳೂರು: ಕೇತಗಾನಹಳ್ಳಿ ಭೂಕಬಳಿಕೆ ಪ್ರಕರಣಕ್ಕೆ (Land scam) ಸಂಬಂಧಿಸಿ ಒಂದು ವಾರದಲ್ಲಿ ನ್ಯಾಯಾಲಯದ ಆದೇಶ ಕುರಿತು ಅನುಪಾಲನಾ ವರದಿ ಸಲ್ಲಿಸದಿದ್ದರೆ ಮುಖ್ಯ ಕಾರ್ಯದರ್ಶಿ ವಿರುದ್ಧ ಆರೋಪ ನಿಗದಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಕಠಿಣ ಎಚ್ಚರಿಕೆ ನೀಡಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳಾದ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಹಾಗೂ ಸಾವಿತ್ರಮ್ಮ ವಿರುದ್ಧ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿನ ಸರ್ಕಾರದ ಭೂಮಿ ಕಬಳಿಕೆ ಕೇಸು ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿದ್ದರು. ಅದನ್ನು ಜಾರಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಹೈಕೋರ್ಟ್‌ ಆದೇಶ ಪಾಲನೆ ಮಾಡದ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌ ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

“ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಚನೆ ಪಡೆಯಲು ಪ್ರಧಾನ ಕಾರ್ಯದರ್ಶಿಯ ಜೊತೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಒಂದು ವಾರ ಕಾಲಾವಕಾಶ ನೀಡಬೇಕು ಎಂದು 2023ರ ಜನವರಿ 19ರಂದು ಸರ್ಕಾರದ ವಕೀಲರು ತಿಳಿಸಿದ್ದರು. ಅದಾಗ್ಯೂ, ಇಂದೂ ಸಹ ಅನುಪಾಲನಾ ವರದಿ ಸಲ್ಲಿಸಲಾಗಿಲ್ಲ. ಆದರೆ, ಸರ್ಕಾರದ ವಕೀಲರು ಮತ್ತೊಮ್ಮೆ ಕಾಲಾವಕಾಶ ಕೋರಿದ್ದಾರೆ. ಅಂತಿಮವಾಗಿ ಅನುಪಾಲನಾ ವರದಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ಒಂದೊಮ್ಮೆ ಅನುಪಾಲನಾ ವರದಿ ಸಲ್ಲಿಸದಿದ್ದರೆ ಮುಖ್ಯ ಕಾರ್ಯದರ್ಶಿ ಪೀಠದ ಮುಂದೆ ವಿಚಾರಣೆಗೆ ಹಾಜರಾಗಬೇಕು. ಅವರ ವಿರುದ್ಧ ಆರೋಪ ನಿಗದಿ ಮಾಡಲಾಗುವುದು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ. ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಲಾಗಿದೆ.

ಏನಿದು ಭೂಕಬಳಿಕೆ ಆರೋಪ?

ಕುಮಾರಸ್ವಾಮಿ, ಸಂಬಂಧಿಗಳಾದ ಸಾವಿತ್ರಮ್ಮ ಮತ್ತು ಡಿ ಸಿ ತಮ್ಮಣ್ಣ ಅವರು ತಮ್ಮ ಪ್ರಭಾವ ಬಳಸಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಇವರೆಲ್ಲರೂ 110. 32 ಎಕರೆ ಪೈಕಿ ಸುಮಾರು 54 ಎಕರೆಯಷ್ಟು ಗೋಮಾಳ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಂಸದರಾದ ಜಿ ಮಾದೇಗೌಡರು ದೂರು ನೀಡಿದ್ದರು. ಇದರ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಲೋಕಾಯುಕ್ತರು 2014ರ ಆಗಸ್ಟ್‌ 5ರಂದು ಕಂದಾಯ ಇಲಾಖೆಗೆ ನಿರ್ದೇಶಿಸಿದ್ದರು.

ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಸರ್ವೆ ನಂ. 7, 8, 9, 10, 16, 17 ಮತ್ತು 79ರಲ್ಲಿ ಮಂಜೂರಾಗಿರುವ ಗೋಮಾಳದ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಸ್ತೃತ ತನಿಖೆ ನಡೆಸಬೇಕು. ಒಂದೊಮ್ಮೆ ಆ ಭೂಮಿ ಒತ್ತುವರಿಯಾಗಿದ್ದರೆ ಅದನ್ನು ಒತ್ತುವರಿ ಮಾಡಿಕೊಂಡಿರುವವರಿಂದ ಸರ್ಕಾರಿ ಭೂಮಿ ವಾಪಸ್‌ ಪಡೆಯಲು ಕಾನೂನಾತ್ಮಕ ಕ್ರಮಕೈಗೊಳ್ಳಬೇಕು. ಸರ್ಕಾರದ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿರುವವರು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳಬೇಕು. ನಾಲ್ಕು ತಿಂಗಳಲ್ಲಿ ಈ ಕ್ರಮವಾಗಬೇಕು. ಆನಂತರ 15 ದಿನಗಳಲ್ಲಿ ರಿಜಿಸ್ಟ್ರಾರ್‌ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಲೋಕಾಯುಕ್ತರು 2014ರ ಆಗಸ್ಟ್‌ 4ರಂದು ಆದೇಶಿಸಿದ್ದರು. ಇದನ್ನು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಎತ್ತಿ ಹಿಡಿದಿತ್ತು. ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿದೆ. ಇದೀಗ ಫೆ. ೭ರೊಳಗೆ ಸರ್ಕಾರ ಸ್ಪಂದಿಸಬೇಕಾಗಿದೆ.

ಇದನ್ನೂ ಓದಿ : Madras High court : ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯುವುದಕ್ಕೆ ಫ್ಯಾಮಿಲಿ ಕೋರ್ಟ್‌ಗೇ ಬರಬೇಕು; ಮದ್ರಾಸ್‌ ಹೈಕೋರ್ಟ್‌

Exit mobile version