ಬೆಂಗಳೂರು: ಆತ ಕುಖ್ಯಾತ ರೌಡಿ, ಧಾರವಾಡ ಜೈಲಿನಲ್ಲಿದ್ದೇ ರಾಜ್ಯದ ನಾನಾ ಕಡೆ ಕಿಡ್ನಾಪ್, ದರೋಡೆ, ವಸೂಲಿ ನಡೆಸುತ್ತಿದ್ದ. ಇದೀಗ ಕಲಾಸಿಪಾಳ್ಯದ ಉದ್ಯಮಿಯೊಬ್ಬರನ್ನು ಕಿಡ್ನಾಪ್ ಮಾಡಲು ಮುಂದಾಗಿ ಸಿಕ್ಕಿಬಿದ್ದು, ಪೊಲೀಸರು ವಿಚಾರಿಸಿದಷ್ಟೂ ಹಳೇ ಪ್ರಕರಣಗಳ ಬಗ್ಗೆ ಬಾಯಿ ಬಿಡುತ್ತಿದ್ದಾನೆ.
ವಿಶೇಷವೆಂದರೆ ಈತ ಯಾರನ್ನು ಕಿಡ್ನಾಪ್ ಮಾಡಿಸಿದರೂ, ಮರ್ಡರ್ ಮಾಡಿದರೂ ಈತ ಕೇಸಿನಲ್ಲಿ ಫಿಟ್ ಆಗುತ್ತಿರಲಿಲ್ಲ. ಕ್ರೈಂ ಮಾಡಿದ ಸಹಚರರು ಮಾತ್ರ ಜೈಲಿಗೆ ಹೋಗುತ್ತಿದ್ದರು. ಈತ ಮಾತ್ರ ಆರಾಮಾಗಿ ಇರುತ್ತಿದ್ದ. ಇಂಥ ನಟೋರಿಯಸ್ ರೌಡಿ ಬಾಂಬೇ ಸಲೀಂ ಈಗ ಸಿಸಿಬಿ ಮುಂದೆ ಒಂದೊಂದೇ ಪ್ರಕರಣ ಬಾಯಿ ಬಿಡುತ್ತಿದ್ದಾನೆ.
ಕಳೆದೊಂದು ತಿಂಗಳ ಹಿಂದೆ ಕಲಾಸಿಪಾಳ್ಯದ ರಿಯಲ್ ಎಸ್ಟೇಟ್ ಉದ್ಯಮಿ ಮುಯಿಜ್ ಅಹಮ್ಮದ್ ಎಂಬವರನ್ನು ಕಿಡ್ನಾಪ್ ಮಾಡಲು ಈತ ಪ್ರಯತ್ನ ನಡೆಸಿದ್ದ. ಧಾರವಾಡದ ಜೈಲಿನಲ್ಲಿ ಕೂತೇ ಕಿಡ್ನಾಪ್ ಮಾಡಿಸಲು ಮುಂದಾಗಿದ್ದ. ಆದರೆ ಕಿಡ್ನಾಪ್ ಮಾಡಲು ಬಂದವರು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಸಿಸಿಬಿ ವಿಚಾರಣೆ ನಡೆಸಿದಾಗ ಬಾಂಬೇ ಸಲೀಮನೇ ಕಿಡ್ನಾಪ್ ಯತ್ನ ಮಾಡಿಸಿರುವುದು ಖಚಿತವಾಗಿತ್ತು. ನಂತರ ಧಾರವಾಡ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಸಲೀಂನನ್ನು ಕರೆತಂದು ವಿಚಾರಣೆ ಮಾಡಲಾಗಿತ್ತು.
ಇದನ್ನೂ ಓದಿ | ಮಂತ್ರಿ ಮಾಲ್ ಬಳಿ ಹಾಡಹಗಲೇ ಮಚ್ಚಿನೇಟು, ರೌಡಿ ಶೀಟರ್ ಗಂಭೀರ
ಈ ವೇಳೆ ಸಲೀಂ, ತಾನು ಹತ್ತಾರು ಕೊಲೆ-ಸುಲಿಗೆ-ಕಿಡ್ನಾಪ್ ಮಾಡಿಸಿದ್ದೇನೆ ಎಂಬ ವಿಚಾರ ಬಾಯಿ ಬಿಟ್ಟಿದ್ದಾನೆ. ಸೋಲದೇವನಹಳ್ಳಿಯಲ್ಲಿ ಪ್ರಕಾಶ್ ಎಂಬಾತನನ್ನು ಕೊಂದು ಮುಗಿಸಿದ್ದೆ. ಆದರೆ ಈ ಕೇಸಲ್ಲಿ ಫಿಟ್ ಆದದ್ದು ಮಾತ್ರ ಲೋಕೇಶ್ ರೆಡ್ಡಿ ಹಾಗೂ ಆತನ ತಂಡ. ಲೋಕೇಶ ನನ್ನ ಸಹಚರನಾಗಿದ್ದು, ಆತನನ್ನು ಹೆದರಿಸಿ ಶರಣಾಗುವಂತೆ ಮಾಡಿದ್ದೆ. ಅದೇ ರೀತಿ ಬಾಗೇಪಲ್ಲಿ, ತಲಘಟ್ಟಪುರ ಸೇರಿದಂತೆ ನಾನಾ ಭಾಗದಲ್ಲಿ ಕೊಲೆ-ಕೊಲೆಯತ್ನದಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದೆ ಎಂದಿದ್ದಾನೆ.
ಇದೀಗ ಕೊಲೆ ಪ್ರಕರಣ ಸಂಬಂಧ ಸಲೀಂನನ್ನು ಸೋಲದೇವನಹಳ್ಳಿ ಪೊಲೀಸರು ಬಾಡಿ ವಾರೆಂಟ್ ಮೂಲಕ ಕರೆತಂದಿದ್ದಾರೆ. ಈತನಿಂದ ಇನ್ನೆಷ್ಟು ಕೇಸ್‌ಗಳು ಹೊರಬೀಳುತ್ತವೋ ನೋಡಬೇಕಿದೆ.
ಇದನ್ನೂ ಓದಿ | ರೌಡಿಶೀಟರ್‌ನಿಂದ ವ್ಯಾಪಾರಿಗೆ ಹಫ್ತಾ ವಸೂಲಿ ಧಮಕಿ