Site icon Vistara News

Kidnap Case : ಜೂಜಿನ ಚಟಕ್ಕೆ ಬಿದ್ದು ಕಿಡ್ನ್ಯಾಪ್‌ ಆಟವಾಡಿದ ಯುವಕ

Man arrested for being fake kidnapped after falling into gambling addiction

ಬೆಂಗಳೂರು: ಜೂಜಿಗೆ ದಾಸನಾದ ವ್ಯಕ್ತಿ ಏನ್‌ ಬೇಕಾದರೂ ಮಾಡುತ್ತಾನೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಆಕ್ಸ್‌ಫರ್ಡ್ ಕಾಲೇಜಿನಲ್ಲಿ ವಾರ್ಡನ್ ಆಗಿದ್ದ ಜೀವನ್ ಎಂಬಾತ ಜೂಜಿಗೆ ದಾಸನಾಗಿದ್ದ. ಜೂಜಿಗೆ ದುಡ್ಡು ಬೇಕೆಂದು ಗೆಳೆಯರ ಜತೆ ಸೇರಿ ಕಿಡ್ನ್ಯಾಪ್ ಆಗಿದ್ದೇನೆ ಎಂದು ನಾಟಕ ಮಾಡಿ (Kidnap Case) ಈಗ ಜೈಲುಪಾಲಾಗಿದ್ದಾನೆ.

ಮಾ. 11ರ ರಾತ್ರಿ ತಲೆ ಮೇಲೆ ಟೊಮ್ಯಾಟೊ ಸಾಸ್ ಚೆಲ್ಲಿಕೊಂಡ ಜೀವನ್‌ ಅದೇ ಆಕ್ಸ್‌ಫಡ್ಸ್‌ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಚಿಕ್ಕಮ್ಮ ಸುನಂದ ಅವರಿಗೆ ಫೋಟೊಸ್‌ ಕಳಿಸಿದ್ದ. ನಂತರ ಫೋನ್‌ ಮಾಡಿ ನನ್ನನ್ನು ಕಿಡ್ನ್ಯಾಪ್‌ ಮಾಡಿದ್ದಾರೆ. ಹಣಕ್ಕಾಗಿ ಹೊಡೆದು ಬಡಿದು ಮಾಡುತ್ತಿದ್ದಾರೆ ಎಂದಿದ್ದ. 20 ಸಾವಿರ ರೂ. ಹಣವನ್ನು ಅಕೌಂಟ್‌ಗೆ ಹಾಕಿಸಿಕೊಂಡಿದ್ದ.

ಮಗ ಕಿಡ್ನ್ಯಾಪ್‌ ಆಗಿದ್ದಾನೆ ಎಂದು ಆತಂಕಗೊಂಡ ಸುನಂದ, ಕೂಡಲೇ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ತಡಮಾಡದೇ ತನಿಖೆಗಿಳಿದ ಪೊಲೀಸರು ಜೀವನ್‌ನನ್ನು ಪತ್ತೆ ಮಾಡಿ ಕರೆ ತಂದಿದ್ದರು. ಯಾರು ಕಿಡ್ನ್ಯಾಪ್‌ ಮಾಡಿದ್ದು ಎಂದು ವಿಚಾರಣೆ ಮಾಡಿದಾಗ, ಹಣಕ್ಕಾಗಿ ಗೆಳೆಯರೊಂದಿಗೆ ಸೇರಿ ಜೀವನ್‌ ಕಿಡ್ನ್ಯಾಪ್ ನಾಟಕವಾಡಿದ್ದ ಎಂದು ಬೆಳಕಿಗೆ ಬಂದಿದೆ.

ಗೋಲ್ಡ್ 369 ಎಂಬ ಆನ್‌ಲೈನ್‌ ಆ್ಯಪ್‌ನಲ್ಲಿ ಜೂಜಾಡಿ ಜೀವನ್‌ ಹಣವನ್ನು ಕಳೆದುಕೊಂಡಿದ್ದ. ಮತ್ತೆ ಜೂಜಾಡಲು ಹಣವಿಲ್ಲದಿದ್ದಾಗ ಗೆಳೆಯರೊಂದಿಗೆ ಸೇರಿ ಕಿಡ್ನ್ಯಾಪ್‌ ಆಗಿದ್ದೇನೆಂದು ನಾಟಕವಾಡಿದ್ದ. ಆನೇಕಲ್‌ನ ಬಿಂಗಿಪುರ ಮನೆಯೊಂದರಲ್ಲಿ ಆನ್‌ಲೈನ್‌ನಲ್ಲಿ ಜೂಜಾಡುತ್ತಿದ್ದಾಗಲೇ ಪೊಲೀರು ದಾಳಿ ಮಾಡಿದ್ದಾರೆ.

ಆರೋಪಿ ಜೀವನ್‌ ಹಾಗೂ ಆತನ ಸ್ನೇಹಿತರು

ಆರೋಪಿ ಜೀವನ್ ಸೇರಿ ಸಹಕಾರ ಕೊಟ್ಟ ವಿನಯ್, ಪೂರ್ಣೇಶ್, ಪ್ರೀತಮ್ ಹಾಗೂ ರಾಜು ಎಂಬುವವರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಉಪ ಪೊಲೀಸ್‌ ಆಯುಕ್ತ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಇದನ್ನೂ ಓದಿ: Road Accident : ರಸ್ತೆ ದಾಟುತ್ತಿದ್ದ ಪಾದಚಾರಿಯ ಬಲಿ ಪಡೆದ ಕಿಲ್ಲರ್‌ ಬಿಎಂಟಿಸಿ ಬಸ್‌

Fraud Case : ಸೂಪರ್ ಸ್ಟಾರ್ ರಜನಿಕಾಂತ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಕಾಸ್ಟಿಂಗ್ ಡೈರೆಕ್ಟರ್‌

ಬೆಂಗಳೂರು: ನಟಿ ಆಗಬೇಕೆಂಬ ಮಹಾದಾಸೆಗೆ ಬಿದ್ದ ಯುವತಿಯೊಬ್ಬಳು ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾಳೆ. ಸ್ಟಾರ್‌ ನಟರ ಹೆಸರೇಳಿಕೊಂಡು ವ್ಯಕ್ತಿಯೊಬ್ಬ ಯುವತಿಯಿಂದ ಹಣ ಸುಲಿಗೆ (Fraud Case) ಮಾಡಿದ್ದಾನೆ.

ರಜನಿಕಾಂತ್ ಅವರ ಹೊಸ ಸಿನಿಮಾ Thalaiver 171- code red ಸಿನಿಮಾ ಹೆಸರು ಬಳಸಿಕೊಂಡು ಮೋಸ ಮಾಡಲಾಗಿದೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂಬಾತ ರಜನಿಕಾಂತ್ ಚಿತ್ರದಲ್ಲಿ ಪಾತ್ರವೊಂದು ಖಾಲಿ ಇದೆ ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಹರಿಬಿಟ್ಟಿದ್ದ.

ಇದನ್ನು ನೋಡಿ ಯುವತಿಯೊಬ್ಬಳು ಸುರೇಶ್ ಕುಮಾರ್‌ನನ್ನು ಸಂಪರ್ಕ ಮಾಡಿದ್ದಳು. ನಂತರ ಕಾಸ್ಟಿಂಗ್‌ಗೆ ಇಷ್ಟು ಹಣ ಖರ್ಚಾಗುತ್ತೆ ಎಂದು ಸಬೂಬು ಹೇಳಿ, ಹಂತ ಹಂತವಾಗಿ 3,94,000 ರೂ. ಹಣವನ್ನು ದೋಚಿದ್ದಾನೆ. ಇತ್ತ ಯುವತಿಯಿಂದ ಹಣ ಸುಲಿಗೆ ಮಾಡಿ, ಅವಕಾಶವನ್ನು ಕೊಡದೆ, ಹಣವನ್ನೂ ವಾಪಾಸ್ ಕೊಡದೆ ಪರಾರಿ ಆಗಿದ್ದಾನೆ.

ಇತ್ತ ಹಣವೂ ಇಲ್ಲದೆ ಅವಕಾಶವೂ ಇಲ್ಲದೇ ಮೋಸ ಹೋದ ಯುವತಿ ಕಂಗಲಾಗಿದ್ದಾಳೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ವಿರುದ್ಧ ಐಟಿ ಆಕ್ಟ್ ನಡಿ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version