ಬೆಂಗಳೂರು: ಕೋಟಿ ಕೋಟಿ ಹಣಕ್ಕಾಗಿ ಪ್ರಭಾವಿಗಳ ಹೆಸರು ಹೇಳಿ, ಬೆದರಿಕೆ ಹಾಕಿ ಅಪಹರಣ (Kidnap case) ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತೆಲಂಗಾಣ ಮೂಲದ ಅಜ್ಮೀರ್ ರಾಜು ಎಂಬಾತನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಆತನ ಮೇಲೆ ಹಲ್ಲೆ ನಡೆಸಿ ಆತನಿಂದ ದುಡ್ಡು ಕೀಳುವ ಪ್ರಯತ್ನ ಕೂಡ ನಡೆದಿತ್ತು ಎನ್ನಲಾಗಿದೆ.
ತೆಲಂಗಾಣ ನಿವಾಸಿಯಾಗಿರುವ ಅಜ್ಮೀರ್ ರಾಜು ದುಬೈನಲ್ಲಿ ಇರುವುದು. ಆನ್‌ಲೈನ್‌ನಲ್ಲಿ ಅನಾಯಸವಾಗಿ ದುಡ್ಡು ಮಾಡುವ ಬುದ್ಧಿವಂತ. ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿಸಿ ಅದನ್ನು ನಾನಾ ಕಾರಣದಿಂದ ರಿಟರ್ನ್ ಬಾರದ ರೀತಿ ನೋಡಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ. ಆದರೆ ಆತನ ಟೈಂ ಕೆಟ್ಟಿತ್ತು, ಬೆಂಗಳೂರಿಗೆ ಬಂದ ಕೂಡಲೇ ಅರೆಸ್ಟ್ ಆಗಿದ್ದ.
ಕಳೆದ ವರ್ಷ ಐಪಿಎಲ್ ನೋಡಲು ಬಂದಿದ್ದ ಅಜ್ಮೀರ್‌ನನ್ನು ಪೊಲೀಸರು ಬಂಧಿಸಿದ್ದರು. ಸುಮಾರು ಮೂರು ತಿಂಗಳ ಬಳಿಕ ಜೈಲಿನಿಂದ ಹೊರ ಬಂದಿದ್ದ ಅಜ್ಮೀರ್ ರಾಜು, ಎಂಜಿ ರೋಡ್ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ. ಈ ವೇಳೆ ಅಜ್ಮೀರ್ ರಾಜುಗೆ ಸಾತ್ವಿಕ್ ಎಂಬಾತ ಪರಿಚಯವಾಗಿದ್ದ.
ಇದನ್ನೂ ಓದಿ: Leopard attack : ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆ; ಮುಟ್ಟಲು ಹೋದ ಬೈಕ್ ಸವಾರ, ಕ್ಯಾಬ್ ಚಾಲಕನ ಮೇಲೆ ದಾಳಿ
ಕಿಡ್ನ್ಯಾಪ್ ಆದ ದಿನ ತಡರಾತ್ರಿ ಊಟಕ್ಕೆಂದು ಸಾತ್ವಿಕ್ ಜತೆಗೆ ಬೈಕ್‌ನಲ್ಲಿ ಹೊರಹೋಗಿದ್ದ. ಊಟ ಸಿಗದ ಕಾರಣ ನೇರವಾಗಿ ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ತಾವು ಹೋದಲೆಲ್ಲ ಒಂದು ಸ್ಕಾರ್ಪಿಯೋ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಕಂಡು ಅನುಮಾನಗೊಂಡ ಅಜ್ಮೀರ್ ರಾಜು, ಕಾರು ಚಾಲಕನ ಬಳಿ ಕೇಳಿದ್ದಾನೆ.
ಆಗ ಕಾರಲಿದ್ದ ಆರೇಳು ಜನರು ಏಕಾಏಕಿ ಮುಗಿ ಬಿದ್ದು, ಅಜ್ಮೀರ್‌ನನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ನೇರವಾಗಿ ತೆಲಂಗಾಣಕ್ಕೆ ಕರೆದೊಯ್ದು ಅಲ್ಲಿನ ಫಾರ್ಮ್ ಹೌಸ್‌ನಲ್ಲಿ ಕೂಡಿ ಹಾಕಿದ್ದಾರೆ. ಕಿಡ್ನ್ಯಾಪರ್ಸ್ ಐದು ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ಹಣವಿಲ್ಲ ಎಂದಾಗ ಬಿಟ್ ಕಾಯಿನ್‌ಗಳನ್ನು ಟ್ರಾನ್ಸ್‌ಫರ್ ಮಾಡು ಎಂದು ಪಟ್ಟು ಹಿಡಿದಿದ್ದಾರೆ. ಇಂಟರ್ ನ್ಯಾಷನಲ್ ಅಕೌಂಟ್‌ನಲ್ಲಿರುವ ಹಣವನ್ನೂ ವರ್ಗಾವಣೆ ಮಾಡುವಂತೆ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದರಂತೆ.
ಇನ್ನು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರಂತೆ. ದೂರು ನೀಡಿದರೆ ನಮಗೆ ತೆಲಂಗಾಣ ಎಂಪಿ, ಎಂಎಲ್‌ಎ ಗೊತ್ತು. ಈ ಕೇಸ್ ನಿಲ್ಲದೆ ಇರುವ ಹಾಗೆ ಮಾಡಿ ನಿನ್ನ ಕೊಲೆ ಮಾಡುತ್ತೀವಿ ಎಂದು ಕೊಲೆ ಬೆದರಿಕೆಯನ್ನೂ ಹಾಕಿದ್ದರಂತೆ. ಸದ್ಯ ಅಜ್ಮೀರ್ ಸ್ನೇಹಿತ ಸಾತ್ವಿಕ್ ನೀಡಿದ ದೂರಿನ ಮೇರೆಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ