ಬೆಂಗಳೂರು: ನೈಸ್ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ನೀರು ಕುಡಿಯುತ್ತಿದ್ದ ಮಹಿಳಾ ಬೈಕ್ ರೈಡರ್‌ಗಳ ಮೇಲೆ ಮುಗಿಬಿದ್ದು ತಗಾದೆ ತೆಗೆದ ಸ್ಥಳೀಯನೊಬ್ಬ ಅವಾಚ್ಯ ಶಬ್ದಗಳಿಂದ ಬೈದು ಬೈಕಿನ ಕೈ ಕಿತ್ತುಕೊಂಡು ಒರಟಾಗಿ ವರ್ತಿಸಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಎರಡೂ ಕಡೆಗಳಿಂದಲೂ ದೂರು ಪ್ರತಿದೂರು ದಾಖಲಾಗಿವೆ.
ಭಾನುವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ನಡೆದಿರುವ ಘಟನೆ ಇದು. ಶಾರಣ್ ಸ್ಯಾಮಿಯಲ್, ಅವರ ಗೆಳೆಯ ಹಾಗೂ ಗೆಳತಿ ಭಾನುವಾರ ವುಮೆನ್ಸ್ ಡೇ ಬೈಕ್ ರೈಡ್‌ನಲ್ಲಿ ಪಾಲ್ಗೊಂಡಿದ್ದರು. ರೈಡಿಂಗ್ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಕೋಣನಕುಂಟೆ ಠಾಣೆ ವ್ಯಾಪ್ತಿಯ ನೈಸ್ ರಸ್ತೆ ಬಳಿ ನೀರು ಕುಡಿಯಲು ಗಾಡಿ ನಿಲ್ಲಿಸಿದ್ದಾರೆ. ಆ ವೇಳೆ ಅಲ್ಲಿಗೆ ಬಂದ ಸ್ಥಳೀಯ ವೃದ್ಧರೊಬ್ಬರು ಯುವತಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಆ ವೃದ್ಧರ ಪುತ್ರ ಮಂಜುನಾಥ್ ಎಂಬಾತ ಬಂದು ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಗಾಡಿ ತೆಗೆಯುವಂತೆ ಒತ್ತಾಯಿಸಿದ್ದಾನೆ. ಬೈಕ್ ತೆಗೆಯದೇ ಇದ್ದಾಗ ಬೈಕ್‌ನ ಕೀ ಕಿತ್ತುಕೊಂಡು ಹೋಗಿದ್ದಾನೆ.
ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ ಸಾರ್ವಜನಿಕರ ಸ್ವತ್ತಾದ ರಸ್ತೆಯಲ್ಲಿ ವ್ಯಕ್ತಿಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕೋಣನಕುಂಟೆ ಪೊಲೀಸ್ ಠಾಣೆಗೆ ಬಂದು ಮಂಜುನಾಥ್ ಹಾಗೂ ಆತನ ತಂದೆಯ ವಿರುದ್ಧ ದೂರು ನೀಡಿದ್ದಾರೆ. ಯುವತಿಯರಿಗಿಂತ ಮೊದಲೇ ಠಾಣೆಗೆ ಬಂದ ಮಂಜುನಾಥ್ ಸಹ ಯುವತಿಯರ ವಿರುದ್ಧ ದೂರು ನೀಡಿದ್ದಾನೆ. ತಮ್ಮ ಪ್ರಾಪರ್ಟಿಗೆ ಅಕ್ರಮವಾಗಿ ಬಂದಿದ್ದಷ್ಟೇ ಅಲ್ಲದೇ ತಮ್ಮ ಮೇಲೆ ಹಲ್ಲೆ ಸಹ ಮಾಡಿದ್ದಾರೆಂದು ಆರೋಪ ಮಾಡಿದ್ದು, 11 ಜನರ ವಿರುದ್ಧ ದೂರು ನೀಡಿದ್ದಾನೆ. ಎರಡೂ ಕಡೆಯ ದೂರು ಹಾಗೂ ಪ್ರತಿದೂರುಗಳನ್ನು ಸ್ವೀಕರಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.