ಬೆಂಗಳೂರು: ಮನೆ ಬಾಡಿಗೆ ಕೇಳಿದ ಮಹಿಳೆಯ ಮುಖ ಹಾಗೂ ಕೈಯನ್ನು ಬಾಡಿಗೆದಾರ ಚಾಕುವಿನಿಂದ ಕೊಯ್ದು ಹಾಕಿದ (Knife Attack) ಘಟನೆ ನಡೆದಿದೆ. ಬೆಂಗಳೂರಿನ ಮುನೇಶ್ವರನಗರದಲ್ಲಿ ನಡೆದಿರುವ ಈ ಹಲ್ಲೆ ಘಟನೆ (Assault case) ತಡವಾಗಿ ಬೆಳಕಿಗೆ ಬಂದಿದೆ.
ಬಾಡಿಗೆ ಕೇಳಿದ ಮಹಿಳೆ ಶ್ರೀದೇವಿ, ಮುಖ ಕೊಯ್ದುಹಾಕಿದ ಬಾಡಿಗೆದಾರನ ಹೆಸರು ಸದ್ದಾಂ. ಶ್ರೀದೇವಿ ಅವರು ಇಲ್ಲಿನ ಫಯಾಜ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಶ್ರೀದೇವಿ ವಾಸವಾಗಿರುವ ಬಾಡಿಗೆ ಮನೆಯಲ್ಲೇ ನಜೀರ್ ಎಂಬಾತನೂ ವಾಸವಾಗಿದ್ದಾನೆ. ಅವರು ನೀಡುತ್ತಿದ್ದ ಬಾಡಿಗೆಯನ್ನ ಕಲೆಕ್ಟ್ ಮಾಡಿ ಬೇರೆ ರಾಜ್ಯದಲ್ಲಿರುವ ಫಯಾಜ್‌ಗೆ ಶ್ರೀದೇವಿ ನೀಡುತ್ತಿದ್ದರು.
ಆದ್ರೆ ನಜೀರ್ ಮೂರು ತಿಂಗಳಿನಿಂದ ಬಾಡಿಗೆ ನೀಡಿರಲಿಲ್ಲ. ಹೀಗಾಗಿ ಬಾಡಿಗೆ ನೀಡುವಂತೆ ಶ್ರೀದೇವಿ ಜೋರು ಧ್ವನಿಯಲ್ಲಿ ಕೇಳಿದ್ದಾರೆ. ಆ ವಿಚಾರವನ್ನು ನಜೀರ್ ತನ್ನ ಮಗ ಸದ್ದಾಂ ಬಳಿ ಚಾಡಿ ಹೇಳಿದ್ದಾನೆ. ಆಕ್ರೋಶದಿಂದ ಶ್ರೀದೇವಿ ಮನೆ ಬಳಿ ಹೋದ ಸದ್ದಾಂ ಶ್ರೀದೇವಿ ಜೊತೆ ಕಿರಿಕ್ ತೆಗೆದು ಚಾಕುವಿನಿಂದ ಮುಖ, ಕೈ ಕೊಯ್ದುಹಾಕಿದ್ದಾನೆ.
ಘಟನೆ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಂಡೇಪಾಳ್ಯ ಪೊಲೀಸರು ಆರೋಪಿ ಸದ್ದಾಂನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಈ ನಡುವೆ ಬಂಡೆಪಾಳ್ಯ ಪೊಲೀಸರು ಶ್ರೀದೇವಿ ಬಳಿ ಹಣ ಕೇಳಿರುವ ಆರೋಪವೂ ಕೇಳಿಬಂದಿದೆ. ದೂರು ಇತ್ಯಾದಿ ಜೆರಾಕ್ಸ್ ಮಾಡಿಸಲು ಖರ್ಚಾಗುತ್ತೆ. ಆರು ಸಾವಿರ ಹಣ ಕೊಡಿ ಎಂದು ಬಂಡೆಪಾಳ್ಯ ಪೊಲೀಸರು ಕೇಳಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವಿಜಯ್ ಜೊತೆ ಶ್ರೀದೇವಿ ಸಂಬಂಧಿಕ ಅರವಿಂದ್ ಎಂಬವರು ಮಾತಾಡಿರುವ ಆಡಿಯೋದಲ್ಲಿ ಆರೋಪಿಸಲಾಗಿದೆ. ಹಣ ಕೇಳಿರುವ ಬಗ್ಗೆ ಆಡಿಯೋದಲ್ಲಿ ಅರವಿಂದ್ ಪ್ರಸ್ತಾಪಿಸಿದ್ದಾರೆ. ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿದ್ದು, ಕೊಲೆಯತ್ನ ಪ್ರಕರಣವನ್ನು ಕೂಡ ದಾಖಲಿಸಿಕೊಂಡಿಲ್ಲ ಎಂದು ದೂರಲಾಗಿದೆ.
ಉಬರ್ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ!
ಬೆಂಗಳೂರು: ರಾಜಧಾನಿಯಲ್ಲಿ ಉಬರ್ ಟ್ಯಾಕ್ಸಿ ಚಾಲಕನೊಬ್ಬ ಮಹಿಳೆಯೊಬ್ಬರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಘಟನೆ ಬೋಗನಹಳ್ಳಿಯಲ್ಲಿ ನಡೆದಿದೆ. ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ಮಹಿಳೆ ಕ್ಯಾಬ್ ಬುಕ್ ಮಾಡಿದ್ದರು. ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿತ್ತು. ಇದರ ಅರಿವಿಲ್ಲದೇ ಮಹಿಳೆ ಮತ್ತು ಮಗ ಕ್ಯಾಬ್ ಹತ್ತಿ ಕುಳಿತಿದ್ದರು. ಬಳಿಕ ಇದು ಬೇರೆ ಕ್ಯಾಬ್ ಎಂದು ಅರಿತು ಕ್ಯಾಬ್ ಇಳಿಯಲು ಯತ್ನಿಸಿದ್ದರು.
ಈ ವೇಳೆ ಚಾಲಕ ಕಾರು ಚಲಾಯಿಸಲು ಮುಂದಾಗಿದ್ದ. ಮಹಿಳೆ ಆಕ್ಷೇಪಿಸಿದಾಗ, ದಿಢೀರನೆ ಕ್ಯಾಬ್ ನಿಲ್ಲಿಸಿ ಇಳಿದು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಏಕಾಏಕಿ ಮಹಿಳೆ ತಲೆಗೆ ಹೊಡೆಯಲು ಮುಂದಾಗಿದ್ದಾನೆ. ಅಪಾರ್ಟ್‌ಮೆಂಟ್ ಮುಂಭಾಗದಲ್ಲೆ ಈ ಹಲ್ಲೆ ನಡೆದಿದ್ದು, ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಘಟನೆಯ ದೃಶ್ಯ ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Sand Mafia: ಮರಳು ಮಾಫಿಯಾ ದುರುಳರಿಂದ ಅಧಿಕಾರಿಗಳ ಮೇಲೆ ಹಲ್ಲೆ