ಬೆಂಗಳೂರು: ಎಲ್ಲ ಪಕ್ಷಗಳಿಗಿಂತಲೂ ಮೊದಲೇ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುತ್ತೇವೆ ಎಂದಿದ್ದ ಕರ್ನಾಟಕ ಕಾಂಗ್ರೆಸ್ (KPCC), ನಾಲ್ಕು ತಿಂಗಳು ತಡವಾದರೂ ಘೋಷಣೆ ಮಾಡಿಲ್ಲ. ಪಕ್ಷದಲ್ಲಿ ಹೆಚ್ಚಿರುವ ಬಂಡಾಯವನ್ನು ನಿಭಾಯಿಸಲು ಕಷ್ಟವಾಗಿದ್ದು, ಇತ್ತ ಅಭ್ಯರ್ಥಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಆರು ತಿಂಗಳ ಮುಂಚೆಯೇ ಅಭ್ಯರ್ಥಿಗಳ ಹೆಸರು ಘೋಷಣೆ ಎಂದಿದ್ದ ಕೈ ನಾಯಕರು, ನವೆಂಬರ್ ಕೊನೆಯ ವಾರದಲ್ಲಿ ಪ್ರಟಿಸಲಾಗುತ್ತದೆ ಎಂದಿದ್ದರು. ನವೆಂಬರ್ ಕಳೆದು, ಡಿಸೆಂಬರ್, ಜನವರಿ ಆಯಿತು ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ.
ಟಿಕೆಟ್ ಘೋಷಣೆಯಲ್ಲಿ ಹೊಸ ಸಂಪ್ರದಾಯ ಶುರು ಮಾಡ್ತೇವೆ ಎಂದು ಹೇಳಿದ್ದ ನಾಯಕರು, ಅಂತಿಮ ಕ್ಷಣದಲ್ಲಿ ಟಿಕೆಟ್ ಘೋಷಿಸುವ ಹಳೆ ಚಾಳಿಗೇ ಜೋತುಬಿದ್ದಿದ್ದಾರೆ. ಟಿಕೆಟ್‌ಗಾಗಿ ಕಾದು ಕುಳಿತ ಟಿಕೆಟ್ ಆಕಾಂಕ್ಷಿಗಳಿಗೆ ಫೆಬ್ರವರಿಯಲ್ಲೂ ನಿರಾಸೆ ಸಾಧ್ಯತೆ ಇದೆ.
ಒಂದೊಂದು ಕ್ಷೇತ್ರಕ್ಕೂ ಹತ್ತಾರು ಜನ ಆಕಾಂಕ್ಷಿಗಳು ಇದ್ದಾರೆ. ಪ್ರತಿ ಕ್ಷೇತ್ರಗಳಲ್ಲಿ 2-3 ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಘೋಷಣೆ ಮಾಡದೆ ಇದ್ದರೂ ಅಭ್ಯರ್ಥಿಗಳಿಗೆ ಮೌಖಿಕವಾಗಿ ಸೂಚನೆ ನೀಡಿ ಸಿದ್ಧತೆ ನಡೆಸುವಂತೆ ಹೇಳುತ್ತೇವೆ ಎಂದಿದ್ದರು. ಆದರೆ ಈವರೆಗೂ ಈ ಕಾರ್ಯವನ್ನೂ ಮಾಡಿಲ್ಲ.
ಕಡೆಯ ಪಕ್ಷ ಹಾಲಿ ಶಾಸಕರಿಗೂ ಟಿಕೆಟ್ ಘೋಷಣೆ ಮಾಡಲು ಮಿನಾಮೇಷ ಎಣಿಸುತ್ತಿರುವ ಕೈ ನಾಯಕರ ನಡೆಯಿಂದ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಕ್ಷೇತ್ರದಲ್ಲಿ ಬಂಡಾಯ ಹೆಚ್ಚಾಗಿ ಸ್ಥಳೀಯ ನಾಯಕರು ಪಕ್ಷ ಬಿಟ್ಟು ಬಿಜೆಪಿ, ಜೆಡಿಎಸ್ ಸೇರಿದರೆ ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಇದನ್ನೂ ಓದಿ : Union budget 2023 : ಕರ್ನಾಟಕಕ್ಕೆ ಕೊಡುಗೆ; ಭದ್ರಾ ಮೇಲ್ದಂಡೆ ಯೋಜನೆಗೆ 5200 ಕೋಟಿ ರೂ.
ಈ ಹಿನ್ನೆಲೆಯಲ್ಲಿ ಫೆ. 2ರಂದು ಬೆಂಗಳೂರಿನಲ್ಲಿ ಚುನಾವಣಾ ಸಮಿತಿ ಮಹತ್ವದ ಸಭೆ ನಡೆಯಲಿದೆ. ಎಲೆಕ್ಷನ್ ಕಮಿಟಿ ಸಭೆಯಲ್ಲಿ ಅಂತಿಮಗೊಂಡ ಬಳಿಕ ಮತ್ತೆರಡು ಹಂತವನ್ನು ಅಭ್ಯರ್ಥಿಗಳು ದಾಟಬೇಕು. ದೆಹಲಿ ಮಟ್ಟದಲ್ಲಿ ಮತ್ತೊಂದು ಸ್ಕ್ರೀನಿಂಗ್ ಕಮಿಟಿ ಪರಿಶೀಲನೆ ನಡೆಸಿ ಅಂತಿಮಗೊಳಿಸಲಿದೆ. ಫೆಬ್ರವರಿ 2ರ ಸಭೆಯ ನಂತರವೂ ಕನಿಷ್ಟ 15-20 ದಿನಗಳು ಬೇಕಾಗಿದ್ದು, ಫೆಬ್ರವರಿ ಅಂತ್ಯದವರೆಗೂ ಟಿಕೆಟ್ ಘೋಷಣೆ ಆಗುವುದು ಅನುಮಾನವಾಗಿದೆ.
ಟಿಕೆಟ್ ಘೋಷಣೆ ಆದರೆ ಅಸಮಾಧಾನಿತ ಆಕಾಂಕ್ಷಿಗಳು ಪ್ರಜಾಧ್ವನಿ ಯಾತ್ರೆಗೆ ಬಂಡಾಯದ ಬಿಸಿ ಆಗುತ್ತದೆ ಎಂಬ ಕಾರಣಕ್ಕೆ ಟಿಕೆಟ್ ಘೋಷಣೆ ಮಾಡಲು ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.