Site icon Vistara News

Land Registration : ಇನ್ನು ಮನೆಯಿಂದಲೇ ರಿಜಿಸ್ಟ್ರೇಷನ್‌ ಅವಕಾಶ, ನೋಂದಣಿ ಕಚೇರಿಗೆ ಹೋಗಬೇಕಾಗಿಯೇ ಇಲ್ಲ

Land Registration online registration1

ಬೆಂಗಳೂರು: ಇನ್ನು ಮುಂದೆ ಭೂಮಿ ಸೇರಿದಂತೆ ಯಾವುದೇ ನೋಂದಣಿಗೆ (Land Registration) ಉಪನೋಂದಣಿ ಕಚೇರಿಗೆ (Sub Registrar office) ಅನಗತ್ಯ ಅಲೆಯಬೇಕಾಗಿಲ್ಲ ಮನೆಯಿಂದಲೇ ರಿಜಿಸ್ಟ್ರೇಷನ್ (Registration from Home) ಮಾಡಬಹುದು. ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byregowda) ಅವರು ಮಂಡಿಸಿದ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2024ರಲ್ಲಿ (Stamp amendment bill) ಈ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಸಂದರ್ಭದಲ್ಲಿ ಎರಡೂ ಕಡೆಯವರ ಉಪಸ್ಥಿತಿಗೆ ವಿನಾಯಿತಿ ನೀಡಿರುವ ಕಾರಣ ಇದು ನೇರವಾಗಿ ಮನೆಯಿಂದಲೇ ನಡೆಯಲಿದೆ.

ನೋಂದಣಿ ಪ್ರಕ್ರಿಯೆಯಲ್ಲಿ ನಾಗರೀಕ ಸೇವೆಯನ್ನು ಮತ್ತಷ್ಟು ಸರಳ ಮತ್ತು ಜನಸ್ನೇಹಿಗೊಳಿಸುವ ಉದ್ದೇಶದಿಂದ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2024 ಮಂಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ತಿಳಿಸಿದರು.

ಮನೆಯಿಂದಲೇ ನೋಂದಣಿಗೆ ಅವಕಾಶ

“ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಎರಡು ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. ಆ ಪೈಕಿ ಮೊದಲ ತಿದ್ದುಪಡಿ ಆಸ್ತಿ ಮಾರಾಟಗಾರರು ಹಾಗೂ ಕೊಳ್ಳುವವರು ಇಬ್ಬರ ಉಪಸ್ಥಿತಿಯೂ ಇಲ್ಲದೆ ತಾವಿದ್ದಲ್ಲಿದಂಲೇ ತಾಂತ್ರಿಕವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ” ಎಂದು ಕೃಷ್ಣ ಬೈರೇಗೌಡರು ಮಾಹಿತಿ ನೀಡಿದರು.

ಈ ಹಿಂದೆ ಉಪ ನೋಂದಣಾಧಿಕಾರಿ ಕಚೇರಿಗೆ ಎರಡೂ ಕಡೆಯವರ ಉಪಸ್ಥಿತಿ ಅನಿವಾರ್ಯವಾಗಿತ್ತು. ಹೀಗಾಗಿ ಸರ್ಕಾರಿ ಕಚೇರಿಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಎಲ್ಲರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಜನಸಾಮಾನ್ಯರು ಅನಗತ್ಯವಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಓಡಾಡುವುದನ್ನು ತಪ್ಪಿಸುವ ಸಲುವಾಗಿ ತಾಂತ್ರಿಕ ನೋಂದಣಿಗೆ ಅಂಕಿತ ಹಾಕಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಕರ್ನಾಟಕ ಹೌಸಿಂಗ್ ಬೋರ್ಡ್, ಸ್ಲಂ ಬೋರ್ಡ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಂತಹ ನಂಬಿಕಾರ್ಹ ಮೂಲಗಳ ಸಹಾಯದಿಂದ ನಾಗರಿಕರು ತಾಂತ್ರಿಕವಾಗಿಯೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಈ ಹೊಸ ಮಾದರಿ ಈಗಾಗಲೇ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂಸಹ ಜನರಿಗೆ ಉತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉಪನೋಂದಣಿ ಕಚೇರಿಯಲ್ಲಿ ಜನಸಂದಣಿ

ಇದನ್ನೂ ಓದಿ: Hindu Temples : ದೇವಸ್ಥಾನ ಸಮಿತಿಗೆ ಅನ್ಯಧರ್ಮೀಯರ ನೇಮಕ; ದೇವಸ್ಥಾನಗಳ ಮಹಾಸಂಘ ವಿರೋಧ

ಪೇಪರ್ ಖಾತಾ ನೋಂದಣಿಗೆ ತಡೆ

ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಹಣ ಸೋರಿಕೆಯನ್ನು ತಡೆಯುವ ಸಲುವಾಗಿ ಪೇಪರ್ ಖಾತಾ ನೋಂದಣಿಗೆ ತಡೆಯೊಡ್ಡಲು ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ ಎಂದು ಸದನದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಸದನಕ್ಕೆ ಈ ಕುರಿತು ಮಾಹಿತಿ ನೀಡಿದ ಅವರು,“ನಗರ ಭಾಗದಲ್ಲಿ ಪೇಪರ್ ಖಾತಾ ಮೂಲಕವೂ ನೋಂದಣಿ ನಡೆಸಲಾಗುತ್ತಿದೆ. ಅನೇಕ ಪ್ರಕರಣಗಳಲ್ಲಿ ನಕಲಿ ಪೇಪರ್ ಖಾತಾ ಬಳಸಿ ನೋಂದಣಿ ಮಾಡುತ್ತಿರುವುದು ತಿಳಿದುಬಂದಿದೆ. ಅಲ್ಲದೆ, ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರೆವೆನ್ಯೂ ಲೇಔಟ್‌ಗಳಲ್ಲಿ ಮೂಲ ಮಾರ್ಗಸೂಚಿ ದರವನ್ನೇ ಇಳಿಸಿ ನೋಂದಣಿ ಮಾಡಲಾಗಿತ್ತು. ಪರಿಣಾಮ ಸರ್ಕಾರಕ್ಕೆ 400 ಕೋಟಿ ರೂ. ನಷ್ಟ ಉಂಟಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿದ್ದರಾಮಯ್ಯನವರು 28 ಜನ ಉಪನೋಂದಣಾಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿದ್ದರು. ಆದರೆ, ವಿಚಾರಣೆ ನಡೆಸಿದ್ದ ಸಮಿತಿ, ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆದಿರುವುದು ಕಂಡುಬಂದಿಲ್ಲ ಎಂದು ವರದಿ ನೀಡಿದ್ದರು. ಪರಿಣಾಮ ಎಲ್ಲಾ 28 ಜನ ಉಪ ನೋಂದಣಾಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಲಾಗಿತ್ತು” ಎಂದು ಅವರು ವಿಷಾದಿಸಿದರು.

ಉಪನೋಂದಣಾಧಿಕಾರಿ ಅಮಾನತಿನಿಂದ ಯಾವುದೇ ಲಾಭವಿಲ್ಲ, ವ್ಯವಸ್ಥೆ ಬದಲಾಗಬೇಕು

“ಇಂತಹ ಪ್ರಕರಣಗಳಲ್ಲಿ ಉಪ ನೋಂದಣಾಧಿಕಾರಿಯನ್ನು ಅಮಾನತು ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಏಕೆಂದರೆ ಅವರು ಒಂದೇ ದಿನದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಪರಿಣಾಮ ಸರ್ಕಾರದ ಮರ್ಯಾದೆ ಹರಾಜಾಗುತ್ತದೆ. ಹೀಗಾಗಿ ಸಮಸ್ಯೆಯ ಮೂಲವನ್ನು ಹುಡುಕಿ ಅದಕ್ಕೆ ಚಿಕಿತ್ಸೆ ನೀಡಬೇಕಿದೆ. ಇದೇ ಕಾರಣಕ್ಕೆ ವಿಧೇಯಕದಲ್ಲಿ ಮತ್ತೊಂದು ತಿದ್ದುಪಡಿಯನ್ನು ತರಲಾಗಿದೆ.

ಇನ್ನು ಮುಂದೆ ಇ-ಆಸ್ತಿ ಮೂಲಕ ಖಾತೆ ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೌಸಿಂಗ್ ಬೋರ್ಡ್ ಹಾಗೂ ಕಾವೇರಿ ಡೇಟಾಬೇಸ್‌ನಿಂದ ಅಸಲಿ ಖಾತಾ ಪರಿಶೀಲನೆ ನಡೆಸಿದ ನಂತರವೇ ನೋಂದಣಿ ಮುಂದುವರೆಯಲಿದೆ. ಆ ಮೂಲಕ ಇ-ಖಾತಾವನ್ನು ನೀಡಲಾಗುವುದು. ಇಂತಹ ಕ್ರಮಗಳಿಂದ ಅಕ್ರಮಗಳಿಗೂ ತಡೆಯೊಡ್ಡಿದಂತಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.

Exit mobile version