Site icon Vistara News

Lingayat CM : ರಾಜ್ಯದಲ್ಲಿ 3 ಲಿಂಗಾಯತ ಡಿಸಿ, 7 ಎಸ್ಪಿ ಇದಾರೆ; ಶಾಮನೂರು ಹೇಳಿಕೆ 100% ತಪ್ಪು ಎಂದ ರಾಯರೆಡ್ಡಿ

Lingayat CM Basavaraja Rayareddi and Shivashankarappa

ಬೆಂಗಳೂರು: ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆಯಾಗುತ್ತಿದೆ (Negligence of Lingayat Leaders) ಎಂಬ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಹೇಳಿಕೆಯನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ (Basavaraja Rayareddi) ಅವರು ಆಕ್ಷೇಪಿಸಿದ್ದಾರೆ ಮತ್ತು ಶಾಮನೂರು ಅವರಿಗೆ ಮಾಹಿತಿಯ ಕೊರತೆ ಇದೆ ಎಂದಿದ್ದಾರೆ.

ರಾಜ್ಯದಲ್ಲಿ ಏಳು ಮಂದಿ ಎಸ್‌ಪಿಗಳು, ಮೂವರು ಜಿಲ್ಲಾಧಿಕಾರಿಗಳು ಮತ್ತು 41 ವಿವಿಗಳ ಪೈಕಿ 11 ವಿವಿಗಳಲ್ಲಿ ಲಿಂಗಾಯತ ಕುಲಪತಿಗಳಿದ್ದಾರೆ. ಇಲ್ಲಿ ಕಡೆಗಣನೆಯ ಪ್ರಶ್ನೆಯೇ ಬರುವುದಿಲ್ಲ. ಶಾಮನೂರು ಶಿವಶಂಕರಪ್ಪ ಅವರಿಗೆ ಮಾಹಿತಿಯ ಕೊರತೆಯಿಂದ ಈ ರೀತಿ ಹೇಳಿದ್ದಾರೆ ಎಂದು ರಾಯರೆಡ್ಡಿ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು. ಇದರೊಂದಿಗೆ ಲಿಂಗಾಯತ ಸಿಎಂ (Lingayat CM) ಚರ್ಚೆ ಕಣಕ್ಕೆ ಪ್ರವೇಶ ಪಡೆದರು.

ಪ್ರಧಾನಿ ಯಾರನ್ನು ಬೇಕಾದರು ಮಾಡಬಹುದು, ಜವಾನ ಆಗಲ್ಲ!

ಶಾಮನೂರು ಹೇಳಿಕೆಯನ್ನು ಬೇರೆ ಬೇರೆ ಉದಾಹರಣೆಗಳ ಮೂಲಕ ರಾಯರೆಡ್ಡಿ ಆಕ್ಷೇಪಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಜಾತಿ ಆಧಾರಿತವಾಗಿ ಕಡೆಗಣನೆ ಆಗಿಲ್ಲ ಎಂದು ವಾದಿಸಿದರು.

ಲಿಂಗಾಯತ ಸಮಾಜದ ಅಧ್ಯಕ್ಷರಾಗಿರುವ ಶಾಮನೂರು ಅವರು ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸ್ಥಾನಮಾನ ಇಲ್ಲ ಎಂದು ಹೇಳಿರುವುದು ಸರಿಯಲ್ಲ. ಅಧಿಕಾರಿಗಳ ನೇಮಕ ಮಾಡುವಾಗ ಜಾತಿ ಆಧಾರದ ಮೇಲೆ ಪೋಸ್ಟಿಂಗ್ ಕೊಡಲು ಆಗುವುದಿಲ್ಲ. ಬೇಕಿದ್ದರೆ ಮಂತ್ರಿ ಮಂಡಲದ ರಚನೆಯ ವೇಳೆ ಜಾತಿ, ಪ್ರಾದೇಶಿಕ ಅಸಮಾನತೆ ತಪ್ಪಿಸಲು ಜಾತಿ ಆಧಾರಿತವಾಗಿ ಸಂಪುಟ ರಚಿಸಬಹುದು. ಇದೆಲ್ಲ ಸರಿಯೋ ತಪ್ಪೋ, ಮಾಡಬಹುದೋ ಮಾಡಬಾರದೋ ಎನ್ನುವುದು ಬೇರೆಯದೇ ಚರ್ಚೆ. ಸಿದ್ದರಾಮಯ್ಯನವರು ಈ ಸಂಪುಟ ಸರ್ಕಸ್‌ ಮಾಡಿದ್ದಾರೆʼʼ ಎಂದು ರಾಯರೆಡ್ಡಿ ಹೇಳಿದರು.

ʻಪ್ರಧಾನಿ ಯಾರು ಬೇಕಾದರೂ ಆಗಬಹುದು. ಹಾಗಂತ ಯಾರನ್ನು ಬೇಕಾದರೂ ಅಟೆಂಡರ್ ಮಾಡಲು ಸಾಧ್ಯವಿಲ್ಲ. ಅಟೆಂಡರ್ ಆಗೋಕೆ ಕ್ವಾಲಿಫಿಕೇಶನ್ ಇರಬೇಕುʼʼ ಎಂದು ರಾಯರೆಡ್ಡಿ ನುಡಿದರು.

ಸಿದ್ದರಾಮಯ್ಯ ಲಿಂಗಾಯತರಿಗೆ ಅನ್ಯಾಯ ಮಾಡಿಲ್ಲ

ʻʻನಾನು ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಲಿಂಗಾಯತರಿಗೆ ಅನ್ಯಾಯ ಆಗಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಸಿದ್ದರಾಮಯ್ಯ ಅವರಯ ನಾನು‌ ಬಸವತತ್ವದ ಅನುಯಾಯಿ ಅಂತಾರೆ. ಬಸವ ತತ್ವ ಸಾಮಾಜಿಕ‌ ನ್ಯಾಯದ ಮೇಲೆ ನಿಂತಿದೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬಸವಣ್ಣನವರ ಫೋಟೊವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕೆಂಬ ಮನವಿ ಮಾಡಿದ್ದೆವು. ತಕ್ಷಣವೇ ಸಿದ್ದರಾಮಯ್ಯ ಫೋಟೊ ಹಾಕಿಸಿದರು. ವಿಜಯಪುರ ವಿವಿಗೆ ಅಕ್ಕಮಹಾದೇವಿ ಹೆಸರು ಪ್ರಸ್ತಾಪಿಸಿದಾಗ ಕೂಡಲೇ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದರುʼʼ ಎಂದು ಹೇಳಿದ ರಾಯ ರೆಡ್ಡಿ ಅವರು, ಜಾತಿಗಳ ಹೆಸರಿನಲ್ಲಿ ಜಗಳ ಹಚ್ಚಬಾರದು ಎಂದು ಕಿವಿ ಮಾತು ಹೇಳಿದರು.

ಜಾತಿ ಆಧಾರಿತ ಪೋಸ್ಟಿಂಗ್‌ ಸರಿಯಲ್ಲ ಎಂದ ರಾಯ ರೆಡ್ಡಿ

ಶಾಮನೂರು ಅವರಿಗೆ ದಾವಣಗೆರೆ ಜಿಲೆಲಯ ಬಗ್ಗೆಯೇ ಮಾಹಿತಿ ಕೊರತೆ ಇದೆ. ದಾವಣಗೆರೆ ಜಿಲ್ಲೆಯಲ್ಲೇ ಮೂವರು ಲಿಂಗಾಯತ ಅಧಿಕಾರಿಗಳಿದ್ದಾರೆ. ದಾವಣಗೆರೆ ಸಿಇಒ ಸುರೇಶ್ ಹಿಟ್ನಾಳ್, ಎಸ್ಪಿ ಉಮಾರಾಣಿ ಲಿಂಗಾಯತರು ಎಂದು ವಿವರಿಸಿದರು. ಇನ್ನುಳಿದಂತೆ ರಾಜ್ಯದಲ್ಲಿ ನಿತೀಶ್ ಪಾಟೀಲ್, ದಿವಾಕರ್, ಗೋವಿಂದರೆಡ್ಡಿ ಲಿಂಗಾಯತ ಡಿಸಿಗಳು ಎಂದು ತಿಳಿಸಿದರು.

ಅದೇ ವೇಳೆ, ಜಾತಿ ಆಧಾರಿತವಾಗಿ ಮಾತನಾಡುವುದು ಸರಿಯಲ್ಲ ಎಂಬ ಕಿವಿಮಾತನ್ನೂ ಹೇಳಿದರು.
ʻʻಜಾತಿ ಆಧಾರದ ಮೇಲೆ ಪೋಸ್ಟಿಂಗ್ ಆಗಬಾರದು. ಎಲ್ಲ ಜಾತಿಗಳಲ್ಲಿ ಅರ್ಹ ಹಾಗು ಅನರ್ಹ ಅಧಿಕಾರಿಗಳು ಇದ್ದಾರೆ. ಜಾತಿ ಆಧಾರಿತ ಮೇಲೆ ಅಧಿಕಾರಿಗಳು ನೇಮಕ ಆಗಬಾರದು. ಇವತ್ತು ಲಿಂಗಾಯತ ಅಂತ ಹೇಳಿದ್ರೆ ನಾಳೆ ಒಕ್ಕಲಿಗರು ಕುರುಬ ಅಧಿಕಾರಿಗಳು ಅಂತ ಕೇಳ್ತಾರೆ. ಶ್ಯಾಮನೂರು ಅವರ ಹೇಳಿಕೆಗಳು ಆಡಳಿತದ ಮೇಲೆ ಪರಿಣಮ ಬೀರಲಿದೆʼʼ ಎಂದು ಹೇಳಿದ ರಾಯರೆಡ್ಡಿ ಅವರು, ʻʻಶ್ಯಾಮನೂರುಗೆ ಅಷ್ಟು ಪ್ರೀತಿ ಇದ್ರೆ ಲಿಂಗಾಯತ ಅಧಿಕಾರಿಗಳನ್ನು ಅವರ ಜಿಲ್ಲೆಯಲ್ಲಿ ನೇಮಕ ಮಾಡಿಕೊಳ್ಳಲಿʼʼ ಎಂದರು.

ಯಡಿಯೂರಪ್ಪನವರ ಹೇಳಿಕೆಯೂ ತಪ್ಪೇ ಎಂದ ರಾಯರೆಡ್ಡಿ

ಲಿಂಗಾಯತ ಅಧಿಕಾರಿಗಳು ಮತ್ತು ನಾಯಕರ ಕಡೆಗಣನೆ ಎಂಬ ಶಾಮನೂರರ ಹೇಳಿಕೆಯನ್ನು ಬಿ.ಎಸ್‌ ಯಡಿಯೂರಪ್ಪ ಅವರು ಬೆಂಬಲಿಸಿದ್ದು ತಪ್ಪು. ಯಾರೇ ಆಗಲಿ ಜಾತಿ ಆಧಾರಿತವಾಗಿ ನೋಡಬಾರದು ಎಂದರು.

ಶಾಮನೂರು ಅಂತಲ್ಲ. ಯಡಿಯೂರಪ್ಪ ಅಂತಲ್ಲ. ಶಾಮನೂರು ಶಾಸಕರಾಗಿ ಮಾತನಾಡಿದ್ದು ತಪ್ಪು. ನಾನೂ ಜಾತಿ ಆಧಾರಿತವಾಗಿ ಮಾತನಾಡಿದ್ರೆ ತಪ್ಪೇ ಎಂದರು.

ಸಿದ್ದರಾಮಯ್‌ ಹೇಳಿ ಪ್ರೆಸ್‌ ಮೀಟ್‌ ಮಾಡಿದ್ದಲ್ಲ ಎಂದ ನಾಯಕ

ಈಗ ನಾನು ಮಾಧ್ಯಮ ಗೋಷ್ಠಿ ಮಾಡಿದ ಕೂಡಲೇ ಕೆಲವರು ಸಿದ್ದರಾಮಯ್ಯ ಹೇಳಿ ರಾಯ ರೆಡ್ಡಿ ಮಾತನಾಡಿದರು ಎಂದು ಹೇಳಬಹುದು. ಆದರೆ, ನಾನು ಸಿದ್ದರಾಮಯ್ಯ ಹೇಳಿ ಮಾತನಾಡುತ್ತಿರುವುದಲ್ಲ. ನಾನೊಬ್ಬ ಜವಾಬ್ದಾರಿಯುತ ಶಾಸಕ. ಹಾಗಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಹಾಗಾಗಿ ಮಾತನಾಡಿದ್ದೇನೆ.

ʻʻನಾನು ಸಿದ್ದರಾಮಯ್ಯ ಬಳಿ ಏನೂ ಕೇಳಿಲ್ಲ. ನಾನು ಅಷ್ಟೊಂದು ಕೀಳು ಮಟ್ಟಕ್ಕೆ ಇಳಿದಿಲ್ಲ. ನನ್ನನ್ನ ನಾನು ಡಿಗ್ರೇಡ್ ಮಾಡಿಕೊಳ್ಳಲ್ಲ. ಅವರು ಹೇಳಿದ್ದಕ್ಕೆ ನಾನು ಪ್ರೆಸ್ನೀಟ್ ಮಾಡ್ತಿಲ್ಲʼʼ ಎಂದು ಸ್ಪಷ್ಟಪಡಿಸಿದರು.

Exit mobile version