ಬೆಂಗಳೂರು: ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ (Liquid Nitrogen) ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್‌ನ ಒಂದು ತುತ್ತು ಜೀವಕ್ಕೆ ಕುತ್ತು ತರಬಹುದು. ಹೀಗಾಗಿ ಕಲರ್ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಬಳಿಕ ಇದೀಗ ರಾಜ್ಯದಲ್ಲಿ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ಬ್ಯಾನ್ ಮಾಡಲಾಗಿದೆ.
ಕೆಲವು ರೆಸ್ಟೋರಂಟ್‌ಗಳಲ್ಲಿ ಫುಡ್ ಪ್ರಿಯರನ್ನು ಆಕರ್ಷಿಸಲೆಂದೇ ತರಹೇವಾರಿ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಂತೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಹೆಚ್ಚಾಗುತ್ತಿದೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾಯದ ಬಾಗಿಲು ತಟ್ಟುತ್ತಿದ್ದಾರೆ. ಲಿಕ್ವಿಡ್ ನೈಟ್ರೋಜನ್ ಮೂಲಕ ಸ್ಮೋಕ್ ಐಸ್‌ಕ್ರೀಂ, ಸ್ಮೋಕ್ ಬಿಸ್ಕತ್ತು, ಬಿಯರ್‌ನಲ್ಲಿ ಬಳಸಲಾಗುತ್ತಿದ್ದು,ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಹೀಗಾಗಿ ಲಿಕ್ವಿಡ್ ನೈಟ್ರೋಜನ್ ಬಳಸಿದ ಆಹಾರ ಸೇವಿಸುವ ಮುನ್ನ ಎಚ್ಚರವಾಗಿರಿ.
ಈ ಸ್ಮೋಕಿಂಗ್ ಲಿಕ್ವಿಡ್ ನೈಟ್ರೋಜನ್ ಸೇವನೆಯಿಂದ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಲಿಕ್ವಿಡ್ ನೈಟ್ರೋಜನ್ ಸೇವನೆಯಿಂದ ಕರಳು, ಗಂಟಲುಗಳಲ್ಲಿ ಹುಣ್ಣಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್ ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಪಕ್ಕದ ತಮಿಳುನಾಡಲ್ಲಿ ಬಿಸ್ಕತ್ ಮತ್ತು ಐಸ್‌ಕ್ರೀಮ್‌ನಂತಹ ಆಹಾರ ಪದಾರ್ಥಗಳ ಜತೆ ಲಿಕ್ವಿಡ್ ನೈಟ್ರೋಜನ್ ನೇರ ಬಳಕೆಯನ್ನು ನಿಷೇಧಿಸಿದೆ. ಇದೀಗ ಕರ್ನಾಟಕದಲ್ಲೂ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: Cotton Candy Ban : ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಬ್ಯಾನ್, ಗೋಬಿ ಮಂಚೂರಿಗೂ ಡೇಂಜರ್
ಈ ಲಿಕ್ವಿಡ್ ನೈಟ್ರೋಜನ್ ಅಥವಾ ದ್ರವ ಸಾರಜನಕವನ್ನು ಔಷಧ ಮತ್ತು ರಾಸಾಯನಿಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು 40 ಡಿಗ್ರಿ ಸೆಂಟಿಗ್ರೇಡ್‌ನಷ್ಟು ತಂಪಾಗಿಸಲು ಬಳಸುತ್ತವೆ. ಅಲ್ಲದೆ, ಫ್ರೀಜ್ ಮಾಡುವ ಹಲವು ವಿಧಾನಗಳಲ್ಲಿ ಬಳಸುತ್ತಾರೆ. ಈ ಲಿಕ್ವಿಡ್ ನೈಟ್ರೋಜನ್ ಸುರಿದರೆ ಥಟ್ಟನೆ ಹಿಗ್ಗಿ ಬಿಳಿಯ ಹೊಗೆಯಂತೆ ಆವಿಯಾಗಿ ಬಿಡುತ್ತದೆ.
ಇನ್ನೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006 ಪ್ರಕಾರ ಲಿಕ್ವಿಡ್ ನೈಟ್ರೋಜನ್ ಆಹಾರದಲ್ಲಿ ಬಳಸಬಾರದು ಎಂಬುದು ಈ ಮೊದಲಿನಿಂದಲೂ ಇದೆ. ಆದರೂ ಕೆಲವರು ಜನರನ್ನು ಆಕರ್ಷಿಸಲು, ಹೊಸ ಮೆನುವಿಗಾಗಿ ಇದನ್ನು ಬಳಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಬಳಸುವವರ ವಿರುದ್ಧ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಆದೇಶದಲ್ಲಿ ಏನಿದೆ?
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011ರಡಿ ಲಿಕ್ವಿಡ್ ನೈಟ್ರೋಜನ್ ಅನ್ನು ಡೈರಿ ಆಧಾರಿತ ಸಿಹಿತಿಂಡಿಗಳು -ಐಸ್ ಕ್ರೀಮ್‌ನಲ್ಲಿ ಘನೀಕರಣ ಮತ್ತು ಕೂಲಿಂಗ್ (Contact Freezing and Cooling Agent en Dairy- based desserts -Ice Cream) ಗಳ ತಯಾರಿಕೆಯ ಸಮಯದಲ್ಲಿ ಮಾತ್ರ ಬಳಸಲು ಅನುಮತಿ ಇದೆ. ಆದರೆ ಸ್ಮೋಕಿಂಗ್ ಬಿಸ್ಕತ್, ಡೆಸರ್ಟ್ ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ ಉಪಯೋಗಿಸಲು ಅನುಮತಿ ಇಲ್ಲ. ಈ ಲಿಕ್ವಿಡ್ ನೈಟ್ರೋಜನ್ ಬಳಸಿದ ಆಹಾರ ತಿಂದರೆ ಜೀರ್ಣಾಂಗದ ಭಾಗಗಳಿಗೆ ಹಾನಿಯುಂಟಾಗುತ್ತದೆ.
ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 30(2)(ಎ)ರಡಿ ಲಿಕ್ವಿಡ್ ನೈಟ್ರೋಜನ್ ಅನ್ನು ತಿನಿಸುಗಳಿಗೆ ಉಪಯೋಗಿಸುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಉಲ್ಲಂಘನೆಯ ಪ್ರಕರಣಗಳು ಕಂಡು ಬಂದರೆ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ