ಬೆಂಗಳೂರು: ಲೋಕಸಭೆ ಚುನಾವಣಾ (Lok Sabha Election 2024) ಸಮಯದಲ್ಲಿ ದಾಖಲೆಯಿಲ್ಲದೇ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಹಣವನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಸದ್ಯ ನಿನ್ನೆ ಶನಿವಾರ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕೋಟಿ ಕೋಟಿ ಹಣದ ಬ್ಯಾಗ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಇಷ್ಟೊಂದು ಹಾರ್ಡ್ ಕ್ಯಾಶ್ ಎಲ್ಲಿಗೆ ಸಾಗಾಟ ಮಾಡಲಾಗುತ್ತಿತ್ತು, ಎಲ್ಲಿಂದ ತೆಗೆದುಕೊಂಡು ಬರಲಾಗಿತ್ತು? ಜತೆಗೆ ಹಣ, ಬೆಲೆ ಬಾಳುವ ಕಾರು, ದಾಖಲೆಗಳನ್ನು ಸ್ಥಳದಲ್ಲೇ ಬಿಟ್ಟು ಕಿಡಿಗೇಡಿಗಳು ಕಾಲ್ಕಿತ್ತಿದ್ದೇಕೆ? ಎಂಬ ಅನುಮಾನ ಮೂಡಿದೆ.
ಈ ಪ್ರಕರಣವು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಕಾಂಗ್ರೆಸ್ ಮೇಲೆ ಬಿಜೆಪಿ, ಬಿಜೆಪಿ ಮೇಲೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಸದ್ಯ ಎಲ್ಲಾ ಆಯಾಮದಲ್ಲೂ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈಗಾಗಲೇ ಕಾರು ಮತ್ತು ಬೈಕ್ ಸೋಮಶೇಖರ್ ಜಿ, ಧನರಾಜ್ ಎಂಬುವರ ಹೆಸರಲ್ಲಿ ಇರುವುದು ತಿಳಿದು ಬಂದಿದೆ. ಈಗಾಗಲೇ ವೆಹಿಕಲ್ ಮಾಹಿತಿ ಆಧಾರದ ಮೇಲೆ ಅವರ ಮನೆಗಳಿಗೆ ನೋಟಿಸ್ ನೀಡಲಾಗಿದೆ.
ಕಾರಿನಲ್ಲಿ ಒಂದಷ್ಟು ದಾಖಲೆಗಳು, ಹಾರ್ಡ್ ಡಿಸ್ಕ್, ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿವೆ. ಹೀಗಾಗಿ ಕಾರಿನಲ್ಲಿ ಪತ್ತೆಯಾಗಿರುವ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಈವರೆಗೆ 1 ಕೋಟಿ 34 ಲಕ್ಷ ರೂ. ಹಣ ಪತ್ತೆಯಾಗಿದೆ. ಇನ್ನೊಂದು ಕಡೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಕಾಂಗ್ರೆಸ್‌ಗೆ ಸೋಲಿನ ಹತಾಶೆ- ತೇಜಸ್ವಿ ಸೂರ್ಯ
ಜಯನಗರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೋಟ್ಯಾಂತರ ರೂ. ಹಣ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಕರೆಯೊಂದು ಬಂದಿತ್ತು, ಆ ಪ್ರಕಾರ ಕಾಂಗ್ರೇಸ್ ಸದಸ್ಯರು ಹಣ ಹಂಚುತ್ತಿರುವ ಕುರಿತು ಮಾಹಿತಿ ನೀಡಿದರು. ಯಾರಿಂದ ಬಲವಂತವಾಗಿ ಹಣ ಪಡೆದಿದ್ದಾರೋ ಅವರಿಂದಲೇ ಮಾಹಿತಿ ಸೋರಿಕೆಯಾಗಿತ್ತು. ಕೂಡಲೇ ನಾವು ಈ ವಿಚಾರವನ್ನು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಕೂಡಲೇ ಕಾರ್ಯಪ್ರವೃತ್ತರಾದ ಚುನಾವಣಾ ಅಧಿಕಾರಿಗಳು ಕೆಂಪು ಬಣ್ಣದ ವೋಕ್ಸ್ ವ್ಯಾಗನ್ ಕಾರು ಹಾಗು ನೋಂದಣಿಯಾಗದ ಬೆಂಜ್ ಕಾರನ್ನು ತಡೆದು ತಪಾಸಣೆ ನಡೆಸಿದಾಗ 1.5 ಕೋಟಿ ಹಣ ಕಂಡು ಬಂದಿದೆ. ಕೂಡಲೇ ಅಲ್ಲಿಂದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಘಟನೆ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ತೇಜಸ್ವೀ ಸೂರ್ಯ, ಕಾಂಗ್ರೆಸ್‌ಗೆ ಈ ಬಾರಿ ನೂರಕ್ಕೆ ನೂರು ಸೋಲು ಖಚಿತ ಎಂಬ ಸತ್ಯ ಗೊತ್ತಾಗಿದೆ. ಹಾಗಾಗಿ ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದೆ. ಕೆಲ ದಿನಗಳ ಹಿಂದೆ ರ್‍ಯಾಲಿ ವೇಳೆ ಸಿದ್ಧರಾಮಯ್ಯನವರಿಗೆ ಗನ್ ಹಿಡಿದು ಹಾರ ಹಾಕಿ ಜನರನ್ನು ಭಯಪಡಿಸುವ ಪ್ರಸಂಗ ಕೂಡ ನಡೆದಿದೆ. ಈಗ ಕೋಟಿ ಹಣದ ಮೂಲಕ ಚುನಾವಣೆ ಎದುರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್‌ನ ಇಂತಹ ಕಾರ್ಯಗಳಿಗೆ ತಡೆ ಹಾಕುವ ಉದ್ದೇಶದಿಂದಲೇ ನಾವೇ ಚುನಾವಣಾ ಅಧಿಕಾರಿಗಳಿಗೆ ವಾಹನದ ಸಂಖ್ಯೆ ಹಾಗು ಸ್ಥಳದ ಸಮೇತ ಅಕ್ರಮ ಹಣ ವರ್ಗಾವಣೆ ಬಗ್ಗೆ ಮಾಹಿತಿ ನೀಡಿದೆವು. ಕೇವಲ 10 ನಿಮಿಷದಲ್ಲಿ ಅಧಿಕಾರಿಗಳು ಅಕ್ರಮ ಹಣ ಜಪ್ತಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ತನ್ನ ಹಣಬಲ, ತೋಳ್‌ಬಲ, ಅಧಿಕಾರ ಬಲದಿಂದ ಚುನಾವಣೆ ಗೆಲ್ಲಲು ಮುಂದಾಗಿದೆ. ಆದರೆ ಅಂತಿಮವಾಗಿ ಬೆಂಗಳೂರು ದಕ್ಷಿಣದ ಜನರ ಸ್ವಾಭಿಮಾನ ಗೆಲ್ಲುತ್ತದೆ ಎಂಬುದನ್ನು ಕಾಂಗ್ರೆಸ್ ಮನದಟ್ಟು ಮಾಡಿಕೊಳ್ಳಬೇಕಿದೆ. ನರೇಂದ್ರ ಮೋದಿಯವರನ್ನು ಈ ಕ್ಷೇತ್ರದ ಜನ ಆಯ್ಕೆ ಮಾಡುತ್ತಾರೆ ಎಂದು ನುಡಿದರು.
ಇದನ್ನೂ ಓದಿ: Murder case : ಸದ್ಯಕ್ಕೆ ಮಗು ಮಾಡಿಕೊಳ್ಳುವುದು ಬೇಡ ಎಂದಿದ್ದಕ್ಕೆ ಪತ್ನಿಯ ಕತ್ತು ಹಿಸುಕಿ ಕೊಂದ
ಏನಿದು ಘಟನೆ?
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ (Lok Sabha Election 2024) ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಕಣ್ತಪ್ಪಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟಿ ಕೋಟಿ ಹಣವನ್ನು ಸೀಜ್ ಮಾಡಲಾಗಿತ್ತು. ಏ.13ರಂದು ಬೆಂಗಳೂರಿನ ಜಯನಗರದ ಕಾರೊಂದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.
ಅಪರಿಚಿತರಿಂದ ಬಂದ ಫೋನ್ ಕರೆ ಮೇರೆಗೆ ಅಧಿಕಾರಿಗಳು ಫೀಲ್ಡಿಗಿಳಿದಿದ್ದರು. ಜಯನಗರದಲ್ಲಿ ಬೆಂಜ್ ಕಾರಿನಲ್ಲಿ ಕೋಟಿ ಕೋಟಿ ಹಣವನ್ನು ಸಾಗಿಸಲಾಗುತ್ತಿದೆ ಎಂಬ ವಿಷಯ ತಿಳಿದಿತ್ತು. ಕಿಡಿಗೇಡಿಗಳು ಎರಡು ಕಾರು ಹಾಗೂ ಸ್ಕೂಟಿಯಲ್ಲಿ ಬಂದಿದ್ದರು. ಸ್ಕೂಟಿಯಲ್ಲಿದ್ದ ಕೋಟಿ ಕೋಟಿ ಹಣವನ್ನು ಕಾರಿಗೆ ಶಿಫ್ಟ್ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದರು.
ಕೂಡಲೇ ಎರಡು ಕಾರುಗಳನ್ನು ನಿಲ್ಲಿಸಿ ಪರಿಶೀಲನೆ ಮಾಡುವಾಗ ಮೊದಮೊದಲು ತಪಾಸಣೆಗೆ ಅಡ್ಡಿಪಡಿಸಿದ್ದಾರೆ. ಅನುಮಾನಬಾರದಿರಲಿ ಎಂದು ಸುಮಾರು 4 ಕೋಟಿ ರೂ. ಹಣವನ್ನು ಚೀಲವೊಂದರಲ್ಲಿ ತುಂಬಿಸಿದ್ದರು. ಅಧಿಕಾರಿಗಳು ತಪಾಸಣೆಗೆ ಮುಂದಾದ ಮಾವಿನ ಹಣ್ಣಿನ ಬ್ಯಾಗ್ ಅದು ಬಿಡ್ರೀ ಎಂದು ದಬಾಯಿಸಿ, ಕಾರು ಲಾಕ್ ಮಾಡಿದ್ದಾರೆ. ಆದರೆ ಇವರ ನಡೆಯಿಂದ ಮತ್ತಷ್ಟು ಅನುಮಾನಗೊಂಡ ಚುನಾಣಾಧಿಕಾರಿಗಳು ಕಾರಿನ ಗ್ಲಾಸ್ ಒಡೆದು ಪರಿಶೀಲನೆ ನಡೆಸಿದಾಗ ಗರಿ ಗರಿ ಹಣದ ಕಂತೆ ಪತ್ತೆಯಾಗಿತ್ತು. ಕಂತೆ ಕಂತೆ ಹಣ ಸಿಗುತ್ತಿದ್ದಂತೆ ಕಾರಿನಲ್ಲಿದ್ದ ಐವರು ಕಾಲ್ಕಿತ್ತಿದ್ದರು.
ಈ ಬಗ್ಗೆ ಚುನಾವಣಾಧಿಕಾರಿ ಮೌನೀಶ್ ಮುದ್ಗಿಲ್ ಶನಿವಾರ ಬೆಳಗ್ಗೆ ನಮಗೊಂದು ಅಪರಿಚಿತ ಕರೆ ಬಂದಿತ್ತು. ಕರೆ ಬಂದ ಮೂರು ನಿಮಿಷಕ್ಕೆ ನಮ್ಮ ಅಧಿಕಾರಿ ವಿನೋದ್ ಪ್ರಿಯಾ, ನಿಖಿತಾ ಅವರು ಸ್ಥಳಕ್ಕೆ ಭೇಟಿ ನೀಡಿದರು. ಸ್ಪಾಟ್‌ಗೆ ಬಂದಾಗ ಸ್ಕೂಟರ್‌ನಿಂದ ಫಾರ್ಚೂನರ್‌ಗೆ ಹಣ ಶಿಫ್ಟ್ ಮಾಡುತ್ತಿದ್ದರು.
ಹಣ ಸಾಗಾಟಕ್ಕೆ ಹೊಸ ಕಾರು ಖರೀದಿಸಿದ್ರಾ?
ಇನ್ನೂ ಅಕ್ರಮವಾಗಿ ಹಣ ಸಾಗಾಟ ಮಾಡಲು ಹೊಸ ಕಾರು ಖರೀಸಿದ್ರಾ ಎಂಬ ಅನುಮಾನ ಮೂಡಿದೆ. ಬೆಂಚ್ ಕಾರನ್ನು ನಿನ್ನೆ ಶುಕ್ರವಾರವಷ್ಟೇ ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಫಾರ್ಚೂನರ್ ಕಾರು ತಡೆದು ಪರಿಶೀಲನೆ ನಡೆಸುತ್ತಿದ್ದಂತೆ ಐವರು ಪರಾರಿ ಆಗಿದ್ದಾರೆ. ಕಾರ್ ಮೂವ್ಮೆಂಟ್ ಇದ್ದರೂ ಚುನಾವಣಾಧಿಕಾರಿ ನಿಖಿತಾ ಅವರು ಕಾರಿನ ನಂಬರ್ ಪ್ಲೇಟ್ ನೋಟ್ ಮಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ