Site icon Vistara News

DK Shivakumar : ಅಕ್ರಮ ಆಸ್ತಿ ಗಳಿಕೆ ಆರೋಪ; ಡಿಕೆಶಿ ವಿರುದ್ಧ ಲೋಕಾಯುಕ್ತ FIR

DK Shivakumar Lokayukta

ಬೆಂಗಳೂರು : ಅಕ್ರಮ ಆಸ್ತಿ ಪ್ರಕರಣಕ್ಕೆ (Illegal Asset Case) ಸಂಬಂಧಿಸಿ ಲೋಕಾಯುಕ್ತವು (Karnataka Lokayukta) ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 2019ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್‌ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆಪಾದನೆಯ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಒಪ್ಪಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿಬಿಐ ತನಿಖೆಗೆ ನೀಡಿದ ಅನುಮತಿಯನ್ನು ಹಿಂದಕ್ಕೆ ಪಡೆದು ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಲು ನಿರ್ಧರಿಸಲಾಗಿತ್ತು. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಸಿಬಿಐನಿಂದ ಹಿಂದೆ ಪಡೆದ ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಲು ಕೂಡಾ ಅದೇ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಅದರ ಪ್ರಕ್ರಿಯೆಯ ಭಾಗವಾಗಿ ಈಗ ಎಫ್‌ಐಆರ್‌ ದಾಖಲಿಸಲಾಗಿದೆ.

ಅಂದು ರಾಜ್ಯ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡ ಬಳಿಕ ಅದನ್ನು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಗಿತ್ತು. ಸಿಬಿಐ ತನಿಖೆಯ ಒಂದು ಹಂತವನ್ನು ಪೂರೈಸಿದ್ದು, ಹೈಕೋರ್ಟ್‌ನಲ್ಲಿ ವಾದ ವಿವಾದಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ವಾದ ವಿವಾದ ನಡೆದು ಅಂತಿಮವಾಗಿ ಸಿಬಿಐ ಒಪ್ಪಿಗೆ ನೀಡಿತ್ತು.

ಇದೀಗ ಸಿಬಿಐನಿಂದ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ ಈ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಲೋಕಾಯುಕ್ತವು ರಾಜ್ಯ ಸರ್ಕಾರದ ಸುಪರ್ದಿಯಲ್ಲಿ ಇರುವುದರಿಂದ ತನಿಖೆಯ ವೇಗ ಹೆಚ್ಚು ಇರಲಿಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಡಿ.ಕೆ. ಶಿವಕುಮಾರ್‌ ಅವರು ತಮ್ಮ ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ದೂರು ಕೇಳಿಬಂದಿತ್ತು. ಬೆಂಗಳೂರು, ನವದೆಹಲಿ ಹಾಗೂ ಇತರೆ ಸ್ಥಳಗಳಲ್ಲಿ ಪತ್ತೆಯಾಗಿದ್ದ ಹೆಚ್ಚುವರಿ ಆಸ್ತಿ ಮತ್ತು ನಗದಿಗೆ ಸಂಬಂಧಿಸಿ ಈ ತನಿಖೆ ನಡೆಯಬೇಕಾಗಿದೆ.

ಇದನ್ನೂ ಓದಿ: DK Shivakumar : ನಮ್ಮ ಸುದ್ದಿಗೆ ಬಂದವರ ಸೆಟ್ಲ್‌ ಮೆಂಟ್‌ ಮಾಡಿದ್ದೇವೆ, ಈಶ್ವರಪ್ಪಗೆ ಡಿಕೆಶಿ ಎಚ್ಚರಿಕೆ

ಕಾನೂನು ಹೋರಾಟ ಮುಂದುವರಿಸುವೆ ಎಂದ ಡಿ.ಕೆ. ಶಿವಕುಮಾರ್

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು‌, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಪ್ರಕರಣವನ್ನು ಸಿಬಿಐಗೆ ನೀಡಲು ಆಗುವುದಿಲ್ಲ ಎಂದು ಅಂದಿನ ಅಡ್ವೊಕೇಟ್ ಜನರಲ್ ಹೇಳಿದ್ದರು. ಅದರ ದಾಖಲೆಯನ್ನು ನಾನು ಮಾಹಿತಿ ಹಕ್ಕು ಮೂಲಕ ಪಡೆದಿದ್ದೇನೆ. ಯಡಿಯೂರಪ್ಪನವರ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದು ತಪ್ಪು. ಹೀಗಾಗಿ ನಮ್ಮ ಸರ್ಕಾರ ಅನುಮತಿ ಹಿಂಪಡೆದು ಲೋಕಾಯುಕ್ತಕ್ಕೆ ನೀಡಿದೆ ಎಂದರು.

ಅನುಮತಿ ಹಿಂಪಡೆದರೂ ನೋಟೀಸ್: ಸರ್ಕಾರ ನನ್ನ ವಿರುದ್ಧದ ತನಿಖೆಯ ಅನುಮತಿ ಹಿಂಪಡೆದ ನಂತರವೂ ಸಿಬಿಐನವರು ನನ್ನ ಸಂಸ್ಥೆಗಳು ಹಾಗೂ ನನ್ನ ಜತೆ ವ್ಯವಹಾರ ಮಾಡಿರುವವರಿಗೆ ನೂರಾರು ನೋಟೀಸ್ ನೀಡುತ್ತಿದ್ದಾರೆ. ಯಾಕೆ ನೊಟೀಸ್ ನೀಡುತ್ತಿದ್ದಾರೋ ಗೊತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version