ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಗ ಮಾಡಾಳ್ ಪ್ರಶಾಂತ್ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಡೈರಿ ಪ್ರಮುಖ ದಾಖಲೆಯಾಗಿದೆ. ಇದರಲ್ಲಿ ಹಲವು ಭ್ರಷ್ಟಾಚಾರದ ಡೀಲ್‌ಗಳ ಸೀಕ್ರೆಟ್, ಹಲವು ಪ್ರಮುಖರ ಹೆಸರುಗಳು ಅಡಗಿದೆ ಎನ್ನಲಾಗುತ್ತಿದೆ.
ಪ್ರಶಾಂತ್ ಮಾಡಾಳ್ ಮನೆ ಪರಿಶೀಲನೆ ವೇಳೆ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಕೋಡ್‌ವರ್ಡ್ ರೀತಿಯಲ್ಲಿ ಹಲವು ಹೆಸರುಗಳನ್ನು ಆತ ಉಲ್ಲೇಖಿಸಿದ್ದಾರೆ. ಡೈರಿಯಲ್ಲಿ ಪತ್ತೆಯಾದ ಒಂದು ಚೀಟಿಯಲ್ಲಿ ಕೆಲವು ದಿನಾಂಕ ಹಾಗೂ ಅದರ ಮುಂದೆ ಹಣದ ಲೆಕ್ಕ ನಮೂದು ಮಾಡಲಾಗಿದೆ. ಹಲವು ಲಕ್ಷದಿಂದ ಹಿಡಿದು ಕೋಟಿ ರೂಪಾಯಿವರೆಗೆ ಉಲ್ಲೇಖ ಮಾಡಲಾಗಿದೆ. ಅಷ್ಟೊಂದು ಹಣ ಯಾರಿಗಾದರೂ ಕೊಡಲಾಗಿತ್ತು ಅಥವಾ ಯಾರಿಂದಲಾದರೂ ಪಡೆಯಲಾಗಿತ್ತೇ ಎಂಬ ಪ್ರಶ್ನೆ ತನಿಖಾಧಿಕಾರಿಗಳ ಮುಂದಿದೆ.
ಡೈರಿಯಲ್ಲಿ ಇರುವ ಹೆಸರುಗಳು ಯಾರವು, ಅವರಿಗೂ ಹಾಗೂ ಪ್ರಶಾಂತ್ ಮಾಡಾಳ್ ನಡುವಿನ ವ್ಯವಹಾರ ಎಂತಹದು ಎಂಬ ಬಗ್ಗೆ ಲೋಕಾಯುಕ್ತರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಡೈರಿಯಲ್ಲಿ ಪೊಲೀಸ್ ಅಧಿಕಾರಿಯ ಹೆಸರೂ ಪತ್ತೆಯಾಗಿದ್ದು, ಆ ಬಗ್ಗೆಯೂ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಶಾಂತ್ ಮಾಡಾಳ್ ಡೈರಿಯಿಂದ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಡೈರಿಯ ಅಸಲಿ ಕಹಾನಿ ಹೊರಬಂದರೆ ಮತ್ತಷ್ಟು ಮಂದಿಗೆ ಲೋಕಾಯುಕ್ತ ಕಂಟಕ ಎದುರಾಗಲಿದೆ.
ಇದನ್ನೂ ಓದಿ: Lokayukta raid : ಶಾಸಕ ಮಾಡಾಳು ಚನ್ನೇಶಪುರ ಮನೆಗೂ ಲೋಕಾಯುಕ್ತ ಲಗ್ಗೆ; 3 ಲಕ್ಷ ರೂ. ನಗದು, ಬೆಳ್ಳಿ, ಬಂಗಾರ ಪತ್ತೆ