ಬೆಂಗಳೂರು : ನೀವು ನಾಯಿ ಕಚ್ಚಿದ್ದಕ್ಕೆ ಗಲಾಟೆ ನಡೆದಿದ್ದನ್ನು ನೋಡಿರುತ್ತೀರಿ, ಇಲ್ಲವೇ ಸುದ್ದಿ ಕೇಳಿರುತ್ತೀರಿ. ಇಲ್ಲೊಬ್ಬ ಇಲಿ ಕಚ್ಚಿದ್ದಕ್ಕೆ ರೊಚ್ಚಿಗೆದ್ದಿದ್ದಾನೆ! ಗಲಾಟೆ ಮಾಡಿ, ಪೊಲೀಸರ ಜೀವ ತ್ತಿನ್ನುತ್ತಿದ್ದಾನೆ.
ಈ ಘಟನೆ ನಡೆದಿರುವುದು ವಿದೇಶದಲ್ಲಿಯೇನೂ ಅಲ್ಲ ನಮ್ಮ ಬೆಂಗಳೂರಿನಲ್ಲಿಯೇ. ಆರ್.ಟಿ. ನಗರದ ಕಂಫರ್ಟ್ ಎನ್ ಕ್ಲೇವ್ ಅಪಾರ್ಟ್ ಮೆಂಟ್‌ನಲ್ಲಿ. ಈ ಆಪಾರ್ಟ್‌ಮೆಂಟ್‌ನ ನಿವಾಸಿ ಲಕ್ಷ್ಮೀನಾರಾಯಣ ಇಲಿ ಕಚ್ಚಿದೆ ಎಂದು ಹೇಳಿ ಜಗಳ ಕಾಯುತ್ತಿದ್ದು, ಅಪಾರ್ಟ್‌ಮೆಂಟ್‌ನ ಅಸೋಸಿಯೇಷನ್ ಅಧ್ಯಕ್ಷರೊಂದಿಗೆ ಜಗಳ ಕಾದಿದ್ದಾರೆ. ಈ ಜಗಳ ಈಗ ಪೊಲೀಸ್ ಠಾಣೆಯ ಮಟ್ಟಿಲೇರಿದ್ದು, ಪೊಲೀಸರಿಗೂ ತಲೆನೋವು ತಂದಿದೆ.
ಲಕ್ಷ ಪರಿಹಾರ ಕೇಳಿದ ಭೂಪ
ಅಪಾರ್ಟ್‌ಮೆಂಟ್‌ನ ನಿವಾಸಿಗಳ ಪ್ರಕಾರ ಇಲಿಯೇನೂ ಲಕ್ಷ್ಮೀನಾರಾಯಣ ಅವರಿಗೆ ಕಚ್ಚಿಲ್ಲ. ಬದಲಾಗಿ ಅವರ ಇನ್ನೋವಾ ಕಾರ್ನ ವೈಯರ್ ಕತ್ತರಿಸಿದೆ. ಕಾರ್ ಡ್ಯಾಮೇಜ್ ಆಗಿದೆ. ಇದರಿಂದ ಸಿಟ್ಟಿಗೆದ್ದ ಲಕ್ಷ್ಮೀನಾರಾಯಣ, ಇದಕ್ಕೆ ಅಪಾರ್ಟ್‌ಮೆಂಟ್‌ನ ಅವ್ಯವಸ್ಥೆಯೇ ಕಾರಣ ಎಂದು ಹೇಳಿಕೊಂಡು ಈ ರೀತಿ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ.
ಕೇವಲ ಇಲಿ ಕಚ್ಚಿದ್ದಕ್ಕೆ ಅವರು ೫ ಲಕ್ಷ ರೂ.ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದು, ಪರಿಹಾರ ಕೊಡದಿದ್ದರೆ ಅಪಾರ್ಟ್‌ಮೆಂಟ್‌ನ ಅಸೋಸಿಯೇಷನ್ ಅಧ್ಯಕ್ಷರನ್ನೇ ಕೊಲೆ ಮಾಡುವುದಾಗಿ ಬೆದರಿಕೆಯೂ ಹಾಕಿದ್ದಾರಂತೆ.
ಇದನ್ನು ಓದಿ| ಇಲಿಗಳಿಂದ ಪತ್ತೆಯಾಯ್ತು ಕಳೆದುಹೋದ ₹ 5 ಲಕ್ಷ ಮೌಲ್ಯದ ಚಿನ್ನ
ಮೊದ ಮೊದಲು ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಅಸೋಸಿಯೇಷನ್ ಅಧ್ಯಕ್ಷರು ಲಕ್ಷ್ಮೀನಾರಾಯಣರ ಹುಚ್ಚಾಟ ನೋಡಿಕೊಂಡು ಸುಮ್ಮನಿದ್ದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಲಕ್ಷ್ಮೀನಾರಯಣ್ ಪರಿಹಾರ ಕೊಡಲೇಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸೆತ್ತ ಅಪಾರ್ಟ್ಮೆಂಟ್ ನಿವಾಸಿಗಳು ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
₹5 ಲಕ್ಷ ಪರಿಹಾರ ಕೊಡಲಿಲ್ಲ ಎಂಬ ಕೋಪದಲ್ಲಿ ಅಪಾರ್ಟ್ಮೆಂಟ್ ಗೇಟ್ ಮುಂದೆ ಕಸ ಸುರಿದು ಲಕ್ಷ್ಮೀ ನಾರಾಯಣ್ ರಂಪಾಟ ಮಾಡಿದ್ದಾರೆ. ಇದೆಲ್ಲವೂ ಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಇವರ ಕಾಟ ತಾಳಲಾರದೆ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದು, ಲಕ್ಷ್ಮೀ ನಾರಾಯಣ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡು ಹಿಡಿಯುತ್ತಾರೆಯೋ ಕಾದು ನೋಡಬೇಕು.