ಬೆಂಗಳೂರು: ಬುಧವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bangalore International airport) ಅಧಿಕಾರಿಗಳು ಅವನ ಬ್ಯಾಗ್ ನೋಡಿ ಬೆಚ್ಚಿಬಿದ್ದಿದ್ದರು. ಯಾಕೆಂದರೆ, ಥಾಯ್ಲೆಂಡ್‌ನಿಂದ ಬಂದ ಆ ವ್ಯಕ್ತಿಯ (Passenger from Thyland) ಬ್ಯಾಗ್‌ನಲ್ಲಿತ್ತು 17 ಅತಿ ವಿಷಕಾರಿ ಕಾಳಿಂಗ ಸರ್ಪ (17 King cobras), 55 ಚೆಂಡು ಹೆಬ್ಬಾವು (55 Ball pythons) ಮತ್ತು ಆರು ಕಾಪುಚಿನ್ ಕೋತಿ (six Capuchin Monkey) ಮರಿ! ಅಂದರೆ ಒಟ್ಟು 78 ಪ್ರಾಣಿಗಳು!
ರಾತ್ರಿ 10.30ಕ್ಕೆ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ (Bankok to Bangalore) ಏರ್ ಏಷಿಯಾ ವಿಮಾನ (Air Asia flight) ಬಂದಿಳಿದಿತ್ತು. ಟರ್ಮಿನಲ್ 1ರಲ್ಲಿ ಬಂದಿಳಿದಿದ್ದ ವಿಮಾನದಿಂದ ಇಳಿದ ಪ್ರಯಾಣಿಕರ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾಗ ಅವನೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದು ಕಂಡುಬಂತು.
ಕೂಡಲೇ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನ ಚೆಕ್ ಇನ್ ಲಗೇಜನ್ನು ಸ್ಕ್ಯಾನ್ ಮಾಡಿದರು. ಅದರಲ್ಲಿ ಹಾವು, ಕೋತಿಗಳು ಇರುವುದು ಕಂಡುಬಂತು. ಬಳಿಕ ಅವನನ್ನು ತಡೆ ಹಿಡಿದು ಹೆಚ್ಚಿನ ತಪಾಸಣೆ ನಡೆಸಿದಾಗ ಆತ ವಿಷಕಾರಿ ಕಾಳಿಂಗ ಸರ್ಪ, ಹೆಬ್ಬಾವು ಮತ್ತು ಕೋತಿ ಮರಿಗಳನ್ನು ತಂದಿರುವುದು ಪತ್ತೆಯಾಯಿತು.
ಆತ ಈ ಎಲ್ಲ ಹಾವು ಮತ್ತು ಕೋತಿಗಳನ್ನು ಪೆಟ್ಟಿಗೆಗಳಲ್ಲಿ ಪ್ರತ್ಯೇಕವಾಗಿ ಪ್ಯಾಕ್ ಮಾಡಿಟ್ಟಿದ್ದ. ಇವುಗಳನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಕಳ್ಳಸಾಗಣೆ ಮಾಡಿಕೊಂಡು ತರಲಾಗಿತ್ತು.
ಈಗ ಹಾವು ಮತ್ತು ಕೋತಿಯನ್ನು ತಂದಿರುವ ಈ ವ್ಯಕ್ತಿ ತಮಿಳುನಾಡಿನವನು ಎಂದು ತಿಳಿದುಬಂದಿದೆ. ಆತ ಬೆಂಗಳೂರಿನಿಂದ ಇವುಗಳನ್ನು ತಮಿಳುನಾಡಿಗೆ ಕೊಂಡೊಯ್ಯುವ ಸಾಧ್ಯತೆ ಇತ್ತು. ಇದೀಗ ಪೊಲೀಸರು ಆತನನ್ನು ವನ್ಯ ಜೀವಿ ಕಳ್ಳಸಾಗಣೆದಾರ ಎಂದು ಗುರುತಿಸಿದ್ದು, ಆತನನ್ನು ಬಂಧಿಸಲಾಗಿದೆ.
1962ರ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 110ರ ಅಡಿಯಲ್ಲಿ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನ ವಿರುದ್ಧ ವನ್ಯ ಜೀವಿ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ವ್ಯಕ್ತಿ ತಂದಿರುವ ಕಾಳಿಂಗ ಸರ್ಪ ಮತ್ತು ಹೆಬ್ಬಾವುಗಳು ಜೀವಂತವಾಗಿವೆ. ಆದರೆ, ಆರು ಕಾಪುಚಿನ್ ಕೋತಿ ಮರಿಗಳು ಮೃತಪಟ್ಟಿವೆ. ಮೃತಪಟ್ಟ ಕೋತಿಗಳನ್ನು ಬಿಟ್ಟು ಉಳಿದ ಸರೀಸೃಪಗಳನ್ನು ಮರಳಿ ಬ್ಯಾಂಕಾಕ್‌ಗೆ ಕಳುಹಿಸುವ ಬಗ್ಗೆ ಚಿಂತನೆ ಇದೆ ಎನ್ನಲಾಗಿದೆ. ಈಗ ಹುಟ್ಟಿರುವ ಇನ್ನೊಂದು ಪ್ರಶ್ನೆ ಎಂದರೆ ಬ್ಯಾಂಕಾಕ್‌ನಲ್ಲಿ ವಿಮಾನ ಹತ್ತುವಾಗ ಆತನ ಬ್ಯಾಗ್‌ನಲ್ಲಿ ಏನಿದೆ ಎಂದು ಚೆಕ್ ಮಾಡಿಲ್ಲವೇ?
ಆಗಸ್ಟ್ 22ರಂದು 234 ಪ್ರಾಣಿಗಳನ್ನು ತರಲಾಗಿತ್ತು!
ಬೆಂಗಳೂರಿಗೆ ಬ್ಯಾಂಕಾಕ್‌ನಿಂದ ಪ್ರಾಣಿಗಳನ್ನು ಕದ್ದು ತರುತ್ತಿರುವುದು ಇದು ಹೊಸತೇನಲ್ಲ. ಕಳೆದ ಆಗಸ್ಟ್ 22ರಂದು ಇದೇ ರೀತಿ ಬ್ಯಾಂಕಾಕ್‌ನಿಂದ ಬಂದ ರಾತ್ರಿ ವಿಮಾನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬನಿಂದ 234 ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಒಂದು ಮೃತ ಕಾಂಗರೂ ಮರಿ ಕೂಡಾ ಸೇರಿತ್ತು.
ಅಂದು ತರಲಾಗಿದ್ದ ಪ್ರಾಣಿಗಳಲ್ಲಿ ಜೀವಂತ ಹೆಬ್ಬಾವುಗಳು, ಊಸರವಳ್ಳಿಗಳು, ಉಡ, ಆಮೆಗಳು ಮಾತ್ರವಲ್ಲ ಮೊಸಳೆ ಜಾತಿಗೆ ಸೇರಿದ ಅಲಿಗೇಟರ್‌ಗಳು ಕೂಡಾ ಇದ್ದವು. ಅಂದು ಬಂಧಿತನಾದವನಿಂದ ಮುಂದೆ ಯಾವ ಮಾಹಿತಿ ಸಿಕ್ಕಿತೋ ಗೊತ್ತಿಲ್ಲ. ಅಂತೂ ವಿಮಾನ ನಿಲ್ದಾಣದ ಮೂಲಕ ಈ ಪ್ರಾಣಿಗಳ ಕಳ್ಳಸಾಗಾಣಿಕೆ ಹೆಚ್ಚುತ್ತಿರುವುದು ಮಾತ್ರ ನಿಜ!