ಬೆಂಗಳೂರು: ಲಿವ್‌ಇನ್ ಸಂಗಾತಿಯನ್ನು ಪ್ರಿಯಕರ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣ ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಈ ಜೋಡಿ ಪಶ್ಚಿಮ ಬಂಗಾಳದ ಮೂಲದ್ದಾಗಿದ್ದು, ವೈಟ್‌ಫೀಲ್ಡ್‌ನ ಹಗದೂರು ಬಳಿ ಲಿವ್‌ಇನ್ ಸಂಬಂಧದಲ್ಲಿ ವಾಸಿಸುತ್ತಿತ್ತು. ಮುಕ್ತಾ ಬರ್ಮನ್ ಕೊಲೆಯಾದ ಮಹಿಳೆ. ಸ್ಟೀಫನ್ ಬರ್ಮನ್ ಹತ್ಯೆ ಎಸಗಿದ ಆಕೆಯ ಗೆಳೆಯ. ಈತ ಬೆಂಗಳೂರಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಒಂಬತ್ತು ವರ್ಷಗಳಿಂದ ಲಿವಿನ್‌ನಲ್ಲಿದ್ದರು. ಸ್ಟೀಫನ್ ಬರ್ಮನ್‌ಗೆ ಬೇರೆ ಮದುವೆಯಾಗಿತ್ತು. ಆತನ ಕುಟುಂಬದವರನ್ನು ಪಶ್ಚಿಮ ಬಂಗಾಳದಲ್ಲಿ ಬಿಟ್ಟು ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಮುಕ್ತಾ ಅಪಾರ್ಟ್‌ಮೆಂಟ್‌ನಲ್ಲಿ ಮನೆಕೆಲಸ ಮಾಡುತ್ತಿದ್ದರು. 15 ವರ್ಷಗಳ ಹಿಂದೆ ಮುಕ್ತಾ ಬರ್ಮನ್ ಪತಿ ಮೃತಪಟ್ಟಿದ್ದರು.
ಇತ್ತೀಚಿಗೆ ಮುಕ್ತಾ ಬರ್ಮನ್ ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಕೆಲಸ ಬಿಟ್ಟು ಮನೆಯಲ್ಲಿಯೇ ಇರುತ್ತಿದ್ದರು. ಹೀಗಾಗಿ ಪದೇ ಪದೆ ಆಸ್ಪತ್ರೆಗೆ ಅಲೆಯುತ್ತಿದ್ದರು. ವೈದ್ಯರು ಮುಕ್ತಾಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು MRI ಸ್ಕ್ಯಾನಿಂಗ್‌ಗೆ ಸೂಚಿಸಿದ್ದರು. ಇದರಿಂದ ಬೇಸತ್ತು ಫೆ.8ರಂದು ಮುಂಜಾನೆ ತನ್ನ ಗೆಳತಿ ನಿದ್ರೆಯಲ್ಲಿದ್ದಾಗ ಬಾಯಿಗೆ ಬಟ್ಟೆ ತುರುಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಹಗದೂರಿನಲ್ಲಿ ವಾಸವಿದ್ದ ಬಂಗಾಳ ಮೂಲದ ಸೌರವ್ ಎಂಬುವವರ ಮನೆಗೆ ತೆರಳಿ, ಮುಕ್ತಾಳ ಆರೋಗ್ಯ ತುಂಬಾ ಹದಗೆಟ್ಟಿದೆ, ಆಕೆ ಬದುಕುವುದಿಲ್ಲ ಎಂದು ಕಣ್ಣೀರಿಟ್ಟಿದ್ದ. ಈ ವೇಳೆ ಆಸ್ಪತ್ರೆಗೆ ದಾಖಲಿಸು, ಸಂಜೆ ಬರುತ್ತೇನೆ ಎಂದು ಸೌರವ್ ಹೇಳಿ ಕಳಿಸಿದ್ದ. ಸಂಜೆ ಸೌರವ್ ಬಂದಾಗ, ಮುಕ್ತಾ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು ಎಂದಿದ್ದ. ಅನಾರೋಗ್ಯದಿಂದ ಮೃತಪಟ್ಟಿದ್ದಾಳೆಂದು ಪೊಲೀಸರಿಗೆ ತಿಳಿಸಿದ್ದ. ಈ ವೇಳೆ ಮೃತಳ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Accident news: ಕೆಟ್ಟು ನಿಂತ ಕ್ಯಾಂಟರ್‌ಗೆ ಬೈಕ್ ಡಿಕ್ಕಿ, ಯುವಕ- ಯುವತಿ ಸ್ಥಳದಲ್ಲೇ ಸಾವು