Site icon Vistara News

ತಂಗಿಯ ಎಂಗೇಜ್‌ಮೆಂಟ್‌ಗೆ ಬರಲಿಲ್ಲ ಎಂದು ಪತ್ನಿಗೆ ಚಾಕು ಇರಿದ ಪತಿ

Engagement

Man Stabbed His Wife For Not Attending His Sister's Engagement

ಬೆಂಗಳೂರು: ತಂಗಿಯ ಎಂಗೇಜ್‌ಮೆಂಟ್‌ಗೆ (Engagement) ಬರಲಿಲ್ಲ ಎಂದು ಪತಿಯು ಪತ್ನಿಗೆ ಚಾಕು ಇರಿದ ಘಟನೆ ಬೆಂಗಳೂರಿನ (Bengaluru) ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನದ ಬಳಿ ನಡೆದಿದೆ. ಫೆಬ್ರವರಿ 15ರಂದು ಬೆಳಗ್ಗೆ 9 ಗಂಟೆಗೆ ಘಟನೆ ನಡೆದಿದ್ದು, ಪತ್ನಿ ಮೇಲೆ ಹಲ್ಲೆ ನಡೆಸಿದ ಜಯಪ್ರಕಾಶ್‌ (32) ಈಗ ಪೊಲೀಸರ ಅತಿಥಿಯಾಗಿದ್ದಾನೆ.

ದಿವ್ಯಶ್ರೀ (26) ಹಲ್ಲೆಗೊಳಗಾದವರು. ಜಯಪ್ರಕಾಶ್‌ ತಂಗಿಯ ಎಂಗೇಜ್‌ಮೆಂಟ್‌ ನಿಶ್ಚಯವಾಗಿತ್ತು. ಆದರೆ, ಪತಿಯ ಮೇಲಿನ ಮುನಿಸಿನಿಂದಾಗಿ ದಿವ್ಯಶ್ರೀ ಅವರು ಎಂಗೇಜ್‌ಮೆಂಟ್‌ಗೆ ಹೋಗಿರಲಿಲ್ಲ. ಇದೇ ಕಾರಣದಿಂದ ಕೋಪಗೊಂಡ ಜಯಪ್ರಕಾಶ್‌, ಚಾಕುವಿನಿಂದ ದಿವ್ಯಶ್ರೀ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ವೇಳೆ ದಿವ್ಯಶ್ರೀ ಕಾಲಿಗೆ ಚಾಕು ತಾಗಿದ್ದು, ಎಂಟು ಹೊಲಿಗೆ ಹಾಕಲಾಗಿದೆ. ಇದಾದ ಬಳಿಕ ದಿವ್ಯಶ್ರೀ ಅವರು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಿದ್ದರು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎಫ್‌ಐಆರ್‌ ಪ್ರತಿ

ಪದೇಪದೆ ದಂಪತಿ ಮಧ್ಯೆ ಜಗಳ

ಜಯಪ್ರಕಾಶ್‌ ಹಾಗೂ ದಿವ್ಯಶ್ರೀ ಅವರು ಪ್ರೀತಿಸಿ ಮದುವೆಯಾಗಿದ್ದು, ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಇಬ್ಬರೂ ಬೆಂಗಳೂರಿನಲ್ಲಿ ವಾಸವಿದ್ದರು. ಮೊದಲು ಮೂಡಲಪಾಳ್ಯದಲ್ಲಿ ವಾಸವಿದ್ದ ದಂಪತಿ ಬಳಿಕ ಸುಂಕದಕಟ್ಟೆಗೆ ಶಿಫ್ಟ್‌ ಆಗಿದ್ದರು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಪದೇಪದೆ ಜಗಳಗಳು ನಡೆಯುತ್ತಿದ್ದವು. ಈಗ ಎಂಗೇಜ್‌ಮೆಂಟ್‌ಗೆ ಬರಲಿಲ್ಲ ಎಂಬುದನ್ನೇ ನೆಪ ಇಟ್ಟುಕೊಂಡು ಜಯಪ್ರಕಾಶ್‌ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Reels Tragedy : ʻಕರಿಮಣಿ ಮಾಲೀಕ ನೀನಲ್ಲʼ ಎಂದಳು ಪತ್ನಿ; ಬೇಸರದಿಂದ ಪತಿ ಆತ್ಮಹತ್ಯೆ

2019ರಲ್ಲಿ ಇಬ್ಬರೂ ಮದುವೆಯಾಗಿದ್ದು, ಪತ್ನಿ ಮೇಲೆ ಜಯಪ್ರಕಾಶ್‌ ಅನುಮಾನಪಡುತ್ತಿದ್ದ. ನಿನಗೆ ಅಕ್ರಮ ಸಂಬಂಧ ಇದೆ ಎಂಬುದಾಗಿ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಮೂಡಲಪಾಳ್ಯದಿಂದ ಸುಂಕದಕಟ್ಟೆಗೆ ಇಬ್ಬರೂ ಶಿಫ್ಟ್‌ ಆಗಿದ್ದರು. ಅಲ್ಲಿಯೂ ಅನುಮಾನಗೊಂಡ ಪತಿಯು ತಂಗಿಯ ಎಂಗೇಜ್‌ಮೆಂಟ್‌ಅನ್ನು ನೆಪವಾಗಿಟ್ಟುಕೊಂಡು ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಜಯಪ್ರಕಾಶ್‌ಗೆ ಅನಾರೋಗ್ಯ ಕಾಡುತ್ತಿದ್ದು, ಮನೆಯ ಖರ್ಚನ್ನೆಲ್ಲ ದಿವ್ಯಶ್ರೀ ಅವರೇ ನೋಡಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version