Site icon Vistara News

ರಾಜಾರಾಮ್‌ ಬುಕ್‌ಹೌಸ್‌ ಮಾಲೀಕ ಮಂಜುನಾಥ್ ಕಶ್ಯಪ್ ನಿಧನ

ಮಲೆನಾಡ ಕೋಗಿಲೆ

ಶಿವಮೊಗ್ಗ: ಶಿವಮೊಗ್ಗ ನಗರದ ಪ್ರತಿಷ್ಠಿತ ರಾಜಾರಾಮ್‌ ಬುಕ್‌ಹೌಸ್‌ ಮಾಲೀಕ ಮಂಜುನಾಥ್ ಕಶ್ಯಪ್(58) ಶುಕ್ರವಾರ ನಿಧನರಾಗಿದ್ದಾರೆ.

ಶಿವಮೊಗ್ಗ ಇತಿಹಾಸದಲ್ಲಿ ಪುಸ್ತಕ ಅಂಗಡಿಯ ಮೂಲಕ ದೊಡ್ಡ ಸಾಧನೆ ಮಾಡಿದ ಕೀರ್ತಿ ರಾಜಾರಾಮ್ ಬುಕ್ ಹೌಸ್‌ನದ್ದು. 65 ವರ್ಷದ ಹಿಂದೆ ಶಿವಮೊಗ್ಗದ ಓದುಗರಿಗೆ ಉತ್ತಮ ಪುಸ್ತಕಗಳ ಲಭ್ಯತೆ ಇರಲಿಲ್ಲ. ಆಗ ಎಲ್ಲ ಅಭಿರುಚಿಯ ಸಾಹಿತ್ಯಗಳು, ಪುಸ್ತಕಗಳು ಲಭ್ಯವಾಗುವಂತಹ ಒಂದು ಪುಸ್ತಕದ ಅಂಗಡಿಯನ್ನು ಗಾಂಧಿ ಬಜಾರ್ ಪ್ರವೇಶದ್ವಾರದಲ್ಲಿಯೇ ಆರಂಭಿಸಿದವರು ಶಿವಮೊಗ್ಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಕಾರ್ಯಕರ್ತರಾಗಿದ್ದ ಕ. ನಾಗರಾಜರಾವ್ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, ಬಿಹಾರದ ರಾಜ್ಯಪಾಲರಾಗಿ ನಿವೃತ್ತರಾದ ರಾಮಾಜೋಯಿಸ್ ಅವರು.

ಕ. ನಾಗರಾಜ ಹೆಸರಿನ ಉತ್ತರಾರ್ಧವನ್ನು ಮತ್ತು ರಾಮಾಜೋಯಿಸ್ ಹೆಸರಿನ ಪೂರ್ವಾರ್ಧವನ್ನು ಸೇರಿಸಿ “ರಾಜಾರಾಮ್ ಬುಕ್ ಹೌಸ್” ಪ್ರಾರಂಭ ಮಾಡಿದರು. ನಂತರ ಅಂಗಡಿಯನ್ನು ನಾಗರಾಜ್‌ ಅವರ ಪುತ್ರ ಮಂಜುನಾಥ್‌ ಕಶ್ಯಪ್‌ ನಿರ್ವಹಿಸುತ್ತಿದ್ದರು.

ಪುಸ್ತಕ ಅಂಗಡಿ ಸಾಧನೆ ಮಾತ್ರವಲ್ಲದೆ, ಸಂಗೀತ ಹಾಗೂ ಗಾಯನದಲ್ಲೂ ಮಂಜುನಾಥ್‌ ಅವರ ಸಾಧನೆ ಅಪಾರವಾಗಿದ್ದು, ಇವರನ್ನು ಮಲೆನಾಡ ಕೋಗಿಲೆ ಎಂತಲೇ ಕರೆಯಲಾಗುತ್ತದೆ. ಅನೇಕ ಪ್ರಶಸ್ತಿ, ಬಿರುದು ಸನ್ಮಾನಗಳನ್ನು ಪಡೆದಿದ್ದರು. ಅತ್ಯಂತ ಸರಳ ವ್ಯಕ್ತಿಯಾಗಿದ್ದ ಮಂಜುನಾಥ್‌ ಅವರು ಜ್ಯೋತಿಷ್ಯ ಹಾಗೂ ಅಧ್ಯಾತ್ಮದಲ್ಲೂ ಸಾಧನೆ ಮಾಡಿದ್ದರು.

ಇದನ್ನೂ ಓದಿ: ಭಾರತ ಮೂಲದ ರಾಧಾ ಅಯ್ಯಂಗಾರ್‌ಗೆ ಅಮೆರಿಕದ ಪೆಂಟಗನ್‌ನಲ್ಲಿ ಪ್ರಮುಖ ಹುದ್ದೆ

Exit mobile version