ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಔಷಧಗಳಿಗೆ ಬಿಲ್ (Medical Bill) ಕೊಡಲೂ ದುಡ್ಡಿಲ್ಲವೇ? ಅಥವಾ ಕಮಿಷನ್ ದಂಧೆ (Commission racket) ಮಿತಿ ಮೀರಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯ ಆರೋಗ್ಯ ಇಲಾಖೆ (Health Department) ವಿಚಾರಕ್ಕೆ ಸಂಬಂಧಿಸಿದಂತೆ ವಿಸ್ತಾರ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಮಾಹಿತಿಯೊಂದು ಲಭ್ಯವಾಗಿದೆ. ಔಷಧ ಸರಬರಾಜುದಾರರ ಗೋಳನ್ನು ಕೇಳುವವರಿಲ್ಲ ಎನ್ನುವಂತಾಗಿದೆ. ಔಷಧ ಬಿಲ್‌ಗಳಿಗೆ ಹಣ ಪಾವತಿ ಮಾಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್) ವಿರುದ್ಧ ಸರಬರಾಜುದಾರರು ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಚಿಂತನೆ ನಡೆಸಿದ್ದಾರೆ.
ಔಷಧ ಪೂರೈಸಿ ಹಲವು ವರ್ಷ ಕಳೆದರೂ ಬಾಕಿ ಬಿಲ್‌ಗಳ ಪಾವತಿಗೆ ವಿಳಂಬ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿ ಮೊತ್ತದ 733 ಔಷಧಗಳಿಗೆ ಬೇಡಿಕೆ ಇದೆ. 2012ರಿಂದ ಔಷಧ ಬಿಲ್‌ಗಳ ಜತೆಗೆ ಕೋಟ್ಯಂತರ ರೂ. ಭದ್ರತಾ ಠೇವಣಿ, ಇಎಂಡಿ ಸಹ ಬಾಕಿ ಇದೆ.
ಇದನ್ನೂ ಓದಿ: Operation Hasta : 40 ನಾಯಕರ ಅರ್ಜಿ ನನ್ನ ಮುಂದಿದೆ; ಸ್ಥಳೀಯರ ಜತೆ ಚರ್ಚಿಸಿ ಸೇರ್ಪಡೆ: ಡಿ.ಕೆ. ಶಿವಕುಮಾರ್
ನಿಯಮ ಪಾಲನೆ ಆಗುತ್ತಿಲ್ಲ
ಔಷಧ ಪೂರೈಕೆ ಮಾಡಿದ ಮೇಲೆ 30 ದಿನದೊಳಗೆ ಔಷಧ ಬಿಲ್‌ಗಳಿಗೆ ಹಣ ಪಾವತಿಸಬೇಕು ಎಂಬ ನಿಯಮ ಇದೆ. ಈ ನಿಯಮ ಇದ್ದರೂ ನಿಗಮದವರು ಬಾಕಿ ಬಿಲ್‌ಗಳನ್ನು ಕ್ಲಿಯರ್ ಮಾಡಿಲ್ಲ ಎಂಬ ಸಂಗತಿ ಗೊತ್ತಾಗಿದೆ.
ಮಿತಿ ಮೀರಿದೆಯೇ ಭ್ರಷ್ಟಾಚಾರ, ಕಮಿಷನ್ ದಂಧೆ?
ನಿಗಮದಲ್ಲಿ ಕಮಿಷನ್ ದಂಧೆ, ಭ್ರಷ್ಟಾಚಾರ ದಂಧೆಯು ಮಿತಿ ಮೀರಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ನಮ್ಮ ಕ್ಲಿನಿಕ್‌ಗಳಿಗೆ ಸರಬರಾಜು ಮಾಡಿದ್ದ 30-40 ಕೋಟಿ ರೂ. ಔಷಧ, ವೈದ್ಯಕೀಯ ಉಪಕರಣ ಬಿಲ್‌ಗಳೂ ಬಾಕಿ ಇವೆ. ವೈದ್ಯಕೀಯ ಉಪಕರಣ ಸೇರಿ ಒಟ್ಟು 130 ಕೋಟಿ ರೂಪಾಯಿ ಬಾಕಿ ಇದೆ.
ಮಾಹಿತಿ ಇದ್ದರೂ ಆರೋಗ್ಯ ಸಚಿವರ ನಿರ್ಲಕ್ಷ್ಯ?
ನೆರೆಯ ತಮಿಳುನಾಡು ಸೇರಿ ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಪೇಮೆಂಟ್ ಆಗುತ್ತದೆ. ಆದರೆ, ಕೆಎಸ್‌ಎಂಎಸ್‌ಸಿಎಲ್‌ನಲ್ಲಿ ಮಾತ್ರ ವಿಳಂಬವಾಗುತ್ತಿದೆ. ಇದರ ಬಗ್ಗೆ ಮಾಹಿತಿ ಇದ್ದರೂ ಆರೋಗ್ಯ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Caste Census Report : ಜಾತಿ ಗಣತಿಗೆ ಸರ್ಜರಿ! ವರದಿ ಜಾರಿಗೆ ಕೈಕಮಾಂಡ್ ಪಟ್ಟು; ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು
ಪ್ರತಿಭಟನೆಗೆ ಸಜ್ಜು
ಈಗಾಗಲೇ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಈಗ ಮತ್ತೊಂದು ಪ್ರತಿಭಟನೆಯ ಬಿಸಿ ತಟ್ಟುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ನಿಗಮದಲ್ಲಿ ಫೈಲ್‌ಗಳ ವಿಲೇವಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡದೇ ಇದ್ದರೆ ಬರುವ ದಿನಗಳಲ್ಲಿ ಸರಬರಾಜುದಾರರು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.