Site icon Vistara News

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Medical Seat


ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ (Medical Seat)ಸೀಟ್ ಕೊಡಿಸುತ್ತೇವೆ ಎಂದು ಕೋಟಿಗೂ ಅಧಿಕ ಹಣ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಣ ಸಂಸ್ಥೆ‌ ಅಧಿಕಾರಿಗಳ ಹೆಸರು ಹೇಳಿ ಮೆಡಿಕಲ್ ಸೀಟ್ ಕೊಡಿಸುತ್ತೇನೆ ಹಾಗೂ ಹಣ ಡಬಲ್ ಮಾಡಿ ಕೊಡುತ್ತೇನೆ ಎಂದು ವಂಚಿಸುತ್ತಿದ್ದ ಗ್ಯಾಂಗ್‌ ಬಂಧನವಾಗಿದೆ.

ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೆಡಿಕಲ್ ಸೀಟ್ ವಂಚನೆ ಪ್ರಕರಣ ನಡೆದಿದೆ. ಉದ್ಯಮಿಯೊಬ್ಬರಿಗೆ ಇಬ್ಬರು ಅಸಾಮಿಗಳು ಮೆಡಿಕಲ್ ಸೀಟ್ ಕೊಡಿಸುವುದಾಗಿ ಬರೋಬ್ಬರಿ 1.5 ಕೋಟಿ ಹಣ ವಂಚಿಸಿದ್ದಾರೆ. ಮಂಜಪ್ಪ ಹಾಗೂ ವಿರೂಪಾಕ್ಷಪ್ಪ ಎಂಬುವರ ವಿರುದ್ಧ ಆರೋಪ ಕೇಳಿ ಬಂದಿದೆ. ಪ್ರದೀಪ್ತ ಭಾಸ್ಕರ್ ಪೌಲ್ ಎಂಬುವವರು ಮಗಳ ಮೆಡಿಕಲ್ ಪಿಜಿ ಸೀಟ್‌ಗಾಗಿ ಹುಡುಕಾಡುತ್ತಿದ್ದರು. ಈ ವಿಚಾರವನ್ನು ಪರಿಚಯವಿದ್ದ ಮಂಜಪ್ಪ ಎಂಬಾತನಿಗೆ ತಿಳಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮಂಜಪ್ಪ 1.5 ಕೋಟಿ ವಂಚಿಸಿದ್ದಾರೆ.

ಇದನ್ನೂ ಓದಿ: Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

ಪ್ರತಿಷ್ಟಿತ ಮೆಡಿಕಲ್ ಕಾಲೇಜ್‌ವೊಂದರ ಮ್ಯಾನೇಜ್ ಮೆಂಟ್ ಸಂಪರ್ಕ ಇದೆ ಎಂದು ಕಥೆ ಕಟ್ಟಿದ್ದರು. ನಿಮ್ಮ ಮಗಳಿಗೆ ಮೆಡಿಕಲ್ ಸೀಟ್ ಕೊಡಿಸುತ್ತೇವೆ ಎಂದು 1.30 ಕೋಟಿ ಹಣ ತೆಗೆದುಕೊಂಡಿದ್ದರು. ಪುನಃ ಇತ್ತೀಚಿಗೆ ಮೆಡಿಕಲ್ ಸೀಟ್‌ಗೆ ಡಿಮ್ಯಾಂಡ್ ಜಾಸ್ತಿ ಆಗಿದೆ ಅಂತೇಳಿ ಹೆಚ್ಚುವರಿಯಾಗಿ 26 ಲಕ್ಷ ತೆಗೆದುಕೊಂಡಿದ್ದರು. ನಂತರ ಇತ್ತ ಹಣವೂ ಇಲ್ಲ, ಅತ್ತ ಮೆಡಿಕಲ್ ಸೀಟು ಕೊಡಿಸದೆ ಆಟ ಆಡಿಸಿದ್ದರು.

ಸೀಟ್ ಸಿಗದಿದ್ದರೆ ನಮ್ಮ ಹಣಕ್ಕೆ ಗ್ಯಾರೆಂಟಿ ಏನು ಎಂದು ಕೇಳಿದರೆ ಆರೋಪಿಗಳು ಚಾಲಾಕಿ ಉತ್ತರ ನೀಡುತ್ತಿದ್ದರು. ಸೀಟ್ ಹಂಚಿಕೆ ಆಗದಿದ್ದರೆ ಷೇರು ಮಾರ್ಕೆಟ್‌ನಲ್ಲಿ ಹಣ ಹಾಕಿ ಡಬಲ್ ಮಾಡಿ ಕೊಡುವುದಾಗಿ ಮತ್ತೆ ಸುಳ್ಳು ಹೇಳಿ ನಂಬಿಸಿದ್ದರು. ಷೇರ್ ಮಾರ್ಕೆಟ್ ಏಜೆಂಟ್ ನಾವು ಎಂದು ಹಣ ಡಬಲ್ ಮಾಡುವ ಕಥೆ ಕಟ್ಟಿದ್ದರು. ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿ ಡಬಲ್‌ ಮಾಡಿ ಕೊಡುವುದಾಗಿ ನಂಬಿಸಿದ್ದರು. ನಂತರ ಹಣವೂ ಕೊಡದೆ ಮೆಡಿಕಲ್‌ ಸೀಟು ಕೊಡಿಸದೆ ಕೈ ಎತ್ತಿದ್ದರು.

ಬರೋಬ್ಬರಿ 1.57 ಕೋಟಿ ಹಣ ವಂಚನೆ‌ ಮಾಡಿದ ಹಿನ್ನೆಲೆಯಲ್ಲಿ ಪ್ರದೀಪ್ತ ಭಾಸ್ಕರ್ ಪೌಲ್ ಅವರು ಮಂಜಪ್ಪ ಮತ್ತು ವಿರೂಪಾಕ್ಷಪ್ಪ ವಿರುದ್ಧ ದೂರು ದಾಖಲಿಸಿದರು. ಸದ್ಯ ದೂರಿನ ಮೇರೆಗೆ ಇಬ್ಬರನ್ನು ಬಂಧನ ಮಾಡಿರುವ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version