ಬೆಂಗಳೂರು: ಗುತ್ತಿಗೆ ಬಿಲ್‌ಗಳ ಬಾಕಿ ಕುರಿತು ಕೆಂಪಣ್ಣ ಅವರು ಮಾತನಾಡುವ ಮುನ್ನ ಹಿಂದಿನ ಸರ್ಕಾರಗಳ ಕುರಿತು ತಿಳಿದುಕೊಳ್ಳುವುದು ಒಳಿತು. ತಮ್ಮ ಬಳಿ ಎಲ್ಲ ದಾಖಲೆಗಳೂ ಇದ್ದು, ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಹೇಳಿಕೆಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯವನ್ನು ಒಡೆಯುವವರಿಗೆ ನಾನು ಬೆಂಬಲ ನೀಡುತ್ತಿದ್ದೇನೆ ಎಂದು ಕೆಂಪಣ್ಣ ಅವರು ಆರೋಪ ಮಾಡಿದ್ದಾರೆ. ಈ ರಾಜ್ಯವನ್ನು ಯಾರೂ ಒಡೆಯಲು ಸಾಧ್ಯವಿಲ್ಲ, ಸೂರ್ಯ ಚಂದ್ರರು ಇರುವವರೆಗೂ ಈ ರಾಜ್ಯ ಒಂದಾಗಿಯೇ ಇರುತ್ತದೆ ಎಂದರು.
ಯಾವುದೇ ಆರೋಪಗಳನ್ನು ಮಾಡಿದರೆ ಸಾಲುವುದಿಲ್ಲ. ಈ ಕುರಿತು ದೂರುಗಳೇನಾದರೂ ಇದ್ದರೆ ನೀಡಿದರೆ ಯಾವುದೇ ತಡ ಮಾಡದೆ ಕ್ರಮ ಕೈಗೊಳ್ಳಲಾಗುತ್ತದೆ. ಪೆಂಡಿಂಗ್ ಬಿಲ್ ಬಗ್ಗೆ ಕೆಂಪಣ್ಣ ತಿಳಿಸಿದ್ದಾರೆ. ನಾನು ಸಚಿವನಾಗಿ ಕೆಲವೇ ವರ್ಷವಾಯಿತು, ಕೆಂಪಣ್ಣ ಅವರು ಹಿರಿಯ ಗುತ್ತಿಗೆದಾರರು. ಪೆಂಡಿಂಗ್ ಬಿಲ್ ಬೊಮ್ಮಾಯಿ ಸರ್ಕಾರದಲ್ಲಿ ಮಾತ್ರ ಇದೆಯೇ? ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಾತ್ರ ಇದೆಯೇ? ಅದಕ್ಕಿಂತ ಹಿಂದೆ ಯಾವ ಸರ್ಕಾರಗಳು ಇದ್ದವು? ಹಿಂದಿನವರ ಕಾಲದಲ್ಲಿ ಎಷ್ಟು ಪೆಂಡಿಂಗ್ ಬಿಲ್ ಇತ್ತು ಎಂಬ ಮಾಹಿತಿ ಅವರಿಗೆ ಇಲ್ಲವೇ? ನನ್ನ ಬಳಿ ಎಲ್ಲ ದಾಖಲೆಗಳೂ ಇವೆ. ಸಮಯ ಬಂದಾಗ ಎಲ್ಲವನ್ನೂ ಹೊರಗಿಡುತ್ತೇನೆ ಎಂದರು.
ಕೆಂಪಣ್ಣ ಅವರ ಆರೋಪದಲ್ಲಿ ರಾಜಕೀಯ ವಾಸನೆ ಇದ್ದೇ ಇದೆ ಎಂದ ಸಿ.ಸಿ. ಪಾಟೀಲ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಕೆಂಪಣ್ಣ ಹೇಳಿಕೆ ನೀಡಿದ್ದಾರೆ. ಎಂದಮೇಲೆ ಸ್ವಲ್ಪ ರಾಜಕೀಯ ವಾಸನೆ ಬಡಿದೇ ಬಡಿಯುತ್ತದೆ. ಇದು ಚುನಾವಣೆ ವರ್ಷ ಅಲ್ಲವೇ? ಎಂದರು.
ಇದನ್ನೂ ಓದಿ | 15 ದಿನದಲ್ಲಿ ಪ್ರಧಾನಿಗೆ ಮತ್ತೊಂದು ಪತ್ರ ಎಂದ ಕೆಂಪಣ್ಣ: ಎರಡನೇ ಸುತ್ತಿನ 40% ವಿವಾದ