ಬೆಂಗಳೂರು: ರಾಜ್ಯದಲ್ಲಿ ಸ್ವಂತ ಕಾರಿದ್ದವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎಂಬುದೂ ಸೇರಿದಂತೆ ಕೆಲವೊಂದು ನಿಯಮಾವಳಿಗಳನ್ನು (Ration Card rules) ರೂಪಿಸಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು (Ration Card Cancel) ಮಾಡಲಾಗುತ್ತದೆ ಎಂಬ ವದಂತಿಗಳನ್ನು ಆಹಾರ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಆ ರೀತಿಯ ಯಾವ ಪ್ರಸ್ತಾಪವೂ ಸದ್ಯಕ್ಕಿಲ್ಲ ಎಂದಿದ್ದಾರೆ.
ನಾವೀಗ ಬಿಪಿಎಲ್ ರದ್ದು ಮಾಡುವ ಚಿಂತನೆಯಲ್ಲಿ ಇಲ್ಲ. ಈಗ ಎರಡು ಕೆಲಸಗಳು ತುರ್ತಾಗಿ ನಡೆಯಬೇಕಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಮೂರು ಲಕ್ಷ ಕುಟುಂಬಗಳಿಗೆ ಬಿಪಿಎಲ್/ಎಪಿಎಲ್ ಕಾರ್ಡ್‌ಗಳನ್ನು ಒದಗಿಸುವುದು ಮತ್ತು ಪಡಿತರ ಚೀಟಿಗಳಿಗೆ ಖಾತೆಗಳನ್ನು ಜೋಡಿಸುವುದು ಎಂದು ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಅನ್ನ ಭಾಗ್ಯ ಯೋಜನೆಯ ಮೂಲಕ ಸದ್ದು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಅಕ್ಕಿ ಸಿಗದೆ ಇದ್ದಾಗ ಐದು ಕೆಜಿ ಅಕ್ಕಿಯ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡುವ ನಿರ್ಧಾರ ಮಾಡಿದೆ, ಕಳೆದ ಎರಡು ತಿಂಗಳುಗಳಿಂದ ಜಮಾ ಆಗುತ್ತಿದೆ. ಹೀಗಿರುವಾಗ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಕಡಿಮೆ ಮಾಡಿದರೆ ಲಾಭವಾಗುತ್ತದೆ ಎಂಬ ಕಾರಣಕ್ಕಾಗಿ ಬಿಪಿಎಲ್ ಕಾರ್ಡ್‌ಗೆ ಕೆಲವೊಂದು ನಿಯಮಗಳನ್ನು ಮಾಡಿ ಅವುಗಳ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಸ್ವತಃ ಕೆ.ಎಚ್. ಮುನಿಯಪ್ಪ ಅವರೇ ಬಿಪಿಎಲ್ ಕಾರ್ಡ್‌ಗೆ ಕೆಲವೊಂದು ನಿಯಮಗಳನ್ನು ಜಾರಿ ಮಾಡಲಾಗುತ್ತದೆ ಎಂದಿದ್ದರು.
ಆದರೆ, ಈ ಯಾವ ಪ್ಲ್ಯಾನ್ ಕೂಡಾ ಸದ್ಯಕ್ಕಿಲ್ಲ. ಈಗ ಅತಿ ಹೆಚ್ಚು ಜನರಿಗೆ ಯೋಜನೆಯ ಲಾಭ ತಲುಪಿಸುವುದಷ್ಟೇ ಗುರಿ ಎಂದಿದ್ದಾರೆ ಕೆ.ಎಚ್. ಮುನಿಯಪ್ಪ. ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಲಕ್ಷ ಜನರು ಪಡಿತರ ಚೀಟಿಗಾಗಿ ಅರ್ಜಿ ಹಾಕಿದ್ದರು. ಅರ್ಜಿ ಬಗ್ಗೆ ಪರಿಶೀಲನೆ ಮಾಡಿ ಅನುಮೋದನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಇನ್ನು ಮೂರು ತಿಂಗಳಲ್ಲಿ ಅರ್ಹರಿಗೆ ಬಿಪಿಎಲ್, ಎಪಿಎಲ್ ಕಾರ್ಡ್ ನೀಡಲಾಗುತ್ತದೆ ಎಂದು ವಿವರಿಸಿದರು.
ಬ್ಯಾಂಕ್ ಖಾತೆ ಜೋಡಣೆ ಅಭಿಯಾನ
ರಾಜ್ಯದಲ್ಲಿ ಒಟ್ಟು 1.28 ಕೋಟಿ ಪಡಿತರ ಚೀಟಿದಾರರಿದ್ದಾರೆ. ಬಿಪಿಎಲ್ ಕಾರ್ಡ್‌ದಾರರ ಖಾತೆಗೆ ಐದು ಕೆಜಿ ಅಕ್ಕಿಯ ಹಣ ಹಾಕಬೇಕು ಎಂದಾದರೆ ಅವರ ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಸಂಪರ್ಕ ಆಗಿರಬೇಕು. ರಾಜ್ಯದಲ್ಲಿ 21 ಲಕ್ಷ ಪಡಿತರ ಚೀಟಿಗಳಿಗೆ ಬ್ಯಾಂಕ್ ಖಾತೆ ಜೋಡಣೆ ಆಗಿರಲಿಲ್ಲ. ಅಧಿಕಾರಿಗಳು ಮುತುವರ್ಜಿ ವಹಿಸಿ ಕಳೆದ ಒಂದು ತಿಂಗಳ ಅವಧಿಯಲ್ಲಿ 7 ಲಕ್ಷ ಪಡಿತರ ಚೀಟಿಗಳಿಗೆ ಬ್ಯಾಂಕ್ ಖಾತೆ ಕನೆಕ್ಟ್ ಮಾಡಿದ್ದಾರೆ. ಉಳಿದ 14 ಲಕ್ಷ ಖಾತೆಗಳಿಗೆ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಜೋಡಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಬಿಪಿಎಲ್ ಕಾರ್ಡ್ ರದ್ದತಿ ಪ್ರಶ್ನೆ ಸದ್ಯಕ್ಕೆ ಇಲ್ಲ
ನಾಲ್ಕು ಚಕ್ರದ ಸ್ವಂತ ವಾಹನ ಇದ್ದರೆ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ (ಬಾಡಿಗೆ ಕಾರು ಇದ್ದರೆ ತೊಂದರೆ ಇಲ್ಲ) ಎಂಬ ಚರ್ಚೆ ಬಗ್ಗೆ ಮಾತನಾಡಿರುವ ಕೆ.ಎಚ್. ಮುನಿಯಪ್ಪ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂಥಹುದೊಂದು ತೀರ್ಮಾನ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಇನ್ನೂ ಏನೂ ತೀರ್ಮಾನ ಮಾಡಿಲ್ಲ. ಕೆಲವು ಬಿಪಿಎಲ್ ಕಾರ್ಡ್‌ದಾರರ ಬಳಿ ಸಣ್ಣ ಕಾರುಗಳು ಇರುತ್ತವೆ. ಹಾಗಂತ ಅವರನ್ನು ಬಿಪಿಎಲ್‌ನಿಂದ ಹೊರಗಿಡಲು ಆಗುವುದಿಲ್ಲ. ಹೀಗಾಗಿ ಮುಂದೆ ಇದರ ಪ್ರಸ್ತಾಪ ಬಂದಾಗ ಮಾನದಂಡಗಳ ಮರುಚಿಂತನೆ ನಡೆಸಲಾಗುತ್ತದೆ. ಆದರೆ, ಸದ್ಯಕ್ಕೆ ಅದರ ಯಾವ ಯೋಚನೆಯೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ : Parliament Election 2024 : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೇ ಮುನ್ನಡೆ ವರದಿ: ಖರ್ಗೆ ಗರಂ, 20 ಬರಲೇಬೇಕು ಎಂದು ಆರ್ಡರ್
ಹೊಸ ಪಡಿತರ ಚೀಟಿಗೆ ಸದ್ಯ ಅರ್ಜಿ ಹಾಕುವಂತಿಲ್ಲ
ಇದೇ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಇನ್ನೊಂದು ವಿಚಾರವನ್ನೂ ಸ್ಪಷ್ಟಪಡಿಸಿದರು. ಅದೇನೆಂದರೆ, ಈಗ ಸದ್ಯಕ್ಕೆ ಹೊಸ ಪಡಿತರ ಕಾರ್ಡ್‌ಗೆ ಅವಕಾಶ ನೀಡಲಾಗುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾಗುತ್ತಿದ್ದಂತೆಯೇ, ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವ ಆನ್‌ಲೈನ್ ಪೋರ್ಟಲ್ ಸ್ಥಗಿತಗೊಳಿಸಲಾಗಿತ್ತು.
ಹೊಸ ಸರ್ಕಾರ ಬಂದರೂ ಪೋರ್ಟಲ್ ಓಪನ್ ಮಾಡಿಲ್ಲ. ಇದಕ್ಕೆ ಕಾರಣ ನೀಡಿದ ಮುನಿಯಪ್ಪ, ಈಗಾಗಲೇ ಅರ್ಜಿ ಸ್ವೀಕರಿಸಿರುವ 3 ಲಕ್ಷ ಜನರಿಗೆ ಕಾರ್ಡ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈಗ ಅವರಿಗೆ ಕಾರ್ಡ್ ನೀಡಿ ಅವರಿಗೆಲ್ಲ ಅಕ್ಕಿ ವಿತರಿಸುವ ಕೆಲಸ ಮಾಡುವುದೇ ಗುರಿ. ಇದೆಲ್ಲವೂ ಕ್ಲಿಯರ್ ಆದ ಮೇಲೆಯೇ ಇನ್ನು ಹೊಸ ಅರ್ಜಿ ಸ್ವೀಕಾರ ಎಂದರು.