ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಂದ ಶೇ.40ರವರೆಗೆ ಲಂಚ ಪಡೆಯಲಾಗುತ್ತಿದೆ ಎಂದು ಆರೋಪ ಮಾಡುತ್ತಿರುವ ರಾಜ್ಯ ಗುತ್ತಿಗೆದಾರರ ಸಂಘದ ಸದಸ್ಯರ ವಿರುದ್ಧ ಎರಡು ಮಾನನಷ್ಟ ಮೊಕದ್ದಮೆಗಳು ದಾಖಲಾಗಿವೆ.
ವಿಧಾನಸೌಧದಲ್ಲಿ ತೋಟಗಾರಿಕಾ ಸಚಿವ ಮುನಿರತ್ನ ಈ ಕುರಿತು ಸುದ್ದಿಗೋಷ್ಠಿ ನಡೆಸಿದರು. “ಒಂದು ವರ್ಷದಿಂದ ನಮ್ಮ ಸರ್ಕಾರ, ಸಚಿವರು, ಶಾಸಕರ ಮೇಲೆ 40% ಕಮಿಷನ್ ಆರೋಪವನ್ನು ಗುತ್ತಿಗೆದಾರರ ಸಂಘ ಮಾಡಿತ್ತು. ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಸ್ವತಃ ಸಿಎಂ ಹೇಳಿದ್ದರು. ಈ ನಡುವೆ ಗುತ್ತಿಗೆದಾರರ ಸಂಘದ ಕೆಂಪಣ್ಣನವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಬಳಿಕ ಮಾಧ್ಯಮದ ಮುಂದೆ ಮಾತನಾಡಿ, ಕೋಲಾರ ಉಸ್ತುವಾರಿ ಸಚಿವರು ಕಮಿಷನ್ ಕೇಳುತ್ತಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ನಾನು ದೆಹಲಿಯಲ್ಲಿ ಉತ್ತರ ನೀಡಿದ್ದೆ. ದಾಖಲೆ ಇಲ್ಲದಿದ್ದರೆ ಮಾಧ್ಯಮಗಳ ಮುಂದೆ ಕ್ಷಮೆ ಕೇಳಬೇಕು ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದೂ ತಿಳಿಸಿದ್ದೆ. ಆದರೆ ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಹೆಜ್ಜೆಯನ್ನೂ ಅವರು ಇಟ್ಟಿಲ್ಲ. ಆದ್ದರಿಂದ ಗುತ್ತಿಗೆದಾರರ ಸಂಘದ 18 ಜನರ ಮೇಲೆ ದಾವೆ ಹೂಡಿದ್ದೇನೆʼʼ ಎಂದು ಮುನಿರತ್ನ ತಿಳಿಸಿದ್ದಾರೆ.
ಇದನ್ನೂ ಓದಿ | 40% ಕಮಿಷನ್ | ಬಿಜೆಪಿ ಸರಕಾರದ ಮೇಲೆ 15,00,00,00,00,000 ರೂ. ಲೂಟಿ ಆರೋಪ, ಕಾಂಗ್ರೆಸ್‌ನಿಂದ ಲಂಚದ ಮೆನು!
“ಕ್ರಿಮಿನಲ್ ಡಿಫೇಮೇಷನ್ ಕೇಸ್ ದಾಖಲು ಮಾಡಿದ್ದೇನೆ. ಅವರು ಮಾಡಿದ ಆರೋಪ ಸತ್ಯವಾಗಿದ್ದರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಇಲ್ಲವಾದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆʼʼ ಎಂದಿದ್ದಾರೆ.
ಗುತ್ತಿಗೆದಾರರ ಸಂಘಕ್ಕೆ ರಾಜಕೀಯದ ನಂಟಿದೆ ಎನ್ನುವುದಕ್ಕೆ ಸಾಕ್ಷಿ ಇದೆ ಎಂದ ಮುನಿರತ್ನ, “ಅವರು ಸಿದ್ದರಾಮಯ್ಯನವರ ಮನೆಯಿಂದ ಬಂದಿದ್ದೂ ಒಂದು ಉದಾಹರಣೆ. ಪ್ರಕರಣವನ್ನು ಶೀಘ್ರ ವಿಚಾರಣೆ ನಡೆಸಲು ಮತ್ತೊಂದು ಮನವಿ ಮಾಡುತ್ತೇನೆ. ಈ ಪ್ರಕರಣವನ್ನು ನಾಲ್ಕು ತಿಂಗಳಲ್ಲಿ ಮುಗಿಸಬೇಕೆಂದು ಕೋರ್ಟ್‌ಗೆ ಮನವಿ ಮಾಡುತ್ತೇನೆ. ಇದು ಸಾಕಷ್ಟು ಗಂಭೀರ ಪ್ರಕರಣ. ಇದು ಜನರ ಮನಸ್ಸಲ್ಲಿ ಉಳಿಯುವುದು ಬೇಡ. ಇದನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಈ ಅರ್ಜಿ ಸಲ್ಲಿಸುತ್ತೇನೆʼʼ ಎಂದಿದ್ದಾರೆ.
“ಸಿದ್ದರಾಮಯ್ಯ ಅವರ ಗೌರವ ಹೆಚ್ಚಾಗಬೇಕು ಎಂದರೆ ಸದನದಲ್ಲಿ ದಾಖಲೆಗಳನ್ನು ಇಟ್ಟು ಮಾತನಾಡಲಿ. ಆಗ ಅವರು ದೊಡ್ಡವರಾಗುತ್ತಾರೆ. ಕಾಂಗ್ರೆಸ್‌ನವರ ಬಳಿ ದಾಖಲೆಗಳು ಇಲ್ಲ. ಸುಮ್ಮನೆ ಅವರು, ಮಾತಿನ ಮೂಲಕ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡಿ ಹಿಂಬಾಗಿಲಿನಲ್ಲಿ ಓಡಿಹೋದರೆ ಅವರಿಗೆ ಗೌರವ ತರುವುದಿಲ್ಲ. ದಾಖಲೆ ಬಿಡುಗಡೆ ಮಾಡಿ ಆರೋಪ ಸಾಬೀತು ಮಾಡಿದರೆ ನಾನು ಯಾವ ಶಿಕ್ಷೆಯನ್ನು ಬೇಕಾದರೂ ಎದುರಿಸಲು ಸಿದ್ಧನಿದ್ದೇನೆʼʼ ಎಂದು ಮುನಿರತ್ನ ಹೇಳಿದ್ದಾರೆ.
ಇದನ್ನೂ ಓದಿ | 40% ಕಮಿಷನ್| ಕರ್ನಾಟಕವನ್ನು ಕರಪ್ಶನ್ ಕ್ಯಾಪಿಟಲ್ ಮಾಡಿದ ಬಿಜೆಪಿ ಸರಕಾರ: ಕಾಂಗ್ರೆಸ್ ತೀವ್ರ ವಾಗ್ದಾಳಿ