ಬೆಂಗಳೂರು: ದೂರು ಕೊಡಲು ಬಂದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಪೊಲೀಸ್ ಇನ್‌ಸ್ಪೆಕ್ಟರ್‌ನನ್ನು ಸಸ್ಪೆಂಡ್ ಮಾಡಲಾಗಿದೆ.
ಕೊಡಿಗೆಹಳ್ಳಿ ಇನ್‌ಸ್ಪೆಕ್ಟರ್ ರಾಜಣ್ಣ ಎಂಬವರನ್ನು ಸಸ್ಪೆಂಡ್ ಮಾಡಲಾಗಿದ್ದು, ಇಲಾಖಾ ತನಿಖೆಗೆ ಆದೇಶ ಹೊರಡಿಸಲಾಗಿದೆ. ಈತ ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳೆಯ ಫೋನ್ ನಂಬರ್ ಪಡೆದು ಅಸಭ್ಯವಾಗಿ ಚಾಟಿಂಗ್ ಮಾಡಿದ್ದ. ಠಾಣೆಗೆ ಕರೆಸಿಕೊಂಡು ರೂಂಗೆ ಬರಲು ಹೇಳಿದ್ದ ಎಂದು ಸಾಕ್ಷಿ ಸಮೇತ ಮಹಿಳೆ ಡಿಸಿಪಿಗೆ ದೂರು ನೀಡಿದ್ದರು.
ದೂರು ಆಧರಿಸಿ ಡಿಸಿಪಿ ಲಕ್ಷ್ಮಿ ಪ್ರಸಾದ್ ಪ್ರಾಥಮಿಕ ತನಿಖೆಗೆ ಆದೇಶ ನೀಡಿದ್ದರು. ಯಲಹಂಕ ಎಸಿಪಿ ಠಾಣೆಯ ಸಿಸಿಟಿವಿ ಫೂಟೇಜ್ ಪಡೆದು ತನಿಖೆ ನಡೆಸಿದ್ದರು. ಸಿಸಿಟಿವಿಯಲ್ಲಿ ರಾಜಣ್ಣ ರೂಂ ಕೀ ಮತ್ತು ಡ್ರೈ ಫ್ರೂಟ್ಸ್ ನೀಡಿದ್ದ ವಿಡಿಯೋ ಪಡೆಯಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಜಣ್ಣನನ್ನು ಸಸ್ಪೆಂಡ್ ಮಾಡಲಾಗಿದೆ.
ಯುವತಿ ದೂರಿನ ಮೇಲೆ ರಾಜಣ್ಣ ಮೇಲೆ FIR ದಾಖಲಾಗುವ ಸಾಧ್ಯತೆಯಿದ್ದು, FIR ದಾಖಲಿಸಿ ತನಿಖೆ ಮುಂದುವರಿಯಲಿದೆ. ಈ ಹಿಂದೆ ಡಿಸಿಪಿಯಾಗಿದ್ದ ಅನೂಪ್ ಶೆಟ್ಟಿಯವರನ್ನು ವರ್ಗಾವಣೆ ಮಾಡುವುದಾಗಿಯೂ ರಾಜಣ್ಣ ಆವಾಜ್ ಹಾಕಿದ್ದ. ಸಿಬ್ಬಂದಿಗಳ ಮೇಲೆ ದರ್ಪ ಮೆರೆಯುತ್ತಿದ್ದ ಎಂದು ಸ್ವತಃ ಸಿಬ್ಬಂದಿಗಳೇ ಡಿಸಿಪಿಯವರಿಗೆ ಪತ್ರ ಬರೆದು ದೂರು ನೀಡಿದ್ದರು. ಸಾಕಷ್ಟು ದೂರುಗಳೂ ಕೂಡ ಈತನ ಮೇಲಿದ್ದವು.