Site icon Vistara News

Missing Case : ನಾಪತ್ತೆಯಾದ ಬಾಲಕನ ಹಿಂದೆ ಭಾರಿ ನಿಗೂಢತೆ; ಬಾಂಬ್‌ ತಯಾರಿಕರ ಕೈಗೆ ಸಿಲುಕಿದ್ದನಾ?

Boy goes missing in Bengaluru Caught by bomb makers

ಬೆಂಗಳೂರು: ಶಾಲೆಗೆ ಹೋಗುವ ಮಕ್ಕಳ ಮೇಲೆ ಪೋಷಕರು ಹದ್ದಿನ ನಿಗಾಇಡಬೇಕು. ಇಲ್ಲದೇ ಇದ್ದರೆ ನಿಮ್ಮ ಮಕ್ಕಳು ಅಡ್ಡದಾರಿ ಹಿಡಿಯಬಹುದು. ಕಾನೂನುಬಾಹಿರ ಚಟುವಟಿಕೆಗಳತ್ತ ಮನಸಾಗಬಹುದು. ಶಾಲೆಗೆ ಹೋಗಿ ಬಂದ 9 ವರ್ಷದ ಬಾಲಕ‌ ನಾಪತ್ತೆಯಾಗಿದ್ದಾನೆ. ಮಿಲನ್ ಖಡಕ ನಾಪತ್ತೆಯಾದವನು. ಬೆಂಗಳೂರಿನ ಭಾರತಿನಗರದಲ್ಲಿ ನೇಪಾಳದ ಮೂಲದ ಬೀಮಲ್ ಮತ್ತು ಸುನಿತಾ ಅವರ ಪುತ್ರ ಮಿಲನ್ ನಾಪತ್ತೆ (Missing Case) ಆಗಿದ್ದಾನೆ.

ಭಾರತಿನಗರದ ಆರ್‌ವಿಎಂ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಮಿಲನ್‌, ಮೊನ್ನೆ ಫೆ. 8ನೇ ತಾರೀಖು ಶಾಲೆಗೆ ಹೋಗಿ ಮನೆಗೆ ಬಂದಿದ್ದ. ಮಧ್ಯಾಹ್ನ 3:30ರ ಸುಮಾರಿಗೆ ಶಾಲೆಯಿಂದ ಮನೆಗೆ ಬಂದವನೇ ಶಾಲೆಯ ಯೂನಿಫಾರ್ಮ್ ಬದಲಾಯಿಸಿ, ಮನೆಯಿಂದ ಕಾಲಿಟ್ಟಿದ್ದಾನೆ. ಆದರೆ ಮಗ ರಾತ್ರಿ ಎಷ್ಟೊತ್ತಾದರು ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಪೋಷಕರು ಭಾರತೀನಗರ ಪೊಲೀಸರಿಗೆ ‌ದೂರು ನೀಡಿದ್ದಾರೆ.

ಇದನ್ನೂ ಓದಿ: Missing case : ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ನಾಪತ್ತೆ

ಬಾಂಬ್‌ ತಯಾರಿಕೆಗೆ ಹೋಗುತ್ತಿದ್ದನಾ ಬಾಲಕ?

ದೂರು ದಾಖಲಿಸಿಕೊಂಡ ಭಾರತೀನಗರ ಪೊಲೀಸರು ತನಿಖೆಗೆ ಇಳಿದಾಗ ಶಾಲೆಯ ಶಿಕ್ಷಕರು ಹಾಗೂ ಮಿಲನ್‌ ಸಹಪಾಠಿಗಳ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಿಲನ್‌ ಕುರಿತು ಆಘಾತಕಾರಿ ಸಂಗತಿ ಹೊರ ಹಾಕಿದ್ದಾರೆ.

ಶಾಲೆಗೆ ಬರುವಾಗ ಮಿಲನ್ ಯಾವಾಗಲೂ ಆಟೋದಲ್ಲಿ ಓಡಾಡ್ತಿದ್ದ ಎನ್ನಲಾಗಿದೆ. ಆಟೋದಲ್ಲಿ ಬರುತ್ತಿದ್ದ ಕೆಲವರು ಕರೆದುಕೊಂಡು ಹೋಗುತ್ತಿದ್ದ ವಿಚಾರವನ್ನು ಮಿಲನ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ. ನಮ್ಮ ಮನೆಯಲ್ಲಿ ಅಪ್ಪ-ಅಮ್ಮಗೆ ಕಷ್ಟ ಇದೆ. ನನ್ನನ್ನು ಕೆಲವರು ಕರೆಯುತ್ತಿದ್ದಾರೆ, ಅವರ ಜತೆ ಹೋದರೆ ಹಣ ಕೊಡುತ್ತಿದ್ದಾರೆ. ಇದರಿಂದ ನಮ್ಮ ಪೋಷಕರ ಕಷ್ಟ ಬಗೆಹರಿಯುತ್ತೆ. ಅವರು ಬಾಂಬ್ ತಯಾರಿಕೆ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದಾರೆ ಎಂದು ಹೇಳಿದ್ದಾನೆ.

ಹೀಗಾಗಿ ಯಾರೋ ಮಿಲನ್‌ಗೆ ಬ್ರೈನ್ ವಾಶ್ ಮಾಡಿ ಕರೆದುಕೊಂಡು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಇನ್ನು ಮಿಲನ್‌ ನಾಪತ್ತೆಯಾದ ದಿನ ತನ್ನ ಸ್ನೇಹಿತರನ್ನು ತಬ್ಬಿಕೊಂಡು, ಇವತ್ತೇ ಕೊನೆ ದಿನ‌ ಶಾಲೆಗೆ ಬರುವುದು ಅಂತೇಳಿ ಹೋಗಿದ್ದಾನೆ. ಶಾಲೆಯಿಂದ ಮನೆಗೆ ಬಂದ ಯೂನಿಫಾಂ ಬದಲಿಸಿ ಹೋಗಿದ್ದಾನೆ. ಇದೆಲ್ಲವೂ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಆತ ಬ್ಯಾಗ್‌ನೊಟ್ಟಿಗೆ ಮನೆಗೆ ಬರುವುದು ನಂತರ ಯೂನಿಫಾರಂ ಬದಲಾಯಿಸಿ, ಖುಷಿಯಿಂದಲೇ ಓಡಿ ಹೋಗಿರುವುದು ಕಂಡು ಬಂದಿದೆ. ಇದರಿಂದ ಚೈಲ್ಡ್ ಟ್ರ್ಯಾಪಿಂಗ್ ಆಗಿರಬಹುದಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತೀವ್ರ ಹುಡುಕಾಟವನ್ನು ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version