ಬೆಂಗಳೂರು: ಪದೇ ಪದೆ ದಾಖಲಾಗುತ್ತಿರುವ ಮಿಸ್ಸಿಂಗ್ ಕೇಸ್‌ಗಳು (Missing Case) ಬೆಂಗಳೂರು ಪೊಲೀಸರ (Bangalore police) ನಿದ್ದೆಗೆಡಿಸಿವೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಂದೇ ಸ್ಟೇಷನ್‌ನಲ್ಲಿ 137ಕ್ಕೂ ಹೆಚ್ಚು ನಾಪತ್ತೆ ಪ್ರಕರಣಗಳು ದಾಖಲಾಗಿವೆ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಹೀಗೆ ಸಾಲು ಸಾಲು ಮಿಸ್ಸಿಂಗ್ ಕೇಸ್‌ಗಳು ದಾಖಲಾಗಿದ್ದು, ಎರಡೂವರೆ ವರ್ಷಗಳಲ್ಲಿ 137ಕ್ಕೂ ಹೆಚ್ಚು ನಾಪತ್ತೆ ಕೇಸ್‌ಗಳು ಬಂದಿವೆ. ಬಹುತೇಕ ವಾರಕ್ಕೊಂದರಂತೆ ಇವು ದಾಖಲಾಗುತ್ತಿವೆ. ಅದರಲ್ಲೂ ನಿಮ್ಹಾನ್ಸ್‌ನಿಂದಲೇ ಹೆಚ್ಚು ನಾಪತ್ತೆ ಕೇಸ್‌ಗಳು ದಾಖಲಾಗಿವೆ.
ಮಾನಸಿಕ ಸಮಸ್ಯೆಗೆ ಚಿಕಿತ್ಸೆಗಾಗಿ ಎಂದು ಬರುವ ರೋಗಿಗಳು ಕ್ಷಣಮಾತ್ರದಲ್ಲೇ ನಾಪತ್ತೆಯಾಗುವುದು ಕಂಡುಬಂದಿದೆ. ನಿಮ್ಹಾನ್ಸ್ ಆವರಣ ಹಾಗೂ ಎನ್‌ಜಿಓಗಳ ಆವರಣಗಳಿಂದ ಇವರು ಕಣ್ಮರೆಯಾಗುತ್ತಿದ್ದಾರೆ. ನಾಪತ್ತೆಯಾದವರಲ್ಲಿ 70%ರಷ್ಟು ಯುವಕರೇ ಆಗಿದ್ದಾರೆ. ಸಿದ್ದಾಪುರ ಪೊಲೀಸರಿಗೆ ಈಗ ಕೊಲೆ, ಕೊಲೆ ಯತ್ನ ಕೇಸ್‌ಗಳಿಗಿಂತಲೂ ಈ ಮಿಸ್ಸಿಂಗ್ ಕೇಸ್‌ಗಳೇ ಹೆಚ್ಚು ತಲೆ ನೋವು ತಂದಿವೆ.
ಈ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಹಲವು ಅನುಮಾನಗಳು ಮೂಡಿವೆ. ಇವು ಮಾಮೂಲಿ ನಾಪತ್ತೆ ಕೇಸ್‌ಗಳಾ ಅಥವಾ ಇದರ ಹಿಂದೆ ಏನಾದರೂ ಮಿಸ್ಟರಿ ಇದೆಯಾ ಎಂದು ಯೋಚಿಸಲು ಆರಂಭಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಈವರೆಗೆ 107 ಕೇಸ್‌ಗಳು ಟ್ರೇಸ್ ಆಗಿವೆ; ಇನ್ನೂ 30 ಜನರ ಬಗ್ಗೆ ಈವರೆಗೆ ಒಂದೂ ಸುಳಿವಿಲ್ಲ. ಅವರು ಬದುಕಿದ್ದಾರಾ, ಸತ್ತಿದ್ದಾರಾ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ಇವರು ಕಿಡ್‌ನ್ಯಾಪ್ ಆಗಿದ್ದಾರಾ, ಕೊಲೆ ಮಾಡಿದ್ದಾರಾ ಎಂಬ ಬಗ್ಗೆಯೂ ಅನುಮಾನಗಳಿವೆ.
ಇದನ್ನೂ ಓದಿ: Missing Case: ಅಪ್ಪ ಚಾಕೊಲೇಟ್ ಕೊಟ್ಟಿಲ್ಲ ಅನ್ನೋ ಸಿಟ್ಟಿಗೆ ಫ್ರೀ ಬಸ್‌ನಲ್ಲಿ ಊರೂರು ಸುತ್ತಿದ ಸೋದರಿಯರು!