ಬೆಂಗಳೂರು: ಕಳೆದ ಶುಕ್ರವಾರದಿಂದ ಬಿಟಿಎಂ ಲೇಔಟಿನ ಶಾಂತಿನಿಕೇತನ ಶಾಲೆಯ ಮೂವರು ವಿದ್ಯಾರ್ಥಿಗಳು (missing case) ನಾಪತ್ತೆಯಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಹೋಗಿರುವ ವಿದ್ಯಾರ್ಥಿಗಳು ಆ ಬಳಿಕ ಕಂಡುಬಂದಿಲ್ಲ. ಅಪರಿಚಿತ ವ್ಯಕ್ತಿಯಿಂದ ಸ್ಕೂಟರ್ ಒಂದನ್ನು ಪಡೆದು ಅದನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಶಾಲೆ ಬಳಿ ಇದ್ದ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ.
ಆದರೆ ರಾತ್ರಿಯಾದರೂ ಮನೆಗೆ ವಾಪಸ್ ಬಂದಿಲ್ಲ. ಹೇಮಂತ್ ಗೌಡ, ಪವನ್ ಮತ್ತು ಸಂಜಯ್ ನಾಪತ್ತೆಯಾದ ವಿದ್ಯಾರ್ಥಿಗಳು. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಡಿದ ಅಮಲಿನಲ್ಲಿ ಹಲ್ಲೆ
ಕುಡಿದ ಅಮಲಿನಲ್ಲಿ ಮೂವರ ಮೇಲೆ ಕಿಡಿಗೇಡಿಗಳು ಲಾಂಗ್‌ನಿಂದ ಹಲ್ಲೆ ಮಾಡಿದ್ದು, ಈ ಕುರಿತು ದೂರು ದಾಖಲಾಗಿದೆ. ಜಾನ್ಸನ್, ಆತನ ತಂದೆ, ಸಹೋದರರ ಮೇಲೆ ಹಲ್ಲೆ ನಡೆದಿದೆ. ಆಡುಗೋಡಿ ಬಳಿಯ ಎಲ್.ಆರ್.ನಗರದಲ್ಲಿ ಘಟನೆ ನಡೆದಿದೆ.
ಹಲ್ಲೆ ನಡೆಸಿದವರು ಹಾಗೂ ಇವರು ಒಂದೇ ಏರಿಯಾದ ಯುವಕರಾಗಿದ್ದಾರೆ. ಕಳೆದ ರಾತ್ರಿ ಕುಡಿದ ಅಮಲಿನಲ್ಲಿ ಐಸಾಕ್ ಗಲಾಟೆ ಮಾಡಿದ್ದ. ಈ ವೇಳೆ ಹಣ ಕೊಡುವಂತೆ ಜಾನ್ಸನ್ ಬಳಿ ಕೇಳಿದ್ದ. ಹಣ ಕೊಡದಿದ್ದಾಗ ಜೀಬಿಗೆ ಕೈ ಹಾಕಿದ್ದು, ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಜಾನ್ಸನ್ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಲಾಗಿದೆ. ಬಿಡಿಸಲು ಬಂದ ಜಾನ್ಸನ್ ತಂದೆ ಸಹೋದರನಿಗೂ ಗಂಭೀರ ಗಾಯವಾಗಿದೆ.
ಮೂವರು ಗಾಯಾಳುಗಳು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ 307 ಅಡಿ ಕೇಸ್ ದಾಖಲಿಸಿರುವ ಆಡುಗೋಡಿ ಪೊಲೀಸರು ಐಸಾಕ್ ಹಾಗೂ ಪವನ್‌ರನ್ನು ಬಂಧಿಸಿದ್ದಾರೆ.
ಓದು ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲೋಕೇಶ್ (15) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ತಮ್ಮದೇ ತೋಟದಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕ್ರಿಕೆಟ್ ಆಡೋದು ನಿಲ್ಲಿಸಿ ಓದಿನತ್ತ ಗಮನ ಹರಿಸು ಎಂದು ತಂದೆ ತಾಯಿ ಬುದ್ಧಿ ಹೇಳಿದ್ದರು. ಗೌರಿಬಿದನೂರು ತಾಲ್ಲೂಕಿನ ಚಿಟಾವಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಈತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.