ರಮೇಶ ದೊಡ್ಡಪುರ, ಬೆಂಗಳೂರು
ಸಂತ ಕನಕದಾಸರ ಜಯಂತಿಯಂದು ಬೆಂಗಳೂರಿಗೆ ಆಗಮಿಸಿ ಅವರ ಮಾತುಗಳನ್ನೇ ಉಲ್ಲೇಖಿಸುತ್ತ ಬೆಂಗಳೂರಿನ ಜನತೆಯ ಮನೂರೆಗೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆದರೆ ಮೋದಿ ಮೇನಿಯಾ ಬೆಂಗಳೂರಿಗಷ್ಟೇ ಸೀಮಿತವಾಗಿತ್ತು ಎಂದುಕೊಂಡರೆ ಅದು ತಪ್ಪು.
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ಇಡೀ ದಿನದ ಪ್ರವಾಸದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದು ಒಂದೇ ಕಡೆ. ಈ ಭಾಷಣದ ಆರಂಭದಲ್ಲೇ ಸಂತ ಕನಕದಾಸರನ್ನು ಸ್ಮರಿಸಿದರು. ʼಕುಲ ಕುಲ ಕುಲವೆಂದು ಹೊಡೆದಾಡದಿರಿʼ ಎನ್ನುತ್ತ ಜಾತಿ ಭೇದವನ್ನು ಹೋಗಲಾಡಿಸಲು ಪ್ರಯತ್ನಿಸಿದರು, ಅವರ ಮಾರ್ಗದಲ್ಲಿ ನಾವು ಸಾಗಬೇಕು ಎಂದು ಕರೆ ನೀಡಿದರು.
ಮೋದಿಯವರ ಒಟ್ಟಾರೆ ಪ್ರವಾಸದಲ್ಲಿ ಮಾತನಾಡಿದ್ದು ಒಂದೇ ಕಡೆಯಾದರೂ ಅನೇಕ ಸಂದೇಶಗಳನ್ನು ನೀಡಿದ್ದಾರೆ. ಆರಂಭದಲ್ಲಿ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮ ನವೆಂಬರ್ 10ಕ್ಕೆ ನಿಗದಿಯಾಗಿತ್ತಾದರೂ ಸಂತ ಕನಕದಾಸರ ಜಯಂತಿಯ ನವೆಂಬರ್ 11ಕ್ಕೆ ಮರುನಿಗದಿಯಾಗಿದ್ದು ಸಂಪೂರ್ಣ ಕಾಕತಾಳೀಯ ಎನ್ನುವಂತೆಯೂ ಇಲ್ಲ.
ಸಂತ ಕನಕದಾಸರ ರಚನೆಗಳು ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಸಂತಸ ಪಡುವ ಶಾಶ್ವತ ಮೌಲ್ಯಗಳನ್ನು ಹೊಂದಿದೆ. ಆದರೆ ವ್ಯಕ್ತಿಯಾಗಿ ಕನಕದಾಸರನ್ನು ಕುರುಬ ಸಮುದಾಯವು ತಮ್ಮವರೆಂದು ಆರಾಧಿಸುತ್ತದೆ. ಕನಕದಾಸರ ಜಯಂತಿಯಂದೇ ಕಾರ್ಯಕ್ರಮವನ್ನು ನಿದಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿನ ಅತ್ಯಂತ ಪ್ರಭಾವಿ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯದ ಗಮನವನ್ನು ಮೋದಿ ಸೆಳೆದರು.
ಮಹರ್ಷಿ ವಾಲ್ಮೀಕಿಗಳ ರಾಮಾಯಣ ರಚನೆಯು ಇಡೀ ಮಾನವ ಜನಾಂಗಕ್ಕೆ ಮಾರ್ಗದರ್ಶನ ಮಾಡುತ್ತಿದೆ. ತಮ್ಮ ಸಮುದಾಯದವರು ಎಂಬ ಕಾರಣಕ್ಕೆ ವಾಲ್ಮೀಕಿ ಸಮುದಾಯಕ್ಕೆ ಮಹರ್ಷಿಗಳು ಆರಾಧ್ಯರು. ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಾಜ್ಯಾದ್ಯಂತ ಹರಡಿಕೊಂಡಿರುವ ಸಮುದಾಯದ ಗಮನವನ್ನೂ ಮೋದಿ ಸೆಳೆದರು.
ಇದೆಲ್ಲದಕ್ಕಿಂತಲೂ ಪ್ರಧಾನಿ ಮೋದಿಯವರ ಕಣ್ಣು ಇದ್ದದ್ದು ರಾಜ್ಯದ ಅತಿ ದೊಡ್ಡ ಜನಾಂಗದಲ್ಲೊಂದಾದ ಒಕ್ಕಲಿಗ ಸಮುದಾಯದ ಮೇಲೆ ಎನ್ನುವುದು ಸ್ಪಷ್ಟ. ಒಕ್ಕಲಿಗ ಸಮುದಾಯವು ಪ್ರಾಬಲ್ಯ ಹೊಂದಿರುವ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಅಷ್ಟಕ್ಕಷ್ಟೆ. ಸಂಘಟನೆಯು ಇದೆಯಾದರೂ ಪ್ರಮುಖವಾಗಿ ಒಕ್ಕಲಿಗ ಸಮುದಾಯದ ಮಾಸ್ ಮತಗಳನ್ನು ಹೊಂದಿರುವ ಜೆಡಿಎಸ್ ಪಕ್ಷದ ಪ್ರಾಬಲ್ಯವನ್ನು ಕುಗ್ಗಿಸಲು ಸಾಧ್ಯವಾಗಿಲ್ಲ. ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವದ ಕೊರತೆಯೂ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು.
ರಾಜ್ಯದ ಶೇ.40 ಶಾಸಕರ ಭಾಗದಲ್ಲಿ ದುರ್ಬಲ
ಈ ಬಾರಿ ಶತಾಯ ಗತಾಯ 150 ಸ್ಥಾನ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಪಕ್ಷ ಹಳೆ ಮೈಸೂರಿನ 11 ಜಿಲ್ಲೆಗಳ ಕಡೆಗೆ ವಿಶೇಷ ಗಮನ ನೀಡಿದೆ. ಹಳೆ ಮೈಸೂರಿನ 11 ಜಿಲ್ಲೆಗಳಲ್ಲಿ ಒಟ್ಟು 89 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಬಿಜೆಪಿ ಗೆದ್ದಿದ್ದು 22 ಕ್ಷೇತ್ರಗಳಲ್ಲಿ. ಅಂದರೆ ಶೇಕಡಾವಾರು ಲೆಕ್ಕ ಮಾಡಿದರೆ ಶೇ. 24 ಕ್ಷೇತ್ರಗಳನ್ನು ಹಳೆ ಮೈಸೂರು ಭಾಗದಲ್ಲಿ ಜಯಿಸಿತ್ತು. ಉಳಿದ ಕರ್ನಾಟಕದ 135 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು ಬರೊಬ್ಬರಿ 82 ಶಾಸಕರನ್ನು. ಅಂದರೆ ಒಟ್ಟು ಕ್ಷೇತ್ರದ ಶೇ.60ರಲ್ಲಿ ಬಿಜೆಪಿ ಶಾಸಕರು ಜಯಗಳಿಸಿದ್ದರು.
ಕಾಂಗ್ರೆಸ್-ಜೆಡಿಎಸ್‌ನಿಂದ ಹೊರಬಂದು ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣರಾದ 17 ಶಾಸಕರು ಬಿಜೆಪಿ ಕಡೆಗೆ ವಾಲಿದರು. ಇವರು ರಾಜೀನಾಮೆ ನೀಡಿ, ಉಪಚುನಾವಣೆಯನ್ನು ಎದುರಿಸಿದರು. ಈ ಉಪಚುನಾವಣೆ ನಂತರ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಶಾಸಕರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಕೊಳ್ಳೆಗಾಲ ಶಾಸಕ ಮಹೇಶ್ ಅವರನ್ನೂ ಪರಿಗಣಿಸಿದರೆ 30 ಶಾಸಕರಿದ್ದಾರೆ. ಅಂದರೆ ಒಟ್ಟು ಶಾಸಕರಲ್ಲಿ ಶೇ.33ಕ್ಕೆ ಏರಿಕೆ ಕಂಡಿದೆ. ಆದರೆ, ಹಳೆ ಮೈಸೂರು ಭಾಗದ ಹೊರತಾಗಿ ಇತರೆ ಭಾಗದಲ್ಲಿಯೂ ಅನೇಕರು ಬಿಜೆಪಿ ಕಡೆಗೆ ವಾಲಿದ್ದರಿಂದ ಅಲ್ಲಿನ ಸ್ಟ್ರೈಕ್ ರೇಟ್ ಶೇ. 66 ಆಗಿದೆ. ಹಾಗಾಗಿ, ಇತರೆಡೆಗೆ ಹೋಲಿಸಿದರೆ ಹಳೆ ಮೈಸೂರಿನಲ್ಲಿ ಬಿಜೆಪಿ ಬಲ ಅರ್ಧದಷ್ಟು ಕಡಿಮೆ ಇದೆ.
ರಾಜ್ಯದ ಶೇ. 40 ಶಾಸಕರನ್ನು ಹೊಂದಿರುವ ಭಾಗದಲ್ಲಿ ದುರ್ಬಲವಾಗಿರುವ ಸಂಘಟನೆಯನ್ನು ಭದ್ರಪಡಿಸಿಕೊಳ್ಳದೇ ಹೋದರೆ ಟಾರ್ಗೆಟ್ 150 ಇರಿಸಿಕೊಳ್ಳುವುದೇ ನಿರರ್ಥಕ ಎನ್ನುವುದು ಪಕ್ಷಕ್ಕೆ ಮನವರಿಕೆಯಾಗಿದೆ. ಹೀಗಾಗಿ ಹೆಚ್ಚಿನ ಗಮನವನ್ನು ಕಳೆದ ಮೂರು ವರ್ಷದಿಂದಲೂ ಹಳೆ ಮೈಸೂರು ಭಾಗಕ್ಕೆ ನೀಡುತ್ತಿದೆ.
ಒಕ್ಕಲಿಗ ನಾಯಕರ ಉಗಮ
ಜೆಡಿಎಸ್ ಪ್ರಾಬಲ್ಯವನ್ನು ಕುಗ್ಗಿಸಬೇಕೆಂದರೆ ಪ್ರಮುಖವಾಗಿ ಬಿಜೆಪಿಗೆ ಬೇಕಿರುವುದು ನಾಯಕತ್ವ. ಒಕ್ಕಲಿಗ ಸಮುದಾಯದ ಅನೇಕ ನಾಯಕರು ಬಿಜೆಪಿಯಲ್ಲಿ ಇಲ್ಲಿವರೆಗೆ ಇದ್ದರಾದರೂ ಅವರು ಆ ಸಮುದಾಯದ ಪ್ರಮುಖ ನಾಯಕರಾಗಿರಲಿಲ್ಲ. ಜೆಡಿಎಸ್‌ನ ವರಿಷ್ಠರಾದ ಎಚ್.ಡಿ. ದೇವೇಗೌಡರು ಸಮುದಾಯದ ಪರಮೋಚ್ಛ ನಾಯಕರು ಎಂದರೆ ತಪ್ಪಿಲ್ಲ. ಅವರ ನಂತರ ಎಚ್.ಡಿ. ಕುಮಾರಸ್ವಾಮಿ. ನಂತರದಲ್ಲಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಈ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರಾದರೂ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರಭಾವವು ಈ ನಾಯಕತ್ವವನ್ನು ದುರ್ಬಲವಾಗಿಸಿದೆ. ಸಿದ್ದರಾಮಯ್ಯ ಅವರು ಒಕ್ಕಲಿಗ ವಿರೋಧಿ, ಅವರೇ ಕಾಂಗ್ರೆಸ್‌ನಲ್ಲಿ ಮೇಲುಗೈ ಹೊಂದಿದ್ದಾರೆ ಎಂಬ ಸಂದೇಶಗಳು ಡಿ.ಕೆ. ಶಿವಕುಮಾರ್ ಅವರ ಹಿಂದೆ ಕ್ಕಲಿಗ ಸಮುದಾಯ ಸಂಪೂರ್ಣವಾಗಿ ನಿಲ್ಲಲು ತಡೆಗೋಡೆಯಾಗಿದೆ.
ಬಿಜೆಪಿಯಲ್ಲಿ ಈ ಹಿಂದಿನಿಂದಲೂ ಬೆಂಗಳೂರು ಭಾಗದಲ್ಲಿ ಒಕ್ಕಲಿಗ ನಾಯಕರಾಗಿ ಆರ್. ಅಶೋಕ್ ಸಕ್ರಿಯವಾಗಿದ್ದಾರೆ. ಆದರೆ ಜೆಡಿಎಸ್ ಹಾರ್ಟ್‌ಲ್ಯಾಂಡ್ ಎನ್ನಬಹುದಾದ ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಗಟ್ಟಿ ಹೆಜ್ಜೆ ಇಡಲು ಆಗಿರಲಿಲ್ಲ. ಈ ಕೊರತೆಯನ್ನು ಕಳೆದ ಮೂರ್ನಾಲ್ಕು ವರ್ಷದಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ನೀಗಿಸಿದ್ದಾರೆ.
ಸ್ವತಃ ಡಿ.ಕೆ. ಸಹೋದರರು ಅನೇಕ ಬಾರಿ ಅಶ್ವತ್ಥನಾರಾಯಣ ವಿರದ್ಧ ಹರಿಹಾಯ್ದ ಪರಿಯನ್ನು ಗಮನಿಸಿದರೆ ಅಶ್ವತ್ಥನಾರಾಯಣ ಅವರು ನೆಲಮಟ್ಟದಲ್ಲಿ ಒಂದಷ್ಟು ಪ್ರಭಾವ ಬೀರುತ್ತಿದ್ದಾರೆ ಎಂದು ತಿಳಿಯಬಹುದು. ಅನೇಕ ಸ್ಥಳೀಯ ಜೆಡಿಎಸ್-ಕಾಂಗ್ರೆಸ್ ಮುಖಂಡರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಡೆಗೆ ವಾಲಿದ್ದಾರೆ.
ಮಂಡ್ಯದಲ್ಲಿ ಇಲ್ಲಿವರೆಗೆ ಖಾತೆಯನ್ನೇ ತೆರೆಯದಿದ್ದ ಬಿಜೆಪಿಗೆ ಕೆ.ಆರ್. ಪೇಟೆ ಶಾಸಕ ನಾರಾಯಣಗೌಡರು ಉಪಚುನಾವಣೆಯಲ್ಲಿ ದಾಖಲೆಯ ಜಯಗಳಿಸಿದ್ದಾರೆ. ಇತ್ತೀಚೆಗೆ ಕೆ.ಆರ್.ಪೇಟೆಯಲ್ಲಿ ವೈಭವಯುತ ಕುಂಭ ಮೇಳವನ್ನು ಆಯೋಜಿಸಿದ್ದು ನಾರಾಯಣಗೌಡರು ಈ ಭಾಗದಲ್ಲಿ ಪ್ರಾಬಲ್ಯ ಸಾಧಿಸಿದ್ದಕ್ಕೆ ಉದಾಹರಣೆ.
ಮೈಸೂರಿನ ಹಿಡಿತವನ್ನು ಇದೇ ಒಕ್ಕಲಿಗ ಸಮುದಾಯದ ನಾಯಕ ಎಸ್.ಟಿ. ಸೋಮಶೇಖರ್ ಸಾಕಷ್ಟು ಪಡೆದುಕೊಂಡಿದ್ದಾರೆ. ಈ ಬಾರಿಯಂತೂ ಅತ್ಯಂತ ವೈಭವಯುತ ದಸರಾ ಆಚರಣೆ ಮಾಡಲಾಗಿದೆ. ಹಾಸನದ ಉಸ್ತುವಾರಿಯನ್ನು ಇದೇ ಒಕ್ಕಲಿಗ ಸಮುದಾಯದ ಕೆ. ಗೋಪಾಲಯ್ಯ ವಹಿಸಿಕೊಂಡಿದ್ದಾರೆ, ಅಲ್ಲಿನ ರಾಜಕಾರಣದಲ್ಲೂ ಸಾಕಷ್ಟು ಪ್ರಭಾವವನ್ನು ಬೀರುತ್ತಿದ್ದಾರೆ. ಬಿಜೆಪಿ ದುರ್ಬಲವಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಭಾಗದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರಭಾವ ಬೀರುತ್ತಿದ್ದಾರೆ. ಬಿಜೆಪಿ ಸರ್ಕಾರದ ಜನಸಂಕಲ್ಪ ಯಾತ್ರೆಯನ್ನು ತಮ್ಮ ಪ್ರದೇಶದಿಂದಲೇ ಚಾಲನೆ ನೀಡಿ ತಾವು ಸಾಮರ್ಥ್ಯವಂತರು ಎಂದು ಹೈಕಮಾಂಡ್‌ಗೂ ತೋರ್ಪಡಿಸಿಕೊಟ್ಟಿದ್ದಾರೆ.
108 ಅಡಿ ಪ್ರತಿಮೆಯ ಪ್ರಭಾವ
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪ್ರಮುಖವಾಗಿ ಇಬ್ಬರು ಸಂತರನ್ನು ಆಹ್ವಾನಿಸಲಾಗಿತ್ತು. ಆದಿಚುಂಚನಗಿರಿ ಕ್ಷೇತ್ರದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಆದಿಚುಂಚನಗಿರಿ ಮಠವು ಒಟಾರೆಯಾಗಿ ಕ್ಕಲಿಗ ಸಮುದಾಯವನ್ನು ಪ್ರಭಾವಿಸುತ್ತದೆ. ಅದರಲ್ಲಿ, ತುಮಕೂರು ಭಾಗದಲ್ಲಿ ಪ್ರಭಾವಿಯಾಗಿರುವ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ನಂಜಾವಧೂತ ಸ್ವಾಮೀಜಿ ಆರಾಧ್ಯರು. ಇಬ್ಬರೂ ಪ್ರಭಾವಿ ಸಂತರು ವೇದಿಕೆಯ ಮೇಲಿದ್ದದ್ದು ಒಕ್ಕಲಿಗ ಸಮುದಾಯಕ್ಕೆ ಧನಾತ್ಮಕ ಸಂದೇಶವನ್ನಂತೂ ರವಾನೆ ಮಾಡಿದೆ.
ಸಾಮಾನ್ಯವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಆತ್ಮೀಯವಾಗಿ ಸ್ಮರಿಸುವ ಪ್ರಧಾನಿ ಈ ಬಾರಿ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸದೇ ಇರುವುದು ಕಣ್ತಪ್ಪಿನಿಂದ ಆಗಿರುವ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಹಳೆ ಮೈಸೂರು ಭಾಗದಲ್ಲಿ ತಾವು ಇನ್ನು ಸ್ವತಂತ್ರವಾಗಿ ಮುನ್ನುಗ್ಗುವಷ್ಟು ಸಬಲರಾಗಿದ್ದೇವೆ ಎಂಬ ಸಂದೇಶವನ್ನೂ ರವಾನೆ ಮಾಡಿದ್ದಾರೆ.
ಇನ್ನು, ಮೋದಿ ಚಾಲನೆ ನೀಡಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದೇ ಹಳೆ ಮೈಸೂರು ಭಾಗದ ಬೆಂಗಳೂರು ಗ್ರಾಮಾಂತರ-ರಾಮನಗರ-ಮಂಡ್ಯ- ಮೈಸೂರಿನಲ್ಲೇ ಹಾದು ಹೋಗುತ್ತದೆ. ಇದೆಲ್ಲವನ್ನೂ ನೋಡಿದರೆ, ಮೋದಿ ಪ್ರವಾಸ ಬೆಂಗಳೂರಿಗಷ್ಟೇ ಸೀಮತಿವಾದದ್ದು ಎಂದು ಹೇಳುವುದು ಸಾಧ್ಯವಿಲ್ಲ. ಚಾಮರಾಜನಗರದಿಂದ ತುಮಕೂರುವರೆಗಿನ ಬೃಹತ್ ಪ್ರದೇಶವನ್ನು ತಮ್ಮ ಪ್ರಭಾವ ವಲಯಕ್ಕೆ ತೆಗೆದುಕೊಳ್ಳಲು ಮೋದಿ ಸ್ಪಷ್ಟ ಹೆಜ್ಜೆ ಇಟ್ಟಿದ್ದಾರೆ. ಈ ಮೂಲಕ, ʼಗೌಡʼ ಅಂದರೆ ಒಕ್ಕಲಿಗ ಸಮುದಾಯದ ಈ ಭದ್ರಕೋಟೆಯಲ್ಲಿ ಬಿಜೆಪಿಯ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಹೇಳಲು ಅಡ್ಡಿಯಿಲ್ಲ.
ಇದನ್ನೂ ಓದಿ | BJP Target 150 | ಹಳೆ ಮೈಸೂರಿನಲ್ಲಿ ಗುರಿ ಸಾಧಿಸಲು ಬಿಜೆಪಿಯ 11 ಪ್ರಯತ್ನಗಳು