ಬೆಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ದಿನವಿಡೀ ಬೆಂಗಳೂರು ಮೋದಿ ಮೇನಿಯಾಕ್ಕೆ ಒಳಗಾಯಿತು.
ಬೆಳಗ್ಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಅಲ್ಲಿಂದ ಕನಕದಾಸ ಹಾಗೂ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ತೆರಳಿದರು. ವಿಧಾನಸೌಧದ ಹಿಂಬದಿ ದ್ವಾರ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮೋದಿ ಕಾರು ಸಾಗುತ್ತಿರುವಾಗ ಜನರ ಹರ್ಷೋದ್ಗಾರ ಮುಗಿಲುಮುಟ್ಟಿತು.
ಇಷ್ಟು ಉತ್ಸಾಹದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದನ್ನು ಕಂಡ ಮೋದಿ, ಕಾರಿನಿಂದ ಕೆಳಗಿಳಿದು ಜನರ ಹತ್ತಿರಕ್ಕೆ ತೆರಳಿ ಕೈಬೀಸಿದರು. ಸ್ವಲ್ಪ ದೂರ ನಡೆದು ಕೈಬೀಸಿ ಕಾರಿನ ಕಡೆಗೆ ತೆರಳಿದರು. ಕಾರಿನ ಮೇಲೇರಿದರಾದರೂ ಒಳಗೆ ಹೋಗದೇ ಫುಟ್‌ಬೋರ್ಡ್ ಮೇಲೆ ನಿಂತುಕೊಂಡೇ ಕೈಬೀಸುತ್ತ ಮುಂದೆ ಸಾಗಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲು ಕ್ರಾಮತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದಾಗ, ಅಲ್ಲಿಂದ ಭಾರತ್ ಗೌರವ್ ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಲು ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಿದಾಗಲೂ ಮೋದಿ… ಮೋದಿ… ಜಯಕಾರ ಮೊಳಗೊಡಗಿತು. ಎಲ್ಲ ಸಂದರ್ಭದಲ್ಲಿಯೂ ಕೈಬೀಸುವ ಮೂಲಕ ಅಭಿಮಾನಿಗಳನ್ನು ಮೋದಿ ನಿರಾಶೆಗೊಳಿಸಲಿಲ್ಲ.
ನಾಡಪ್ರಭು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೋದಿ ಸುದೀರ್ಘ ಭಾಷಣ ಮಾಡದಿದ್ದರೂ, ಅಷ್ಟೇ ಸಮಯದಲ್ಲಿ ಅನೇಕ ಬಾರಿ ಶಿಳ್ಳೆ, ಚಪ್ಪಾಳೆಯನ್ನು ಗಿಟ್ಟಿಸಿದರು. ವೇದಿಕೆಗೆ ಮೋದಿ ಆಗಮಿಸಿದಾಗಲಂತೂ ಘೋಷಣೆಗಳು ಮೇರೆ ಮೀರಿದವು.
ಸಾಮಾಜಿಕ ಜಾಲತಾಣದಲ್ಲೂ ಮೋದಿ ಆವರಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರು ತಮ್ಮ ನೆಚ್ಚಿನ ನಾಯಕನ ಫೋಟೊ, ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸಿದರು.
ಸ್ವತಃ ತಮ್ಮ ಸ್ವಿಟರ್‌ನಲ್ಲಿ ಈ ಸಂತೋಷವನ್ನು ಹಂಚಿಕೊಂಡಿರುವ ಮೋದಿ, ಈ ಕ್ರಿಯಾಶೀಲ ಬೆಂಗಳೂರಿನ ಭೇಟಿಯನ್ನು ಅತ್ಯಂತ ಸ್ಮರಣೀಯವಾಗಿಸಿದ್ದಕ್ಕೆ ಧನ್ಯವಾದಗಳು ಎಂದು ಅನೇಕ ಫೊಟೊಗಳನ್ನು ಶೇರ್ ಮಾಡಿದ್ದಾರೆ.
ಎಂದಿನಂತೆ ಮೋದಿ ಆಗಮಿಸಿದಾಗಿನ ಸಂಭ್ರಮ, ಸಂತೋಷಕ್ಕೆ ಬೆಂಗಳೂರು ಈಬಾರಿಯೂ ಸಾಕ್ಷಿಯಾಯಿತು.
ಇದನ್ನೂ ಓದಿ | Modi in Bengaluru | ಸಮಾವೇಶದಲ್ಲಿ ಚಿಕ್ಕಿಗೆ ಮುಗಿಬಿದ್ದ ಕಾರ್ಯಕರ್ತರು: ನಂಗೆ ಎಲ್ಲಿ ಎಂದು ಅಜ್ಜಿಯ ಆಕ್ರೋಶ