ಸ್ಕೈಕ್ಲಿಂಗ್ ಅಥವಾ ಸೈಕಲ್ ಸವಾರಿ ಎಂಬುದು ವ್ಯಾಯಾಮವಷ್ಟೇ ಅಲ್ಲ, ತಿರುಗಾಟದಲ್ಲಿ ಆಸಕ್ತಿ ಇರುವ ಮಂದಿಗೆ ಇದೊಂದು ಉತ್ತಮ ಮನೋಲ್ಲಾಸ ನೀಡುವ ಹಾಗೆಯೇ ನಮ್ಮನ್ನು ಫಿಟ್ ಆಗಿಯೂ ಇರಿಸಬಲ್ಲ ಏಕೈಕ ಮಾರ್ಗ. ಪ್ರಕೃತಿಯ ಸೆರಗಿನಲ್ಲಿ ಸೈಕಲ್ ತುಳಿಯುತ್ತಾ ವಿಹರಿಸುವುದೇ ಒಂದು ಮುದ ನೀಡುವ ಅನುಭೂತಿ. ದಿನವೂ ಬೆಳಗ್ಗೆದ್ದು ನಮ್ಮದೇ ನಗರದಲ್ಲಿ ಒಂದು ಹೊಸ ಜಾಗಕ್ಕೆ, ಹೊಸ ಏರಿಯಾದಲ್ಲಿ ಸೈಕಲ್ ತುಳಿಯುತ್ತಾ, ಹಕ್ಕಿಗಳ ಚಿಲಿಪಿಲಿ ಕೇಳುತ್ತಾ ಒಂದು ಗಂಟೆ ಸುತ್ತಾಡಿ ಬಂದರೆ ಆ ದಿನವಿಡೀ ಫ್ರೆಶ್. ಕೆಲಸ ಮಾಡಲು ಚೈತನ್ಯ ಕೂಡಾ. ವೀಕೆಂಡ್ ಬಂದರೆ, ದೂರದಲ್ಲೆಲ್ಲೋ ತಿರುಗಾಡಲು ಸಾಧ್ಯವಾಗದಿದ್ದರೂ ಹತ್ತಿರದಲ್ಲೇ ನಗರದಿಂದ ಕೊಂಚ ದೂರದ ಚೆಂದನೆಯ ಹಾದಿಯಲ್ಲಿ ಸೈಕಲ್ ತುಳಿಯುತ್ತಾ ದೇಹ ಮನಸ್ಸನ್ನು ಫಿಟ್ ಆಗಿಟ್ಟುಕೊಳ್ಳುವ ಆಸಕ್ತಿಯನ್ನಿಂದು ಯುವ ಜನರೂ ತೋರಿಸುತ್ತಿದ್ದಾರೆ. ಬೆಂಗಳೂರಿನೊಳಗೇ, (cycling in bangalore) ಜಯನಗರದ ಚಂದನೆಯ ಹಾದಿಗಳು, ಕಬ್ಬನ್‌ಪಾರ್ಕ್, ತುರಹಳ್ಳಿ ಸುತ್ತಮುತ್ತ, ಕನಕಪುರ ರಸ್ತೆ ಸೇರಿದಂತೆ ಅನೇಕ ಆಯ್ಕೆಗಳಿವೆ. ಆದರೂ, ನಗರದ ಗದ್ದಲದಿಂದ ಕೊಂಚ ದೂರವಿರುವ ಹಸಿರು ಪರಿಸರದಲ್ಲಿ ಬೆಂಗಳೂರಿನಲ್ಲಿದ್ದುಕೊಂಡು ವೀಕೆಂಡ್‌ನಲ್ಲಿ ಸೈಕಲ್ ಸವಾರಿ ಮಾಡಿ ಬರಬಹುದಾದ ಟಾಪ್ ೫ ಚೆಂದನೆಯ ಜಾಗಗಳ ಆಯ್ಕೆ ಇಲ್ಲಿವೆ.
೧. ಮಂಚನಬೆಲೆ ಡ್ಯಾಂ: ಮೈಸೂರು ರಸ್ತೆಯಲ್ಲಿ ಸುಮಾರು ೪೦ ಕಿಮೀ ದೂರ ಸಾಗಿದರೆ ಸಿಗುವ ಅತ್ಯದ್ಭುತ ಜಾಗ. ಸೈಕ್ಲಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಇದು ಭಾನುವಾರಕ್ಕೆ ಪರ್ಫೆಕ್ಟ್ ಆಯ್ಕೆ. ಸುಮಾರು ೪೦೦ ವರ್ಷ ಹಳೆಯದಾದ ದೊಡ್ಡಾಲದ ಮರ, ಕಣ್ಣೆತ್ತಿ ನೋಡಿದರೆ, ದೂರದಲ್ಲಿ ಕಾಣುವ ಸಾವನದುರ್ಗ ಬೆಟ್ಟವನ್ನು ಕಣ್ತುಂಬಿಕೊಂಡು, ಹಾದಿ ಬದಿಯಲ್ಲಿ ಹೊಟ್ಟೆಗೆ ಹಾಕಿಕೊಂಡು ಗುಂಪಿನಲ್ಲಿ ಸೈಕ್ಲಿಂಗ್ ಗೆಳೆಯರ ಜೊತೆ ಹೋಗಿ ಬರಬಹುದಾದ ಒಂದು ಸುಂದರ ಜಾಗವಿದು.
೨. ನಾರಾಯಣಕೆರೆ: ಅಷ್ಟಾಗಿ ಜನರಿಗೆ ಪರಿಚಿತವಲ್ಲದ, ಜನಜಂಗುಳಿಯಿಂದ ದೂರವಿರುವ, ನಗರದ ಗದ್ದಲಗಳನ್ನೆಲ್ಲ ಮರೆತು, ಚಿಲಿಪಿಲಿ ಹಕ್ಕಿಗಳ ಮಾತು ಕೇಳಬಹುದಾದ ಶಾಂತವಾದ ಪರಿಸರಕ್ಕೊಮ್ಮೆ ಸೈಕಲ್ ತುಳಿಯಲು ಮನಸ್ಸಾದರೆ ಇದು ಅಂಥವರಿಗೆ ಇಷ್ಟವಾಗಬಹುದಾದ ಸ್ಥಳ. ಸರ್ಜಾಪುರ ರಸ್ತೆಯಲ್ಲಿ ಸಾಗಿದರೆ ಚಿಕ್ಕತಿರುಪತಿ ದೇವಸ್ಥಾನದಿಂದ ಸುಮಾರು ಎರಡು ಕಿಮೀ ಮುಂದೆ ಸಾಗಿರೆ ನಾರಾಯಣಕೆರೆ ಸಿಗುತ್ತದೆ. ಒಂದರ್ಧ ದಿನ ಕಳೆಯಬಹುದಾದ ಅಥವಾ ಬೆಳ್ಳಂಬೆಳಗ್ಗೆದ್ದು ಹೋದರೆ, ಬಿಸಿಲೇರುವ ಮುನ್ನ ವಾಪಸ್ಸು ಬರಬಹುದಾದ ಭಾನುವಾರಕ್ಕೊಂದು ಹೇಳಿ ಮಾಡಿಸಿದ ಇನ್ನೊಂದು ಸ್ಪಾಟ್.
ಇದನ್ನೂ ಓದಿ: Bengaluru tour : ಬೆಂಗಳೂರು ಸುತ್ತಮುತ್ತ ನೀವು ನೋಡಲೇಬೇಕಾದ ಟಾಪ್ 10 ಪ್ರವಾಸಿ ತಾಣಗಳಿವು
೩. ಹೆಸರಘಟ್ಟ: ಹೆಸರಘಟ್ಟ ಬೆಂಗಳೂರು ನಗರದಿಂದ ಕೊಂಚ ದೂರವೆಂದು ಅನಿಸಿದರೂ, ಬೆಂಗಳೂರಿನಿಂದ ದಿನವೊಂದು ಮೀಸಲಿಟ್ಟರೆ, ಹೋಗಿ ಬರಬಹುದಾದ ಅತ್ಯಂತ ರಮಣೀಯ ಜಾಗ. ಸೈಕಲ್ ತುಳಿಯುತ್ತಾ ಈ ಜಾಗಕ್ಕೆ ಹೋಗುವ ಹಾದಿಯೇ ಒಂದು ಚಂದನೆಯ ಅನುಭವ. ಈ ಹಾದಿಗೆ ಕಾಲಿಡುತ್ತಿದ್ದಂತೆಯೇ ಖಂಡಿತವಾಗಿಯೂ ಒಂದಷ್ಟು ಮಂದಿ ಸೈಕ್ಲಿಸ್ಟ್‌ಗಳೂ ನಿಮಗೆ ಗೆಳೆಯರಾಗಬಹುದು.
೪. ರಾಜಾನಕುಂಟೆ: ಹೆಸರಘಟ್ಟಕ್ಕೆ ನೀವು ಹೋಗುತ್ತಿದ್ದರೆ ಅದಕ್ಕೆ ಮೊದಲೇ ರಾಜನಕುಂಟೆ ಸಿಗುತ್ತದೆ. ಚಂದನೆದ ದಟ್ಟ ಹಸಿರಿನ ಈ ಜಾಗ ಸೈಕ್ಲಿಸ್ಟ್‌ಗಳಿಗೂ, ಬೈಕರ್‌ಗಳಿಗೂ ಬಹಳ ಪ್ರಿಯವಾದ ಜಾಗ. ಹಕ್ಕಿಗಳ ಚಿಲಿಪಿಲಿಯ, ಗಾರ್ಡನ್ ಸಿಟಿಯ ಗೌಜಿ ಗದ್ದಲಗಳಿಂದ ದೂರವಿದುವ ಮಧುರಾನುಭೂತಿ ನೀಡುವ ಸುಂದರ ಜಾಗ.
೫. ನಂದಿ ಬೆಟ್ಟ: ನಂದಿ ಬೆಟ್ಟ ಹೊಸದಾಗಿ ಸೈಕ್ಲಿಂಗ್ ಆರಂಭಿಸಿದವರಿಗೆ ಹೇಳಿಮಾಡಿಸಿದ ಜಾಗವಲ್ಲದಿದ್ದರೂ, ಒಮ್ಮೆ ಸೈಕ್ಲಿಂಗ್‌ನ ಚಟಕ್ಕೆ ಬಿದ್ದವರಿಗೆ ಖಂಡಿತವಾಗಿಯೂ ಸೆಳೆಯಬಹುದಾದ ಬೆಟ್ಟ. ಕೊಂಚ ತ್ರಾಸದಾಯಕ ಅನುಭವ ಇದಾದರೂ, ಅದ್ಭುತ ವೀಕೆಂಡ್ ಗ್ಯಾರೆಂಟಿ. ಬೈಕರ್‌ಗಳಿಗೂ ಇದು ಮಜಾ ಕೊಡುವ ಜಾಗ. ಆದರೆ, ನಗರದ ಗದ್ದಲದಿಂದ ದೂರ ಬಂದರೆ, ಇಲ್ಲೂ ಪ್ರವಾಸಿಗರ ಹಾವಳಿ ತಪ್ಪಿದ್ದಲ್ಲ. ಹಾಗಾಗಿ ರಜಾದ ದಿನ ದೋದರೆ ಖಂಡಿತವಾಗಿಯೂ ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯವೂ ಇಲ್ಲಿದೆ.
ಇದನ್ನೂ ಓದಿ: Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು