ಬೆಂಗಳೂರು: ಬೆಳ್ಳಂಬೆಳಗ್ಗೆಯೇ ರಾಜಧಾನಿಯಲ್ಲಿ ಅತ್ಯಂತ ಆತಂಕಕಾರಿ ಮತ್ತು ಹೃದಯ ಹಿಂಡುವ ಘಟನೆ ನಡೆದಿದೆ. ತನ್ನ ಪುಟ್ಟ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ವಿದ್ಯುತ್ ಆಘಾತಕ್ಕೆ (Electricuted) ಒಳಗಾಗಿ ಮಗುವಿನೊಂದಿಗೆ ಸುಟ್ಟು ಕರಕಲಾಗಿದ್ದಾರೆ (Mother and Child dead). ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ (BESCOM Negligence) ಕ್ಕೆ ತಾಯಿ-ಮಗು ಬಲಿಯಾಗಿದ್ದಾರೆ.
ತಾಯಿ ಸೌಂದರ್ಯ ಮತ್ತು ಪುಟ್ಟ ಮಗಳು ಲಿಯಾ ಮೃತಪಟ್ಟ ದುರ್ದೈವಿಗಳು. ವೈಟ್ ಫೀಲ್ಡ್ ಸಮೀಪದ ಓಫಾರ್ಮ್ ಸರ್ಕಲ್ ಬಳಿ ದುರ್ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಸೌಂದರ್ಯ ಅವರು ತಮ್ಮ ಪತಿ ಸಂತೋಷ್ ಮತ್ತು ಮಗುವಿನೊಂದಿಗೆ ತಮಿಳುನಾಡಿನ ತಾಯಿ ಮನೆಗೆ ಹೋಗಿದ್ದರು. ಶನಿವಾರ ರಾತ್ರಿ ಅವರು ಅಲ್ಲಿಂದ ಹೊರಟು ಬೆಳಗ್ಗೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಬಸ್ಸಿನಿಂದ ಇಳಿದಿದ್ದರು. ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಬಸ್ಸಿನಿಂದ ಇಳಿದು ಸಂತೋಷ್, ಸೌಂದರ್ಯ ಪುಟ್ಟ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಅವರು ವೈಟ್ ಫೀಲ್ಡ್ ಸಮೀಪದ ಓಫಾರ್ಮ್ ಸರ್ಕಲ್ ಬಳಿ ಮನೆ ಕಡೆಗೆ ಸಾಗುತ್ತಿದ್ದರು. ಅವರು ಎ.ಕೆ ಗೋಪಾಲ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಈ ವೇಳೆ ರಸ್ತೆ ಬದಿ ತುಂಡಾಡಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಅವರಿಗೆ ಕಾಣಿಸಲಿಲ್ಲ . ಕತ್ತಲಲ್ಲಿ ಅವರು ವಿದ್ಯುತ್ ತಂತಿಯನ್ನು ತುಳಿದಿದ್ದರು. ಮತ್ತು ಒಮ್ಮೆಗೇ ವಿದ್ಯುತ್ ಅವರ ದೇಹದಲ್ಲಿ ಪ್ರವಹಿಸಿ ತಾಯಿ ಮತ್ತು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿ ಹೋಗಿದ್ದಾರೆ.
ವಿದ್ಯುತ್ ತಂತಿ ತಗುಲಿ ಹೆಂಡತಿ ಮತ್ತು ಮಗಳಿಗೆ ಬೆಂಕಿ ಹತ್ತಿಕೊಂಡಿದ್ದನ್ನು ಸಂತೋಷ್ ಕಣ್ಣಾರೆ ನೋಡಿದ್ದಾರೆ. ಅವರಿವರ ಸಹಾಯಕ್ಕೆ ಅಂಗಲಾಚಿದ್ದಾರೆ. ಆದರೆ, ಯಾರೂ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಎಲ್ಲರ ಕಣ್ಣೆದುರೇ ತಾಯಿ ಮತ್ತು ಮಗು ಕರಕಲಾದರು.
ಸೌಂದರ್ಯ ಮತ್ತು ಸಂತೋಷ್‌ಗೆ ಎರಡು ವರ್ಷದ ಹಿಂದೆ ಮಗುವಾಗಿತ್ತು. ಪುಟ್ಟ ಮಗು ಲಿಯಾಗೆ ಇನ್ನೂ ಒಂಬತ್ತು ತಿಂಗಳು. ಸೌಂದರ್ಯ ಅವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದರು. ಸಂತೋಷ್ ಕಂಪನಿಯೊಂದರಲ್ಲಿ ಉದ್ಯೋಗಿ. ಪೊಲೀಸ್ ಠಾಣೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ಬೆಸ್ಕಾಂ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಲೈನ್‌ಮ್ಯಾನ್ ಸೇರಿ ಅಸಿಸ್ಟೆಂಟ್ ಎಂಜಿನಿಯರ್ ಈಗ ಪೊಲೀಸರ ವಶದಲ್ಲಿದ್ದಾರೆ. ಅಸಿಸ್ಟೆಂಟ್ ಎಂಜಿನಿಯರ್ ಚೇತನ್, ಜ್ಯೂನಿಯರ್ ಎಂಜಿನಿಯರ್ ರಾಜಣ್ಣ ಮತ್ತು
ಸ್ಟೇಷನ್ ಆಪರೇಟರ್ ಮಂಜುನಾಥ್ ಮೇಲೆ ಐಪಿಸಿ ಸೆಕ್ಷನ್ 304 A ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಈ ಭಾಗದಲ್ಲಿ ಲೈನ್ ಟ್ರಿಪ್ ಆಗಿದ್ದು ಬೆಸ್ಕಾಂ ಸಿಬ್ಬಂದಿಯ ಗಮನಕ್ಕೆ ಬಂದಿತ್ತಾದರೂ ಅವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಆಪಾದಿಸಲಾಗಿದೆ. ಟ್ರಿಪ್ ಆಗಿದ್ದ ಲೈನ್ ಚಾರ್ಜ್ ಮಾಡುವ ವೇಳೆ ಮುಂಜಾಗ್ರತೆ ವಹಿಸದೆ ಇದ್ದುದೇ ದುರಂತಕ್ಕೆ ಕಾರಣವಾಗಿದೆ. ಎಲ್ಲಾದರೂ ಟ್ರಿಪ್ ಆಗಿದ್ದರೆ ಏನೋ ಸಮಸ್ಯೆ ಆಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಅದನ್ನು ಪತ್ತೆ ಹಚ್ಚದೆ ಒಮ್ಮೆಗೇ ಚಾರ್ಜ್ ಮಾಡಿದ್ದರಿಂದ ವಿದ್ಯುತ್ ಲೈನ್‌ನಲ್ಲಿ ವಿದ್ಯುತ್ ಪ್ರವಹಿಸಿದೆ.
ಮೃತಪಟ್ಟ ತಾಯಿ-ಮಗುವಿನ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮಗುವಿನ ದೇಹವಂತೂ ಸಂಪೂರ್ಣ ಸುಟ್ಟು ಕರಕಲಾಗಿದೆ.