ಬೆಂಗಳೂರು: ಕುಟುಂಬ ದುರಂತಗಳ ಸಾಲು ಸಾಲು ಸರಣಿಯಲ್ಲಿ ಮತ್ತೊಂದು ದುರಂತಕ್ಕೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ. ನೀರಿನ ಟಬ್‌ನಲ್ಲಿ ಹಾಲುಗಲ್ಲದ ಮಗುವನ್ನು ಮುಳುಗಿಸಿ ತಾಯಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಎಚ್ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದಲ್ಲಿ ಈ ದುರ್ಘಟನೆ ನಡೆದಿದೆ. 3 ವರ್ಷದ ಮಗು ಸಂಯುಕ್ತಳನ್ನ ನೀರಿನ ಟಬ್‌ನಲ್ಲಿ ಮುಳುಗಿಸಿ ಸಾಯಿಸಿದ ತಾಯಿ ಗಾಯತ್ರಿದೇವಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಾಳೆ.
ತಮಿಳುನಾಡು ಮೂಲದ ದಂಪತಿ ಗಾಯತ್ರಿದೇವಿ ಮತ್ತು ನರೇಂದ್ರನ್ ಅವರು ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ನರೇಂದ್ರನ್ ಖಾಸಗಿ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿದ್ದಾರೆ. ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನರೇಂದ್ರನ್ ತಾಯಿ ಕೌಟುಂಬಿಕ ಕಲಹದಿಂದ ಬೇಸತ್ತು ತಮಿಳುನಾಡಿನ ಈರೋಡ್‌ನ ನಿವಾಸದಲ್ಲಿ 20 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಊರಿಗೆ ಹೋಗಿ ಸೋಮವಾರ ಬೆಳಗ್ಗೆ ವಾಪಸ್ ಆಗಿದ್ದ ನರೇಂದ್ರನ್, ಎಷ್ಟೇ ತಟ್ಟಿದರೂ ಮನೆ ಬಾಗಿಲು ತೆರೆಯದ್ದನ್ನು ಕಂಡು ಆತಂಕಕ್ಕೆ ಈಡಾಗಿದ್ದರು. ಬಾಗಿಲು ಒಡೆದು ಒಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Family suicide: ಆತ್ಮಹತ್ಯೆ ಮಾಡಿಕೊಂಡ ಮಹೇಶ್ ಮೇಲೆ ಕೊಲೆ ದೂರು, ಅಂಬರೀಷ್ ಅಭಿಮಾನಿಯ ಆಘಾತಕಾರಿ ಸಾವು
ಮೂರುವರೆ ವರ್ಷದ ಮಗುವನ್ನು ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಗಾಯತ್ರಿ ಹತ್ಯೆ ಮಾಡಿದ್ದಾಳೆ. ನಂತರ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ಆದರೆ ಸತ್ತಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿ ಗಾಯತ್ರಿಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯತ್ರಿದೇವಿ ಡೆತ್ ನೋಟ್ ಬರೆದಿದ್ದಾಳೆ. ʼʼತನಗೆ ಬಂದಿರುವ ಸಂಕಷ್ಟವನ್ನು ನಿಭಾಯಿಸುವ ಶಕ್ತಿ ನನ್ನಲ್ಲಿ ಇಲ್ಲ. ನಾನು ಸತ್ತರೆ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹೀಗಾಗಿ ಮಗುವನ್ನು ಸಾಯಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾಳೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ 15 ದಿನದ ಅಂತರದಲ್ಲೇ ನಡೆದಿರುವ ನಾಲ್ಕನೇ ಕುಟುಂಬದ ದುರಂತ ಇದಾಗಿದೆ. ಆಗಸ್ಟ್ 4ರಂದು ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಾರ್ಟ್ಮೆಂಟ್ ಒಂದರ ನಾಲ್ಕನೇ ಮಹಡಿಯಿಂದ ಮಗುವನ್ನು ಎಸೆದು ತಾಯಿ ಕೊಂದು ಹಾಕಿದ್ದಳು. ಆಗಸ್ಟ್ 8ರಂದು ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯಲ್ಲಿ ತಾಯಿ ದಂತ ವೈದ್ಯೆ ಶೈಮಾ (39) ಹಾಗೂ ಮಗಳು ಆರಾಧನ (10) ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗಸ್ಟ್ 18ರಂದು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹೇಶ್ ಎಂಬಾತ ಹೆಂಡತಿ, ಮಗನನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ.
ಇದನ್ನೂ ಓದಿ: ಶಾಪಿಂಗ್ ಕರೆದುಕೊಂಡು ಹೋಗದಿದ್ದಕ್ಕೆ ಮುನಿಸಿಕೊಂಡ ಬಾಲಕಿ ಆತ್ಮಹತ್ಯೆ